ಇತ್ತೀಚೆಗೆ ಕನ್ನಡದಲ್ಲಿ ಒಳ್ಳೆಯ ಕತೆಗಳು ಬರುತ್ತಿವೆ. ಜನ ಕೂಡನೋಡುತ್ತಿದ್ದಾರೆ ಎನ್ನುವ ಭರವಸೆ ಮತ್ತು ನಂಬಿಕೆಯಲ್ಲಿ ಕೊನೆಗೂ ಕನ್ನಡದಲ್ಲೇ ಮೊದಲ ಸಿನಿಮಾ ಮಾಡುವುದಕ್ಕೆ ನಿರ್ಧರಿಸಿದರಂತೆ. ಹಾಗೆ ತೀರ್ಮಾನ ತೆಗೆದುಕೊಂಡಿದ್ದರ ಫಲವೇ ‘ಅನುಕ್ತ’. ಈ ಚಿತ್ರದ ನಿರ್ದೇಶಕ ಅಶ್ವಥ್ ಸ್ಯಾಮ್ಯುಯೆಲ್. ಕಾರ್ತಿಕ್ ಅತ್ತಾವರ್, ಸಂತೋಷ್‌ಕುಮಾರ್ ಕೊಂಚಾಡಿ, ಸಂಪತ್ ರಾಜ್, ಸಂಗೀತಾ ಭಟ್, ಅನುಪ್ರಭಾಕರ್, ಶ್ರೀಧರ್, ಉಷಾಭಂಡಾರಿ, ಚಿದಾನಂದ ಪೂಜಾರಿ, ಅನಿಲ್ ನೀನಾಸಂ, ರಮೇಶ್ ರೈ ಚಿತ್ರದಕಲಾವಿದರು.

ಒಂದು ಕನಸು ಬಿದ್ದರೆ ಅದರರ್ಥ ಏನು, ಯಾಕೆ ಎಂದು ನೆನಪಿಸಿಕೊಳ್ಳ ಬೇಕಾಗಿದೆ. ಕರಾವಳಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನಲೆಯ ಜೊತೆ ಕುತೂಹಲ, ಥ್ರಿಲ್ಲರ್‌ನ್ನು ಪತ್ತೇದಾರಿ ಮಾದರಿಯಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಬಾಂಬೆಯ ಸೋನಿ ವಾನಿಯಲ್ಲಿ ಸಂಕಲನ, ನಿರ್ದೇಶನ ನಂತರ ದುಬೈದಲ್ಲಿ ಎಂಟು ವರ್ಷ ಸೇವೆ ಸಲ್ಲಿಸಿರುವ ಕನ್ನಡಿಗ ಅಶ್ವಥ್ ಸ್ಯಾಮ್ಯುಯೆಲ್ ಅವರಿಗೆ ಈ ಸಿನಿಮಾ ಮಾಡಿರುವುದು ತುಂಬಾ ಖುಷಿ ಕೊಟ್ಟಿದೆಯಂತೆ. ಬ್ರಹ್ಮಾವರದಲ್ಲಿರುವ 500 ವರ್ಷದ ಪುರಾತನ ಮನೆ, ಕರಾವಳಿಯ ಸುಂದರತಾಣಗಳು ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ನಾಲ್ಕು ಹಾಡುಗಳಿಗೆ ನೋಬಿನ್‌ಪೌಲ್ ಸಂಗೀತ ಇದೆ.

ಶ್ರೀಹರಿ ಬಂಗೇರ ಈ ಚಿತ್ರದ ನಿರ್ಮಾಪಕರು. ಇದೊಂದು ಹೊಸ ರೀತಿಯ ಪತ್ತೇದಾರಿ ಸಿನಿಮಾ. ತಾಂತ್ರಿಕತೆ ಚಿತ್ರದ ಜೀವಾಳ. ಕನಸು, ನ್ಯಾಯ ಹಾಗೂ ಅನ್ಯಾಯ, ದೈವಾರಾಧನೆ ಇತ್ಯಾದಿ ಅಂಶಗಳನ್ನು ಸಿನಿಮಾ ಒಳಗೊಂಡಿದೆ. ಸಿನಿಮಾ ನೋಡುತ್ತಿದ್ದರೆ ಒಂದು ಪತ್ತೇದಾರಿ ಕಾದಂಬರಿ ಓದಿದ ಅನುಭವಕ್ಕೆ ಪಾತ್ರರಾಗುತ್ತಾರೆ ಪ್ರೇಕ್ಷಕರು. ಆ ನಂಬಿಕೆಯಿಂದಲೇ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದು ತಮ್ಮ ಚಿತ್ರದ ಕುರಿತು ಹೇಳಿಕೊಂಡಿತು. ಛಾಯಾಗ್ರಹಣ ಮನೋಹರ್ ಜೋಷಿ, ಎನ್.ಎಂ.ವಿಶ್ವ ಸಂಕಲನ ಮಾಡಿದ್ದಾರೆ. ಉಡುಪಿ ಮೂಲದ ದುಬೈನಲ್ಲಿ ನೆಲೆಸಿರುವ ಶ್ರೀಹರಿ ಬಂಗೇರ ತಮ್ಮ ಮೊದಲ ನಿರ್ಮಾಣದ ಚಿತ್ರದ ಆಡಿಯೋ ಬಿಡುಗಡೆಯನ್ನು ದುಬೈನಲ್ಲೇ ಮಾಡಲು ನಿರ್ಧರಿಸಿದ್ದಾರೆ.1 ಲಕ್ಷಕ್ಕೂ ಹೆಚ್ಚು ಕನ್ನಡಿಗರನ್ನು ಸೇರಿಸಿಕೊಂಡು ಈ ಕಾರ್ಯಕ್ರಮ ಮಾಡುವುದಕ್ಕೆ ಹೊರಟಿದ್ದಾರೆ ನಿರ್ಮಾಪಕರು.