ವಿಜಯ ಪ್ರಕಾಶ್, ಹಿನ್ನೆಲೆ ಗಾಯಕ

ಕ್ಯಾಲೆಂಡರ್ ತನ್ನ ಕೆಲಸ ಮಾಡ್ತಿರುತ್ತೆ. ಆದರೆ ನಮ್ಮ ಕೆಲಸ ಬದಲಾಗುವುದಿಲ್ಲ. ಎಂದಿನಂತೆ ನನ್ನ ಪ್ರಯಾರಿಟಿ ಯಾವಾಗಲೂ ಸಂಗೀತಕ್ಕೇ ಮೀಸಲು. 2018 ಬಹಳ ಆನಂದದಾಯಕವಾಗಿತ್ತು. ಅದೇ ರೀತಿ ಭಗವಂತ 2019ರಲ್ಲೂ ಮುನ್ನಡೆಸುತ್ತಾನೆ ಎಂಬ ನಂಬಿಕೆ ಇದೆ. ಸಮಯವನ್ನು ವ್ಯರ್ಥ ಮಾಡದೇ ಸಂಗೀತದ ಮೂಲಕ ಇನ್ನಷ್ಟು ಜನರ ಮನಸ್ಸುಗಳನ್ನು ಗೆಲ್ಲುವ ಕೆಲಸ ಮಾಡ ಬೇಕಿದೆ. 2018ರಲ್ಲಿ ಈಗಾಗಲೇ ಒಳ್ಳೊಳ್ಳೆ ಹಾಡುಗಳು ಸಿಕ್ಕಿದ್ದವು. ಕೆಜಿಎಫ್‌ನ ‘ಸಲಾಂ ರಾಕಿ ಬಾಯ್’, ನಟ ಸಾರ್ವಭೌಮದ ‘ಓಪನ್‌ದ ಬಾಟಲ್’, ಅಂಬರೀಶ್ ಅಣ್ಣನಿಗೆ ಹಾಡಿದ ‘ಹೇ ಜಲೀಲಾ’, ಅಯೋಗ್ಯದ ‘ಏನಮ್ಮಿ ಏನಮ್ಮಿ’ ಹಾಡುಗಳು ಒಳ್ಳೆ ಹೆಸರು ತಂದುಕೊಟ್ಟಿವೆ. ಬಿಡುಗಡೆಯಾಗಬೇಕಿರುವ ತೆಲುಗಿನ ರಜನೀಕಾಂತ್ ಅವರ ‘ಪೇಟಾ’ ಸಿನಿಮಾ ಹಾಗೂ ಕನ್ನಡದ ‘ಪಂಚತಂತ್ರ’ದ ‘ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ’ ಹಾಡನ್ನು ಹಾಡಿದ್ದೀನಿ. ಹೀಗೆ ಒಳ್ಳೊಳ್ಳೆ ಹಾಡುಗಳನ್ನು ಪ್ರೇಕ್ಷಕರಿಗೆ ಕೊಡುವ ಕೆಲಸ ಮಾಡುತ್ತೇನೆ.

ಸುಪ್ರಿಯಾ ಆಚಾರ್ಯ, ಗಾಯಕಿ

ಸಂಗೀತಕ್ಕೆ ಭಿನ್ನ ಆಯಾಮ ನೀಡುವಾಸೆ

2018ರಲ್ಲಿ ಸಂಗೀತದ ಕಡೆ ಹೆಚ್ಚು ಗಮನ ಕೊಡಲು ಸಾಧ್ಯವಾಗಿರಲಿಲ್ಲ. ಆದರೆ 2019ರಲ್ಲಿ ಹಾಗಾಗುವುದಿಲ್ಲ. ಎಂದಿನಂತೆ ಫ್ಯಾಮಿಲಿ ಈಸ್ ಮೈ ಫಸ್ಟ್ ಪ್ರಯಾರಿಟಿ. ಜೊತೆಗೆ ನನ್ನ ಪತಿ ಸಂಗೀತ ರಚನೆಯಲ್ಲಿ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದು ಅದಕ್ಕೆ ಕೈ ಜೋಡಿಸಲಿದ್ದೇನೆ. ಸುಗಮ ಸಂಗೀತದಲ್ಲಿ ಈಗಿರುವುದಕ್ಕಿಂತ ಬೇರೆ ಆಯಾಮಗಳನ್ನು ನೀಡುವ ಕೆಲಸ, ರೀಸರ್ಚ್ ಮಾಡುವಾಸೆ. ಸುಗಮ ಸಂಗೀತವನ್ನು ನನ್ನ ಕೈಲಾದ ಮಟ್ಟಿಗೆ ಎತ್ತರಕ್ಕೆ ಕೊಂಡೊಯ್ಯುವೆ. ಅಭಿಮಾನಿಗಳಿಗೆ ಆದಷ್ಟು ಒಳ್ಳೆಯದನ್ನು ನೀಡಬೇಕೆನ್ನುವುದು ಈ ಹೊಸ ವರ್ಷದ ಯೋಜನೆ.

ಗಣೇಶ್ ಕಾರಂತ್, ಗಾಯಕ

ಹಳೆ ಹೆಸರುನ್ನು ಉಳಿಸಬೇಕು

2019ರಲ್ಲಿ ಎನ್ನುವುದಕ್ಕಿಂತ ನನ್ನ ಜೀವನದಲ್ಲಿ ಸಂಗೀತಕ್ಕೆ ಹೆಚ್ಚು ಪ್ರಯಾರಿಟಿ ಕೊಡುತ್ತೇನೆ. ಅದು ಬಿಟ್ಟರೆ ಬೇರೇನೂ ಇಲ್ಲ. ಸಂಗೀತವೇ ನನ್ನ ಜೀವಾಳ. 2019ರಲ್ಲಿ ನನ್ನ ಬೆಸ್ಟ್ ಎಂದರೆ 2018ನೇ ವರ್ಷ ಈಗಾಗಲೇ ‘ಕನ್ನಡ ಕೋಗಿಲೆ’ ರಿಯಾಲಿಟಿ ಶೋ ಮೂಲಕ ಸಾಕಷ್ಟು ಹೆಸರು ತಂದುಕೊಟ್ಟಿದೆ. ಅದನ್ನು ಉಳಿಸಿಕೊಂಡು ಹೋಗುತ್ತಾ, ಇನ್ನಷ್ಟು ಎತ್ತರಕ್ಕೆ ಬೆಳೆಸುವ ಪ್ರಯತ್ನವಿದೆ. ಜೊತೆಗೆ ಸಂಗೀತ ಕ್ಷೇತ್ರದಲ್ಲಿಯೇ ಇನ್ನಷ್ಟು ಸಾಧನೆ ಮಾಡುವ ಆಸೆ ಇದೆ. ಅದಕ್ಕಾಗಿ ಸಾಕಷ್ಟು ಪ್ರಯತ್ನವನ್ನು ಮಾಡುತ್ತಿದ್ದೇನೆ.

ರಮೇಶ್ ಅರವಿಂದ್

ದೊಡ್ಡ ಸಿನಿಮಾ ಕಾಯುತ್ತಿದೆ

ನಾನೊಬ್ಬ ಸಿನಿಮಾ ನಟ, ನಿರ್ದೇಶಕ ಮತ್ತು ನಿರ್ಮಾಪಕ. ಹೀಗಾಗಿ ಸಿನಿಮಾಗೆ ನನ್ನ ಮೊದಲ ಆದ್ಯತೆ. ಆದರೆ, ನಟನೆ ಜತೆಗೆ ಒಂದು ದೊಡ್ಡ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಬೇಕು ಅಂದುಕೊಂಡಿದ್ದೇನೆ. ಅದು ನನ್ನ 2019ರ ನಿರೀಕ್ಷೆಯ ಬೆಸ್ಟ್ ಆಫ್ ಇಯರ್ ಎಂದುಕೊಳ್ಳುತ್ತಿದ್ದೇನೆ. ಇದರ ಜತೆಗೆ ನಾನೇ ನಿರ್ದೇಶಿಸಿದ, ಪಾರೂಲ್ ಯಾದವ್ ನಾಯಕಿಯಾಗಿ ನಟಿಸಿರುವ ‘ಬಟರ್‌ಫ್ಲೈ’ ಸಿನಿಮಾ ನನ್ನ 2019ರ ಬೆಸ್ಟ್‌ಗಳಲ್ಲಿ ಒಂದು.