ಜನವರಿ-ಜೂನ್ ಮಧ್ಯೆ ಸೆನ್ಸಾರ್ ಆದ ಸಿನಿಮಾಗಳು - 133

ಎ ಸರ್ಟಿಫಿಕೇಟ್ - 41

ಯುಎ ಸರ್ಟಿಫಿಕೇಟ್ - 57

ಯು ಸರ್ಟಿಫಿಕೇಟ್ -35

- ದೇಶಾದ್ರಿ ಹೊಸ್ಮನೆ

ವಯಸ್ಕರಿಗೆ ಮಾತ್ರ!

ಅಂಥ ಸಿನಿಮಾಗಳಿಗೆ ಜನ ಬರೋದಿಲ್ಲ ಅಂತ ನಿರ್ಮಾಪಕರು ಹೆದರುವ ಕಾಲವೊಂದಿತ್ತು. ಕ್ರಮೇಣ ಎ ಸರ್ಟಿಫಿಕೇಟು ಸಿಕ್ಕರೆ ಅಂಥ ಸಿನಿಮಾಗಳ ಸ್ಯಾಟ್‌ಲೈಟ್ ಮಾರಾಟಕ್ಕೆ ತೊಂದರೆ ಆಗುತ್ತದೆ ಎಂಬ ಭಯವಿತ್ತು. ಏನೇ ಆದರೂ ತಮ್ಮ ಸಿನಿಮಾಕ್ಕೆ ಎ ಸರ್ಟಿಫಿಕೇಟ್ ಸಿಗಬಾರದು ಅಂತ ನಿರ್ದೇಶಕರೂ ನಿರ್ಮಾಪಕರೂ ಶತಪ್ರಯತ್ನ ಪಡುತ್ತಿದ್ದರು. ಡಾ. ರಾಜ್‌ಕುಮಾರ್ ನಟಿಸಿದ ಎಲ್ಲ ಚಿತ್ರಗಳೂ ಯು ಸರ್ಟಿಫಿಕೇಟ್ ಪಡೆದವುಗಳೇ ಆಗಿದ್ದವು. 

ಆದರೆ ಈಗ ಪರಿಸ್ಥಿತಿ ಹೇಗಿದೆ?

2018ರ ಈ ಆರು ತಿಂಗಳಲ್ಲಿ ತೆರೆಕಂಡ ಸಿನಿಮಾಗಳು ಬರೋಬ್ಬರಿ 100. ಸೆನ್ಸಾರ್ ಸರ್ಟಿಫಿಕೇಟ್ ಪಡೆದ ಚಿತ್ರಗಳು 133. ಅಂದರೆ ತಿಂಗಳಿಗೆ ಸರಾಸರಿ 22 ಸಿನಿಮಾಗಳನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿದೆ. ಈ 133ರ ಪೈಕಿ ಯು ಸರ್ಟಿಫಿಕೇಟ್ ಪಡೆದ ಚಿತ್ರಗಳು ಕೇವಲ 35 ಮಾತ್ರ. 57 ಸಿನಿಮಾಗಳಿಗೆ 'ಯು/ಎ' ಪ್ರಮಾಣ ಪತ್ರ ಸಿಕ್ಕರೆ, 41 ಸಿನಿಮಾಗಳಿಗೆ 'ಎ' ಸರ್ಟಿಫಿಕೇಟ್ ಗಿಫ್ಟ್ ಕೊಟ್ಟಿದೆ ಸೆನ್ಸಾರ್ ಮಂಡಳಿ. ಹಾಗಿದ್ದರೆ ಕನ್ನಡದಲ್ಲಿ ಎ ಮತ್ತು ಯುಎ ಸರ್ಟಿಫಿಕೇಟ್ ಪಡೆಯುವ ಸಿನಿಮಾಗಳ ಸಂಖ್ಯೆ  ಹೆಚ್ಚುತ್ತಿದೆಯಾ?

ಹೆಚ್ಚುತ್ತಿರುವುದು ನಿಜ, ಆದರೆ ಇದಕ್ಕೆ ಕಾರಣ ಕೇವಲ ಸಿನಿಮಾಗಳಲ್ಲ, ಬದಲಾದ ಸೆನ್ಸಾರ್ ನೀತಿಯೂ ಹೌದು ಎನ್ನುತ್ತದೆ ಸೆನ್ಸಾರ್ ಮಂಡಳಿ. ಒಂದು ಕಾಲದಲ್ಲಿ ಕೇವಲ ಅಶ್ಲೀಲ ಸಿನಿಮಾಗಳಿಗೆ ಎ ಸರ್ಟಿಫಿಕೇಟ್ ನೀಡುತ್ತಿದ್ದ ಸೆನ್ಸಾರ್ ಮಂಡಳಿ ಈಗ ಕ್ರೌರ್ಯದ ವೈಭವೀಕರಣ, ರಕ್ತಪಾತ, ರೇಪ್ ದೃಶ್ಯ ಅಥವಾ ಅಶ್ಲೀಲ ಎನಿಸುವ ಡಬಲ್ ಮೀನಿಂಗ್ ಇರುವ ಸಿನಿಮಾಗಳಿಗೂ 'ಎ' ಸರ್ಟಿಫಿಕೇಟ್ ಶಿಕ್ಷೆ ವಿಧಿಸುತ್ತಿದೆ. ಅಚ್ಚರಿ ಅಂದ್ರೆ ಈ ವರ್ಷದ ಬ್ಲಾಕ್ ಬಸ್ಟರ್ ಚಿತ್ರ ಎಂದೆನಿಸಿಕೊಂಡ 'ಟಗರು' ಚಿತ್ರಕ್ಕೆ ಸೆನ್ಸಾರ್ ನೀಡಿದ್ದು 'ಎ'ಸರ್ಟಿಫಿಕೇಟ್. ಯೋಗಿ ದುನಿಯಾ, ಹುಚ್ಚ ೨, ಟ್ರಂಕ್, ನಂಜುಂಡಿ ಕಲ್ಯಾಣ, ಆಘಾತ, ಜನಗಣಮನ, ಜಿಂದಾ, ದಯವಿಟ್ಟು ಗಮನಿಸಿ.. ಹೀಗೆ ಎ ಸರ್ಟಿಫಿಕೇಟ್ ಪಡೆದಿರುವ ಚಿತ್ರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. 

ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಕೊಟ್ಟಾಗ ಸೆನ್ಸಾರ್ ನೀಡಿದ ಕಾರಣ ಕ್ರೌರ್ಯದ ವೈಭವೀಕರಣ. ಹಾಗೆಯೇ 'ಟ್ರಂಕ್' ಸಿನಿಮಾದಲ್ಲಿ ಹಾರರ್ ಜಾಸ್ತಿ ಇದೆ ಅಂತ. 'ಜಿಂದಾ'ಕ್ಕೂ ಅದೇ ಕಾರಣ. ಪ್ರತಿ ಸಿನಿಮಾಕ್ಕೂ ಒಂದೊಂದು ಕಾರಣ ನೀಡಿದೆ ಸೆನ್ಸಾರ್  ಮಂಡಳಿ. ಆದರೆ, ಶಿವರಾಜ್‌ಕುಮಾರ್ ಅಭಿನಯದ ಚಿತ್ರವೊಂದಕ್ಕೆ 'ಎ' ಸರ್ಟಿಫಿಕೇಟ್ ಸಿಕ್ಕಿದ್ದು ಇದೇ ಮೊದಲು. 

ಸೌಂಡ್ ಎಫೆಕ್ಟಿಗೂ ಎ ಸರ್ಟಿಫಿಕೇಟ್ ಕೊಡ್ತಾರೆ!

'ಸಿನಿಮಾ ನಿರ್ದೇಶಕರು, ನಿರ್ಮಾಪಕರ ವಾದವೇ ಬೇರೆಯಿದೆ. ಕಾಲ ಬದಲಾಗಿದೆ. ಕ್ರೌರ್ಯದ ಸ್ವರೂಪ ಬದಲಾಗಿದೆ. ನಿಜಘಟನೆಗಳ ಸ್ಫೂರ್ತಿಯಿಂದ ಮಾಡುವ ಸಿನಿಮಾಗಳಿಗೂ ಎ ಸರ್ಟಿಫಿಕೇಟ್ ಕೊಡುತ್ತಾರೆ. ಅದರಿಂದ ಮಕ್ಕಳು ಚಿತ್ರಮಂದಿರಕ್ಕೆ ಬರದಂತಾಗಿದೆ. ಟೀವಿ ಸೀರಿಯಲ್ಲುಗಳು ಸಿನಿಮಾಗಳಿಗಿಂತ ಹೆಚ್ಚಿನ ಕ್ರೌರ್ಯ ತೋರಿಸುತ್ತವೆ. ಅವುಗಳಿಗೆ ಸೆನ್ಸಾರ್ ಇಲ್ಲ. ಇಂಟರ್‌ನೆಟ್ ಬಂದು ಮಕ್ಕಳು ಕ್ರೌರ್ಯದ ಸಿನಿಮಾಗಳನ್ನು ಸುಲಭವಾಗಿ ನೋಡುವಂತಾಗಿದೆ. ಅಲ್ಲಿ ಯಾವ ಮಾನದಂಡವೂ ಇಲ್ಲ. ಕೇವಲ ಸಿನಿಮಾಕ್ಕೆ ಮಾತ್ರ ಈ ತೊಂದರೆ ಆಗುತ್ತಿದೆ ಅನ್ನುತ್ತಾರೆ ಬಹುತೇಕ ನಿರ್ಮಾಪಕರು. ಹಾರರ್ ಸಿನಿಮಾಗಳಲ್ಲಿ ಭಯ ಬೀಳಿಸುವ ದೃಶ್ಯಗಳ ಜತೆಗೆ ಭೀಕರವಾಗಿ ಕೇಳುವ ಸೌಂಡ್‌ಗೂ ಸೆನ್ಸಾರ್ ಆಕ್ಷೇಪ ಎತ್ತುತ್ತಿದೆ. ಹಾಗಾಗಿಯೇ 'ಟ್ರಂಕ್' ಸಿನಿಮಾಕ್ಕೆ 'ಎ' ಸರ್ಟಿಫಿಕೇಟು ಸಿಕ್ಕಿದ್ದನ್ನು ಇಲ್ಲಿ ನೋವಿನಿಂದ ಹೇಳಿಕೊಳ್ಳುತ್ತಾರೆ ನಿರ್ದೇಶಕಿ ರಿಷಿಕಾ ಶರ್ಮಾ.

ಎ ಅಂದ್ರೆ ಆ ಸಿನಿಮಾ ಅಲ್ಲ! 

ಬದಲಾದ ಕಾಲಕ್ಕೆ ತಕ್ಕಂತೆ ನಮ್ಮ ಸುತ್ತಲ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುವಾಗ ಕೆಲವು ಸನ್ನಿವೇಶಗಳನ್ನು ನೈಜವಾಗಿ ತರಬೇಕೆನ್ನುವುದು ಸಹಜ, ಆದ್ರೆ ಅಶ್ಲೀಲ ಎನಿಸುವ ಡಬಲ್ ಮೀನಿಂಗ್ ಅಥವಾ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವ ದೃಶ್ಯಗಳು ಬೇಕು ಎನ್ನುವುದನ್ನು ಒಪ್ಪಲಾಗದು. ಇದರ ಆಧಾರದ ಮೇಲೆಯೇ ಇತ್ತೀಚೆಗೆ ಸೆನ್ಸಾರ್‌ನಲ್ಲಿ 'ಎ'ಸರ್ಟಿಫಿಕೇಟ್ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಕ್ರೌರ್ಯದ ವೈಭವೀಕರಣ  ಹಾಗೂ ರೇಪ್ ದೃಶ್ಯಗಳು ಹೆಚ್ಚಿದ್ದ ಕಾರಣಕ್ಕೆ ಬಹುತೇಕ ಸಿನಿಮಾಗಳಿಗೆ 'ಎ'ಸರ್ಟಿಫಿಕೇಟ್ ನೀಡಲಾಗಿದೆ. ಆದ್ರೆ 'ಎ'ಅಂದಾಕ್ಷಣ ಇನ್ಯಾವುದೋ ಸಿನಿಮಾ ಎಂದು ಭಾವಿಸಬೇಕಿಲ್ಲ. ಈಗ ಸೆನ್ಸಾರ್‌ನ 'ಎ' ಸರ್ಟಿಫಿಕೇಟ್ ಮಾನದಂಡ ಬದಲಾಗಿದೆ. ಅದಕ್ಕೆ ಪೂರಕವಾಗಿ 'ಎ'ಸರ್ಟಿಫಿಕೇಟ್ ಸಿನಿಮಾ ಅಂದ್ರೆ ಕಂಟೆಂಟ್ ಆಧಾರದಲ್ಲಿ ನೋಡಬೇಕಿದೆ.

- ರೇಖಾ ರಾಣಿ, ಲೇಖಕಿ ಹಾಗೂ ಸೆನ್ಸಾರ್ ಮಂಡಳಿ ಸದಸ್ಯೆ