- ಕೆಂಡಪ್ರದಿ

ಅಪರಿಚಿತ

ನಿರ್ದೇಶನ: ಅನಿರುದ್ದ್ ಭಟ್‌

ತಾರಾಗಣ: ಅನಿರುದ್ದ್ ಭಟ್‌, ಸಂಜನಾ ಅರಸ್‌

ಅವಧಿ: 13.51 ನಿಮಿಷ

‘ನಾನು ಬರೆಯುವ ಪ್ರತಿಯೊಂದು ಕತೆಗೂ ಜೀವ ತುಂಬುವೆ’ ಎಂದು ಹೇಳಿಕೊಳ್ಳುವ ಯಂಗ್‌ ಆ್ಯಂಡ್‌ ಫೇಮಸ್‌ ಕತೆಗಾರ ಕಾರ್ತಿಕ್‌ ದೇಶಪಾಂಡೆ. ಕತೆಯೊಂದನ್ನು ಅರ್ಧಕ್ಕೆ ಮುಗಿಸಿ ಅದರಿಂದ ಹೊರಬರಲಾಗದೇ ಒದ್ದಾಡುವುದು, ಕಡೆಗೆ ಒದ್ದಾಟದಿಂದ ಹೊರ ಬಂದು ಕತೆಯನ್ನು ಪೂರ್ಣಗೊಳಿಸುವುದು ಈ ಕಿರುಚಿತ್ರದ ಕತೆ.

ಅನಿರುದ್ದ್ ಭಟ್‌ ‘ಅಪರಿಚಿತ’ ಕಿರುಚಿತ್ರದ ನಿರ್ದೇಶಕ ಮತ್ತು ನಾಯಕ. ತಾನು ಬರೆಯುತ್ತಿರುವ ಕತೆಯ ಪಾತ್ರವೇ ಕಣ್ಣ ಮುಂದೆ ಬಂದು ಇನ್ನಿಲ್ಲದಂತೆ ಕಾಡುತ್ತದೆ. ಇದು ವಾಸ್ತವವೋ, ಮನಸ್ಸಿನ ತಳಮಳವೋ ಎನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಲೇ ಕತೆಗಾರನೊಬ್ಬರನ ಆಂತರ್ಯವನ್ನು ಅನಾವರಣ ಮಾಡುವ ಪ್ರಯತ್ನವಿದು. ಹದಿಮೂರು ನಿಮಿಷಗಳ ಈ ಕಿರುಚಿತ್ರದಲ್ಲಿ ನಾಯಕ ಕಾರ್ತಿಕ್‌ ಮತ್ತು ನಾಯಕಿ ವೈಶಾಲಿಯೇ ಪ್ರಧಾನ ಪಾತ್ರಗಳು.

 

----

ಕೌಶಲ್ಯ ಕಲ್ಯಾಣ

ನಿರ್ದೇಶನ: ನವೀನ್‌ ಕುಮಾರ್‌ ಮತ್ತು ಗಿರೀಶ್‌

ತಾರಾಗಣ: ಶಶಿ ಕುಮಾರ್‌, ರಾಘವಿ ಗೌಡ

ಅವಧಿ: 37.11 ನಿಮಿಷ

ಇಬ್ಬರು ಪ್ರೇಮಿಗಳು, ನಡುವಲ್ಲಿ ಒಬ್ಬ ತಂದೆ. ಮೂರೇ ಪಾತ್ರಗಳ ಹಿಂದೆ ಸುತ್ತುವ ಕಿರುಚಿತ್ರ ‘ಕೌಶಲ್ಯ ಕಲ್ಯಾಣ’. ಶಶಿಕುಮಾರ್‌ ಮತ್ತು ರಾಘವಿ ಗೌಡ ಪ್ರೀತಿ ಮಾಡುತ್ತಾರೆ. ಮದುವೆಗೆ ಇನ್ನೇನು ಮೂರೇ ಹೆಜ್ಜೆ, ಹುಡುಗಿಯ ತಂದೆಯೊಂದಿಗೆ ಮಾತನಾಡಿದರೆ ಸಾಕು ಎಂದುಕೊಳ್ಳುವ ಜೋಡಿಗೆ ತಂದೆಯ ಆಸೆಗಳು ತಣ್ಣೀರೆರಚುತ್ತವೆ. ಇದು ಹಲವಾರು ಚಿತ್ರಗಳಲ್ಲಿ ಬಂದಿರುವ ಕತೆಯೇ ಆದರೂ ಇಲ್ಲಿ ನಿರ್ದೇಶಕರು ಆತುರ ಬಿದ್ದಿಲ್ಲ. ಕತೆಯಲ್ಲೊಂದು ತಿರುವಿಟ್ಟು ಕಡೆಗೆ ಪ್ರೀತಿ ಗೆಲ್ಲಿಸಿದ್ದಾರೆ.

ಒಂದು ಪ್ರೀತಿ, ಅದು ಮದುವೆಯ ಮೂಲಕ ಒಂದಾಗ ಬೇಕು ಎನ್ನುವ ಬಯಕೆ, ಅಡ್ಡ ಬರುವ ಸ್ಟೇಟಸ್‌, ಕಡೆಗೆ ಗಂಡು ಹೆಣ್ಣಿನ ಪ್ರೀತಿಗಿಂತ ತಂದೆಯ ಪ್ರೀತಿಯೇ ಮೇಲು ಎಂದು ತಿಳಿದು ತ್ಯಾಗದ ಹಾದಿ ಹಿಡಿದ ಪ್ರೇಮಿಗಳು ಅದೇ ತ್ಯಾಗದ ಕೃಪೆಯಿಂದ ಕಲ್ಯಾಣದ ಮೂಲಕ ಒಂದಾಗುವುದೇ ‘ಕೌಶಲ್ಯ ಕಲ್ಯಾಣ’.

 

------

ಕುರ್ಲಿ

ನಿರ್ದೇಶನ: ನಟೇಶ್‌ ಹೆಗಡೆ

ತಾರಾಗಣ: ನಟೇಶ್‌ ಹೆಗಡೆ, ಗುರು ಸಿದ್ಧಿ, ಸುಜಾತ ಹೆಗಡೆ ಮೊದಲಾದವರು

ಅವಧಿ: 17.26

ಕಪ್ಪು-ಬಿಳುಪಿನ ಕಿರುಚಿತ್ರ. ಅಂತೆಯೇ ಸಮಾಜದಲ್ಲಿ ತಳ ಮಟ್ಟದಲ್ಲಿಯೂ ನಡೆಯುವ ರಾಜಕಾರಣದ ಮುಖವಾಡಗಳನ್ನು ಕಡಿಮೆ ಸಮಯದಲ್ಲಿಯೇ ತೆರೆದಿಡುತ್ತದೆ. ಹೆಗಡೆಯರ ತೋಟಕ್ಕೆ ಏಡಿ ಹಿಡಿಯಲು ಹೋದ ಹುಡುಗ ಬಾಳೆಗೊನೆ ಕದ್ದ ಆರೋಪಕ್ಕೆ ಗುರಿಯಾಗುತ್ತಾನೆ. ತಾನು ಮಾಡದ ತಪ್ಪನ್ನು ತಾನೇ ಮಾಡಿದೆ ಎಂದು ಒಪ್ಪಿಕೊಳ್ಳಬೇಕಾದ ಸ್ಥಿತಿ ಆ ಚಿಕ್ಕ ಹುಡುಗನಿಗೆ ಬರುತ್ತದೆ. ಆ ಸ್ಥಿತಿ ಬರುವಂತೆ ಮಾಡುವುದು ಅವನ ಸುತ್ತಲೂ ಇರುವ ಸಮಾಜ. ಎಲ್ಲರೂ ಅವರವರ ಸ್ವಾರ್ಥಕ್ಕೆ ಹುಡುಗನನ್ನು ದಾಳವಾಗಿ ಬಳಸಿಕೊಳ್ಳುತ್ತಾರೆ. ಅಸಲಿಗೆ ಬಾಳೆಗೊನೆ ಕದ್ದು ಬಚ್ಚಿಟ್ಟಿದ್ದ ಅದೇ ಹುಡುಗನ ಅಪ್ಪ, ಹೊಲದೊಡೆಯ ಹೆಗಡೆ ಮತ್ತವನ ಮಗ ಎಲ್ಲರೂ ಈ ಆಟದ ಭಾಗಗಳೇ. ಘಟನೆಯೊಂದನ್ನು ಇಟ್ಟುಕೊಂಡು ಅದರೊಳಗಿನ ರಾಜಕಾರಣವನ್ನು ಬಾಳೆ ಹಣ್ಣನ್ನು ಸುಲಿದು ತಿನ್ನಲು ಕೊಟ್ಟಹಾಗೆ ಕಿರುಚಿತ್ರದ ಮೂಲಕ ನೀಡಿದ್ದಾರೆ ನಟೇಶ್‌ ಹೆಗಡೆ.

 

-----

ಮೀಸೆ ಮತ್ತು ಜಡೆ

ನಿರ್ದೇಶನ: ಜ್ಯೋತಿ ರಾವ್‌ ಮೋಹಿತ್‌

ತಾರಾಗಣ: ಆನಂದ್‌ ವೈಭವ್‌, ಪ್ರತೀಕ್‌ ಶೆಟ್ಟಿ, ತನುಶ್ರೀ ಗೌಡ

ಅವಧಿ: 4.14 ನಿಮಿಷ

ಇಬ್ಬರು ಲವ್ವರ್‌ಗಳು ತಮ್ಮೊಳಗಿನ ಮನಸ್ತಾಪವನ್ನು ಗೆಳೆಯನ ಮುಂದಿಡುತ್ತಾರೆ. ಹುಡುಗಿಗೆ ತನ್ನ ಪ್ರಿಯಕರನ ಮೇಲೆ ಅಸಾಧ್ಯ ಸಿಟ್ಟು. ಅದಕ್ಕೆ ಅವಳ ಬಳಿ ಪುಟಗಟ್ಟೆಲೆ ಕಾರಣಗಳಿವೆ. ಅವೆಲ್ಲವನ್ನೂ ಒಂದೂ ಬಿಡದೇ ನೋಟ್‌ ಮಾಡಿಕೊಂಡು ಬಂದಿದ್ದಾಳೆ ಕೂಡ. ಅವಳು ನೀಡುವ ಒಂದೊಂದು ಕಾರಣವೂ ಫನ್ನಿ. ನೋಡುಗನನ್ನು ನಗುವಂತೆ ಮಾಡುತ್ತವೆ. ಇಡೀ ನಾಲ್ಕು ನಿಮಿಷ ಕಳೆಯುವುದು ನಗುವಿನಲ್ಲಿಯೇ. ಬತ್‌ರ್‍ಡೇಗೆ ಆರು ನಿಮಿಷ ತಡವಾಗಿ ವಿಶ್‌ ಮಾಡುವುದೂ, ರಸ್ತೆ ಬದಿಯಲ್ಲಿ ಸೂಸು ಮಾಡುವುದು ಸೇರಿದಂತೆ ಇನ್ನೂ ಪುಟ್ಟಪುಟ್ಟಮ್ಯಾಟರ್‌ಗಳೂ ಹುಡುಗಿಯ ಕೋಪಕ್ಕೆ ಕಾರಣವಾಗುತ್ತವೆ. ಮೀಸೆ ಮತ್ತು ಜಡೆಗಳ ಜಗಳದಲ್ಲಿಯೇ ಸಾಗುವ ಈ ಕಿರುಚಿತ್ರ ಟೋಟಲಿ ಫನ್ನಿಯಾಗಿದ್ದರೂ ವಾಸ್ತವಕ್ಕೂ ಹತ್ತಿರ ಇದೆ.

 

-----

ಶ್ರೇಷ್ಠರು

ನಿರ್ದೇಶನ: ತ್ಯಾಗರಾಜ್‌

ತಾರಾಗಣ: ನವೀನ್‌, ವಿರಾಜ್‌

ಅವಧಿ: 30.02 ನಿಮಿಷ

ಭಯೋತ್ಪಾದನೆ, ಯೋಧರ ಹತ್ಯೆಗಳು, ಭಯೋತ್ಪಾದಕರ ಅಟ್ಟಹಾಸ, ರೈತರ ಸಾಲ, ರೈತರ ಆತ್ಮಹತ್ಯೆ ಇವೆಲ್ಲವೂ ಇತ್ತೀಚೆಗೆ ಮುನ್ನೆಲೆಗೆ ಬಂದು ನಿಂತಿರುವ ಚರ್ಚೆಗಳು. ದೇಶಪ್ರೇಮ ಎನ್ನುವುದು ಗಡಿಯಲ್ಲಿ ಹೋಗಿ ದೇಶ ಕಾಯುವುದರಲ್ಲಿಯೇ ಇಲ್ಲದೇ ರೈತನಾಗಿ ಸಂದರ್ಭ ಬಂದಾಗ ಹೇಗೆ ದೇಶದ ರಕ್ಷಣೆಯನ್ನು ಆಂತರಿಕವಾಗಿಯೂ ಮಾಡಬಹುದು ಎನ್ನುವುದನ್ನು ಇಲ್ಲಿ ತೋರಿಸಲಾಗಿದೆ. ಅಪ್ಪಟ ದೇಶ ಭಕ್ತಿಯ, ರೈತರ ಪರವಾದ ಕಿರುಚಿತ್ರವಿದು. ಪಕ್ಕಾ ಉತ್ತರ ಕರ್ನಾಟಕ ಭಾಷೆ, ಅಲ್ಲಿನ ನೆಲದ ಗುಣಗಳಿಲ್ಲಿ ಬಿತ್ತರಗೊಂಡಿವೆ. ಯೋಧ, ರೈತರೇ ಇಲ್ಲಿನ ಪ್ರಧಾನ ಅಂಶಗಳಾದರೂ ಇದರ ಜೊತೆಯಲ್ಲೇ ರೈತರ ಸಾಲ, ಅವರು ಅನುಭವಿಸುವ ಸಂಕಷ್ಟ, ಯೋಧ ಕುಟುಂಬದ ಹಿನ್ನೆಲೆಗಳನ್ನೂ ಇಲ್ಲಿ ತೋರಿಸಲಾಗಿದೆ.