ರಾಜಮೌಳಿ ಅವರಿಗೆ ‘ಆರ್‌ಆರ್‌ಆರ್‌’ ಯಶಸ್ಸಿನ ಬಳಿಕ ಹಾಲಿವುಡ್‌ನಿಂದ ಹಲವು ಸಿನಿಮಾ ಆಫರ್‌ಗಳು ಬಂದಿದ್ದವಂತೆ. ಆದರೆ ಸದ್ಯ ಮಹೇಶ್ ಬಾಬು ನಟನೆಯ ‘ವಾರಣಾಸಿ’ ಚಿತ್ರದ ಮೇಲೆ ಗಮನಹರಿಸಿರುವ ಜಕ್ಕಣ್ಣ..

ನಿರ್ದೇಶಕ ರಾಜಮೌಳಿ ಅವರ ಸಿನಿಮಾಗಳಿಗೆ ವಿಶ್ವಾದ್ಯಂತ ಭಾರೀ ಕ್ರೇಜ್ ಇದೆ. ‘ಬಾಹುಬಲಿ’ ಸರಣಿಯ ಮೂಲಕ ಭಾರತೀಯ ಚಿತ್ರರಂಗದ ಖ್ಯಾತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದ ಅವರು, ‘ಆರ್‌ಆರ್‌ಆರ್‌’ ಚಿತ್ರದ ಮೂಲಕ ಆಸ್ಕರ್ ವೇದಿಕೆಯಲ್ಲೂ ಭಾರತದ ಹೆಮ್ಮೆಯನ್ನು ಹೆಚ್ಚಿಸಿದ್ದರು.

ಇದೀಗ ರಾಜಮೌಳಿ ಅವರ ಮುಂದಿನ ಸಿನಿಮಾ ‘ವಾರಣಾಸಿ’ ಬಗ್ಗೆ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಮನೆಮಾಡಿದೆ. ಈ ನಡುವೆ ಹಾಲಿವುಡ್‌ನಿಂದ ತಮಗೆ ಸಾಕಷ್ಟು ಸಿನಿಮಾ ಆಫರ್‌ಗಳು ಬಂದಿದ್ದವು ಎಂದು ಜಕ್ಕಣ್ಣ ಹೇಳಿರುವುದು ಗಮನ ಸೆಳೆದಿದೆ. ಅಷ್ಟೇ ಅಲ್ಲ, ‘ವಾರಣಾಸಿ’ ಚಿತ್ರದ ಚಿತ್ರೀಕರಣದ ಬಗ್ಗೆಯೂ ಮಹತ್ವದ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

ಹಾಲಿವುಡ್‌ನಲ್ಲಿ ಸಿನಿಮಾ ಮಾಡುವ ಆಸೆ ಇದೆಯಾ? ರಾಜಮೌಳಿ ಹೇಳಿದ್ದೇನು?

‘ಬಾಹುಬಲಿ’, ‘ಆರ್‌ಆರ್‌ಆರ್‌’ ಅಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳ ಬಳಿಕ ರಾಜಮೌಳಿ ಹಾಲಿವುಡ್‌ನಲ್ಲಿ ಸಿನಿಮಾ ನಿರ್ದೇಶಿಸುತ್ತಾರಾ ಎಂಬ ಚರ್ಚೆ ಬಹಳ ದಿನಗಳಿಂದ ನಡೆಯುತ್ತಿದೆ. ‘ಆರ್‌ಆರ್‌ಆರ್‌’ ಜಾಗತಿಕ ಮಟ್ಟದಲ್ಲಿ ಯಶಸ್ಸು ಕಂಡ ಬಳಿಕ ಹಾಲಿವುಡ್‌ನಿಂದ ಅವರಿಗೆ ಅವಕಾಶಗಳು ಬಂದಿವೆಯೇ ಎಂಬ ಕುತೂಹಲವೂ ಅಭಿಮಾನಿಗಳಲ್ಲಿತ್ತು.

ಇದೀಗ ಬ್ರೆಜಿಲ್‌ನಲ್ಲಿ ನಡೆದ 50ನೇ ಸಾವೊ ಪಾಲೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ರಾಜಮೌಳಿ, ಹಾಲಿವುಡ್ ಪ್ರವೇಶದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಲ್ಲಿನ ಪ್ರಮುಖ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ, ಹಾಲಿವುಡ್‌ನಲ್ಲಿ ಸಿನಿಮಾ ನಿರ್ದೇಶಿಸುವ ಆಸೆ ತಮಗೂ ಇದೆ ಎಂದು ಹೇಳಿದ್ದಾರೆ.

ವಿಶ್ವದ ಬಹುತೇಕ ನಿರ್ದೇಶಕರಂತೆ ತಮಗೂ ಹಾಲಿವುಡ್‌ನಲ್ಲಿ ಕನಿಷ್ಠ ಒಂದು ಸಿನಿಮಾವನ್ನಾದರೂ ನಿರ್ದೇಶಿಸಬೇಕೆಂಬ ಬಲವಾದ ಆಸೆ ಇದೆ ಎಂದು ರಾಜಮೌಳಿ ತಿಳಿಸಿದ್ದಾರೆ. ಅಲ್ಲಿನ ಕೆಲಸದ ಸಂಸ್ಕೃತಿ, ನಿರ್ಮಾಣ ವ್ಯವಸ್ಥೆ ಮತ್ತು ವೃತ್ತಿಪರ ಮಾನದಂಡಗಳಿಂದ ಕಲಿಯಬೇಕಾದದ್ದು ಸಾಕಷ್ಟಿದೆ. ಹಾಲಿವುಡ್‌ನ ನಿರ್ಮಾಣ ಶೈಲಿಯಲ್ಲಿ ಕೆಲಸ ಮಾಡುವುದನ್ನು ತಾವು ಇಷ್ಟಪಡುತ್ತೇವೆ ಎಂದಿದ್ದಾರೆ.

ಹಾಲಿವುಡ್‌ನಿಂದ ಸಾಕಷ್ಟು ಆಫರ್‌ಗಳು ಬಂದಿದ್ದವಂತೆ!

‘ಆರ್‌ಆರ್‌ಆರ್‌’ ಸಿನಿಮಾ ಜಾಗತಿಕ ಮಟ್ಟದಲ್ಲಿ ಯಶಸ್ಸು ಗಳಿಸಿದ ಬಳಿಕ ಹಾಲಿವುಡ್‌ನಿಂದ ತಮಗೆ ಹಲವು ಆಫರ್‌ಗಳು ಬಂದಿದ್ದವು ಎಂದು ರಾಜಮೌಳಿ ಬಹಿರಂಗಪಡಿಸಿದ್ದಾರೆ. ಅವುಗಳಲ್ಲಿ ಕೆಲವು ಅವಕಾಶಗಳು ಇನ್ನೂ ಮುಕ್ತವಾಗಿವೆ ಎಂದೂ ತಿಳಿಸಿದ್ದಾರೆ.

ಆದರೆ, ಆ ಸಮಯದಲ್ಲಿ ತಮ್ಮ ಕನಸಿನ ಪ್ರಾಜೆಕ್ಟ್ ಆಗಿರುವ ‘ವಾರಣಾಸಿ’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರಂತೆ. ಒಂದೇ ಸಮಯದಲ್ಲಿ ಎರಡು ವಿಭಿನ್ನ ಸಿನಿಮಾಗಳ ಮೇಲೆ ಗಮನ ಹರಿಸುವುದು ತಮ್ಮ ಸ್ವಭಾವವಲ್ಲ ಎಂದು ಅವರು ಹೇಳಿದ್ದಾರೆ.

ಒಂದು ಕೆಲಸವನ್ನು ಸಂಪೂರ್ಣವಾಗಿ ಮುಗಿಸಿದ ಬಳಿಕವೇ ಮತ್ತೊಂದು ಕೆಲಸದ ಬಗ್ಗೆ ಯೋಚಿಸುವುದು ತಮ್ಮ ಅಭ್ಯಾಸ. ಹೀಗಾಗಿಯೇ ಆಗ ಹಾಲಿವುಡ್‌ನಿಂದ ಬಂದಿದ್ದ ಅವಕಾಶಗಳನ್ನು ಬದಿಗಿಡಬೇಕಾಯಿತು ಎಂದು ರಾಜಮೌಳಿ ವಿವರಿಸಿದ್ದಾರೆ.

‘ವಾರಣಾಸಿ’ ಶೂಟಿಂಗ್ ಬಗ್ಗೆ ಬಿಗ್ ಅಪ್‌ಡೇಟ್!

ಸದ್ಯ ರಾಜಮೌಳಿ ಅವರ ಸಂಪೂರ್ಣ ಗಮನ ಸೂಪರ್‌ಸ್ಟಾರ್ ಮಹೇಶ್ ಬಾಬು ನಾಯಕನಾಗಿ ನಟಿಸುತ್ತಿರುವ ‘ವಾರಣಾಸಿ’ ಚಿತ್ರದ ಮೇಲಿದೆ. ಭಾರೀ ಬಜೆಟ್‌ನಲ್ಲಿ ರೂಪುಗೊಳ್ಳುತ್ತಿರುವ ಈ ಎಪಿಕ್ ಆ್ಯಕ್ಷನ್ ಅಡ್ವೆಂಚರ್ ಚಿತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಈ ಚಿತ್ರದ ಚಿತ್ರೀಕರಣದ ಕುರಿತು ಮಾತನಾಡಿದ ರಾಜಮೌಳಿ, ಪ್ರಮುಖ ಭಾಗದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ಇನ್ನು ಕೇವಲ 10 ದಿನಗಳ ಚಿತ್ರೀಕರಣ ಮಾತ್ರ ಬಾಕಿ ಇದೆ ಎಂದು ತಿಳಿಸಿದ್ದಾರೆ. ಭಾರತೀಯ ಪುರಾಣಗಳು, ಅದ್ಭುತ ದೃಶ್ಯಗಳು ಮತ್ತು ಭಾವನಾತ್ಮಕ ಅಂಶಗಳ ಮಿಶ್ರಣದೊಂದಿಗೆ ಸಿನಿಮಾ ರೂಪುಗೊಳ್ಳುತ್ತಿದೆ ಎಂಬ ನಿರೀಕ್ಷೆಯೂ ಹೆಚ್ಚಿದೆ.

ಇನ್ನು ವರದಿಯ ಪ್ರಕಾರ, ‘ವಾರಣಾಸಿ’ ಚಿತ್ರವು 2027ರ ಏಪ್ರಿಲ್ 7ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿದ ಬಳಿಕವೇ ಹಾಲಿವುಡ್ ಪ್ರಾಜೆಕ್ಟ್‌ಗಳತ್ತ ಗಮನ ಹರಿಸುವ ಸಾಧ್ಯತೆ ಇದೆ. ಹಾಲಿವುಡ್‌ನಲ್ಲಿ ಸಿನಿಮಾ ನಿರ್ದೇಶಿಸುವ ಕನಸನ್ನು ರಾಜಮೌಳಿ ಬಿಟ್ಟಿಲ್ಲ. ಆದರೆ, ಸದ್ಯಕ್ಕೆ ಅವರ ಮೊದಲ ಆದ್ಯತೆ ‘ವಾರಣಾಸಿ’ ಚಿತ್ರವೇ ಆಗಿದೆ. ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್‌ನ ಈ ಸಿನಿಮಾ ತೆರೆಮೇಲೆ ಯಾವ ರೀತಿಯ ಮ್ಯಾಜಿಕ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.