ಸಮಂತಾ ತಮ್ಮ ಆಲ್‌ಟೈಮ್ ಫೇವರಿಟ್ ಸ್ಟಾರ್ ಆಗಿ ದಳಪತಿ ವಿಜಯ್ ಹೆಸರನ್ನು ಹೇಳಿದ್ದಾರೆ. ವಿಜಯ್ ಅವರನ್ನು ತಮ್ಮ ಲಕ್ಕಿ ಚಾರ್ಮ್ ಎಂದು ಕರೆದಿರುವ ನಟಿ, ಅವರ ಜೊತೆ ನಟಿಸಿದ ಸಿನಿಮಾಗಳ ಯಶಸ್ಸಿನ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ಟಾರ್ ನಟಿ ಸಮಂತಾ ತೆಲುಗು ಹಾಗೂ ತಮಿಳು ಚಿತ್ರರಂಗದ ಹಲವು ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಹಾಗಾದರೆ, ಚಿತ್ರರಂಗದಲ್ಲಿ ಸಮಂತಾಗೆ ಅತ್ಯಂತ ಇಷ್ಟವಾದ ಹೀರೋ ಯಾರು ಗೊತ್ತಾ? ಈ ಪ್ರಶ್ನೆಗೆ ಇದೀಗ ಸ್ಯಾಮ್ ಕುತೂಹಲಕಾರಿ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲ, ತಮಗೆ ಇಷ್ಟವಾದ ಸ್ಟಾರ್ ನಟನನ್ನು ಹಾಡಿಹೊಗಳಿದ್ದಾರೆ.

ನಂದಿನಿ ರೆಡ್ಡಿ ನಿರ್ದೇಶನದ ‘ಮಾ ಇಂಟಿ ಬಂಗಾರಂ’ ಚಿತ್ರದ ಮೂಲಕ ಸಮಂತಾ ಬ್ಲಾಕ್‌ಬಸ್ಟರ್ ಯಶಸ್ಸು ಕಂಡಿದ್ದಾರೆ ಎಂಬ ವರದಿಗಳ ನಡುವೆಯೇ, ಇದೀಗ ಅವರ ಮತ್ತೊಂದು ಹೇಳಿಕೆ ಸುದ್ದಿಯಾಗಿದೆ. ಸದ್ಯ ಸಮಂತಾ ‘ಸೆಲೆಬ್ರಿಟಿ ಮಾಸ್ಟರ್‌ಶೆಫ್ ತಮಿಳು’ ಕಾರ್ಯಕ್ರಮದ ನಿರೂಪಕಿಯಾಗಿ ಕಿರುತೆರೆಯಲ್ಲೂ ಗಮನ ಸೆಳೆಯುತ್ತಿದ್ದಾರೆ. ಸೋನಿ ವಿಲಾ ಮತ್ತು ಸೋನಿ ಲಿವ್ ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದಲ್ಲಿ ತಮ್ಮದೇ ಶೈಲಿಯ ನಿರೂಪಣೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಇದೀಗ ಕಾರ್ಯಕ್ರಮದ ಮುಂಬರುವ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ಅದರಲ್ಲಿ ಆರ್‌ಜೆ ವಿಜಯ್ ಸಮಂತಾಗೆ ಒಂದು ಕುತೂಹಲಕಾರಿ ಪ್ರಶ್ನೆ ಕೇಳಿದ್ದಾರೆ. ‘ಚಿತ್ರರಂಗದಲ್ಲಿ ನಿಮ್ಮ ಆಲ್‌ಟೈಮ್ ಫೇವರಿಟ್ ಸ್ಟಾರ್ ಯಾರು?’ ಎಂದು ಕೇಳಿದಾಗ, ಸಮಂತಾ ತಕ್ಷಣವೇ ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಸಿ. ಜೋಸೆಫ್ ವಿಜಯ್ ಅವರ ಹೆಸರನ್ನು ಹೇಳಿದ್ದಾರೆ.

ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದಾಗಲೇ ಸಿನಿಮಾಗಳಿಗೆ ವಿದಾಯ ಹೇಳಿ ರಾಜಕೀಯದತ್ತ ಹೆಜ್ಜೆ ಇಡುವುದು ಸಾಮಾನ್ಯ ಸಂಗತಿಯಲ್ಲ. ಈ ನಿರ್ಧಾರ ಹಾಗೂ ವಿಜಯ್ ಅವರ ಸಾಧನೆಯನ್ನು ಸಮಂತಾ ಮೆಚ್ಚಿಕೊಂಡಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ ನಟನೊಬ್ಬ ತನ್ನ ಯಶಸ್ವಿ ಸಿನಿಮಾ ವೃತ್ತಿಜೀವನವನ್ನು ಬದಿಗಿಟ್ಟು ಜನಸೇವೆಯ ಗುರಿಯೊಂದಿಗೆ ರಾಜಕೀಯಕ್ಕೆ ಪ್ರವೇಶಿಸಿರುವುದು ಅನೇಕರಿಗೆ ಸ್ಫೂರ್ತಿ ಎಂದು ಅವರು ಹೇಳಿದ್ದಾರೆ.

‘ವಿಜಯ್ ಸರ್ ನನ್ನ ಲಕ್ಕಿ ಚಾರ್ಮ್’ ಎಂದ ಸಮಂತಾ!

ವಿಜಯ್ ಬಗ್ಗೆ ಮಾತನಾಡಿದ ಸಮಂತಾ, ಅವರ ಮೇಲಿನ ಅಭಿಮಾನವನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ. ವಿಜಯ್ ಸರ್ ಅಂದರೆ ನನಗೆ ಎಷ್ಟು ಇಷ್ಟ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅವರು ನನ್ನ ಜೀವನದ ಪಕ್ಕಾ ‘ಲಕ್ಕಿ ಚಾರ್ಮ್’. ಅವರೊಂದಿಗೆ ನಾನು ನಟಿಸಿದ ಮೂರು ಸಿನಿಮಾಗಳೂ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಬರೆದು ಬ್ಲಾಕ್‌ಬಸ್ಟರ್‌ಗಳಾಗಿವೆ. ನಟನಾಗಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ ಬಳಿಕ, ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಬೆಳ್ಳಿತೆರೆಯಿಂದ ದೂರ ಸರಿದು ಸಂಪೂರ್ಣವಾಗಿ ರಾಜಕೀಯಕ್ಕೆ ಧುಮುಕುವುದು ಅಷ್ಟು ಸುಲಭದ ನಿರ್ಧಾರವಲ್ಲ.

ಸಿನಿಮಾಗಳನ್ನು ಬದಿಗಿಟ್ಟು ಜನರ ಸೇವೆ ಮಾಡಬೇಕೆಂಬ ಉದ್ದೇಶದಿಂದ ಆಡಳಿತದತ್ತ ಹೆಜ್ಜೆ ಇಡುವುದು, ತೆರೆಮರೆಯಲ್ಲಿ ನಿಂತು ಕಠಿಣವಾಗಿ ಶ್ರಮಿಸುವುದು ನಿಜಕ್ಕೂ ದೊಡ್ಡ ವಿಚಾರ. ಪರಿಶ್ರಮ ಮತ್ತು ಛಲಕ್ಕೆ ವಿಜಯ್ ಸರ್ ಅತ್ಯುತ್ತಮ ಉದಾಹರಣೆ. ಸರಿಯಾದ ಸಮಯದಲ್ಲಿ ರಾಜಕೀಯಕ್ಕೆ ಪ್ರವೇಶಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ” ಎಂದು ಸಮಂತಾ ಹೊಗಳಿದ್ದಾರೆ. ಸಮಂತಾ ವಿಜಯ್ ಅವರನ್ನು ಹಾಡಿಹೊಗಳಿರುವ ಈ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಸಮಂತಾ-ವಿಜಯ್ ಕಾಂಬಿನೇಷನ್‌ನ ಮೂರು ಸಿನಿಮಾಗಳು ಯಾವುವು?

ಇನ್ನು ಸಮಂತಾ ಮತ್ತು ವಿಜಯ್ ಒಟ್ಟಾಗಿ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವುಗಳೆಂದರೆ ‘ಕತ್ತಿ’ (2014), ‘ತೆರಿ’ (2016) ಮತ್ತು ‘ಮೆರ್ಸಲ್’ (2017). ಈ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸು ಕಂಡಿದ್ದವು. ವರದಿಗಳ ಪ್ರಕಾರ, ಈ ಸಿನಿಮಾಗಳು ವಿಶ್ವಾದ್ಯಂತ ₹100 ಕೋಟಿಗೂ ಅಧಿಕ ಗಳಿಕೆ ದಾಖಲಿಸಿದ್ದವು. ವಿಶೇಷವಾಗಿ 2017ರಲ್ಲಿ ತೆರೆಕಂಡ ‘ಮೆರ್ಸಲ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ, ₹250 ಕೋಟಿಗೂ ಅಧಿಕ ಗಳಿಕೆ ಮಾಡಿದೆ ಎನ್ನಲಾಗಿದೆ. ಹೀಗಾಗಿ, ವಿಜಯ್ ಅವರನ್ನು ತಮ್ಮ ‘ಲಕ್ಕಿ ಚಾರ್ಮ್’ ಎಂದು ಸಮಂತಾ ಕರೆದಿರುವುದು ಅಭಿಮಾನಿಗಳ ಗಮನ ಸೆಳೆದಿದೆ.