₹5 ಲಕ್ಷ ಹಣ, ಕಾರು ವಾಪಸ್ ಕೊಡದೇ ಬೆದರಿಕೆ ಆರೋಪ ನಟ ಧನ್ವೀರ್ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಇವತ್ತು ದರ್ಶನ್ ಆಪ್ತ ಧನ್ವೀರ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಏನಿದು ಪ್ರಕರಣ? ಸ್ಟೋರಿ ಓದಿ
ಬೆಂಗಳೂರು: ನಟ ಧನ್ವೀರ್ ಮೇಲೆ ಮತ್ತೊಂದು ದೂರು ದಾಖಲಾಗಿದೆ. ಇವತ್ತು ನಟನ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಮ್ಯಾನೇಜರ್ ಕೇಸ್ ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಧನ್ವೀರ್ ವಿರುದ್ಧ ಎನ್ಸಿಆರ್ ದಾಖಲಾಗಿದೆ.
ಗೌರವ್ ಎಂಬಾತ ನೀಡಿದ ದೂರಿನ ಮೇಲೆ ಬ್ಯಾಟರಾಯನಪುರ ಪೊಲೀಸರು ಎನ್ಸಿಆರ್ ದಾಖಲು ಮಾಡಿಕೊಂಡಿದ್ದಾರೆ. ಗೌರವ್ ಅವರು ನಟ ಧನ್ವೀರ್ ಮತ್ತು ಶಶಿ ಎಂಬಾತನ ಮೇಲೆ ದೂರು ನೀಡಿದ್ದಾರೆ. ನಮ್ಮಿಂದ ಧನ್ವೀರ್ 5 ಲಕ್ಷ ರೂಪಾಯಿಗೆ ವಿಮಾನ ಟಿಕೆಟ್ ಬುಕ್ ಮಾಡಿಸಿಕೊಂಡಿದ್ದರು. ವಿಮಾನ ಟಿಕೆಟ್ ಬುಕ್ ಆದ ಬಳಿಕ ನಾವು ಹಣವನ್ನು ಕೇಳಿದೇವು.
ಆದರೆ ಅವರು ನಮಗೆ ಹಣವನ್ನು ವಾಪಸ್ ಕೊಡಲಿಲ್ಲ. ಬದಲಾಗಿ ಅವಾಚ್ಯವಾಗಿ ನಮ್ಮನ್ನು ನಿಂದಿಸ್ತಿದ್ದಾರೆ. ಅಲ್ಲದೆ ನನ್ನ ವೋಕ್ಸ್ ವ್ಯಾಗನ್ ಕಾರನ್ನ ಧನ್ವೀರ್ , ಶಶಿ ಎಂಬುವನಿಗೆ ನೀಡಿದ್ದಾರೆ. ಅದನ್ನೂ ನಮಗೆ ಧನ್ವೀರ್ ಹಿಂತಿರುಗಿಸಿಲ್ಲ. ನಮ್ಮ ಹಣ ಮತ್ತು ಕಾರನ್ನು ವಾಪ್ ನೀಡಿ ಅಂದ್ರೆ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಗೌರವ್ ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ಪೊಲೀಸರು ತನಿಖೆ ನಡೆಸ್ತಿದ್ದಾರೆ. ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ವಿಜಯಲಕ್ಷ್ಮೀ ದರ್ಶನ್ ಮ್ಯಾನೇಜರ್ ದೂರು ನೀಡಿದ್ದು ಏಕೆ..?
ಇತ್ತ ಇವತ್ತು ಇದೇ ಧನ್ವೀರ್ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇನ್ನೊಂದು ಕೇಸ್ ದಾಖಲಾಗಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ಆದ ನಾಗರಾಜ್ ಎಂಬುವವರು ಸ್ವತಃ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ನಟ ಧನ್ವೀರ್ ಅವರು ಮ್ಯಾನೇಜರ್ ನಾಗರಾಜ್ ಅವರಿಗೆ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಹಾಗೂ ಕೆಟ್ಟದಾಗಿ ಬೈದಿದ್ದಾರೆ ಎಂದು ಆರೋಪಿಸಲಾಗಿದೆ. ಧನ್ವೀರ್ ಅವರು ಬೈದಿರುವ ಆಡಿಯೋ ರೆಕಾರ್ಡಿಂಗ್ ಸಮೇತ ಮ್ಯಾನೇಜರ್ ನಾಗರಾಜ್ ಅವರು ಪೊಲೀಸರಿಗೆ ದೂರು ಒಪ್ಪಿಸಿದ್ದಾರೆ. ನಾಗರಾಜ್ ನೀಡಿದ ದೂರಿನ ಆಧಾರದ ಮೇಲೆ ಆರ್.ಆರ್.ನಗರ ಪೊಲೀಸರು ಧನ್ವೀರ್ ವಿರುದ್ಧ ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಮುಂದಿನ ವಿಚಾರಣೆಗಾಗಿ ನಟ ಧನ್ವೀರ್ ಅವರಿಗೆ ಬುಲಾವ್ (ನೋಟಿಸ್) ನೀಡಲು ಸಿದ್ಧತೆ ನಡೆಸಿದ್ದಾರೆ. ದರ್ಶನ್ ಜೈಲಿನಲ್ಲಿದ್ದ ಸಂದರ್ಭದಲ್ಲೂ ಧನ್ವೀರ್ ಅವರು ಅವರ ಕುಟುಂಬಕ್ಕೆ ನಿಕಟವಾಗಿದ್ದರು. ಈಗ ಸ್ವತಃ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ಮೇಲೆಯೇ ಧನ್ವೀರ್ ಗಲಾಟೆ ಮಾಡಿಕೊಂಡಿರುವುದು ಗಾಂಧಿನಗರದಲ್ಲಿ ಸಂಚಲನವೊಂದು ಸೃಷ್ಟಿಯಾದಂತೆ ಇದೆ.
ವಿಜಯಲಕ್ಷ್ಮೀ ವಿರುದ್ಧವೂ ಕೇಸ್!
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ನಾಗರಾಜ್ ಹಾಗೂ ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಧನ್ವೀರ್ ತಂದೆ ಪ್ರತಿದೂರು ದಾಖಲಿಸಿದ್ದಾರೆ. ನಮ್ಮ ಮನೆಗೆ ಬಂದು ರೌಡಿಗಳನ್ನ ಕರೆಸಿ ಬೆದರಿಕೆ ಹಾಕಿರೋದಾಗಿ ದೂರು ನೀಡಿದ್ದಾರೆ. ಧನ್ವೀರ್ ಜೊತೆ ಮಾತನಾಡಲು ಎಂದು ಬಂದು ಬೆದರಿಕೆ ಹಾಕಿದ್ದಾರೆ. ಗೌರವ್ ಶೆಟ್ಟಿ ಎಂಬಾತನ ಮೂಲಕ ರೌಡಿಗಳನ್ನ ಕರೆಸಿರುವ ಆರೋಪವನ್ನು ಧನ್ವೀರ್ ತಂದೆ ಮಾಡಿದ್ದಾರೆ.







