ರಚಿತಾ ರಾಮ್

ಮೂರು ಸಿನಿಮಾಗಳತ್ತ ನನ್ನ ಚಿತ್ತ

2018 ಯಶಸ್ಸನ್ನು 2019ರಲ್ಲೂ ಮುಂದುವರಿಸುವುದಕ್ಕೆ ಹೆಚ್ಚಿನ ಗಮನ ಕೊಡುತ್ತೇನೆ. ಅಂದರೆ ಎಂದಿನಂತೆ ಕತೆ ಮತ್ತು ನನ್ನ ಪಾತ್ರಕ್ಕೆ ಮಹತ್ವ ಇರುವಂತಹ ಸಿನಿಮಾಗಳಲ್ಲಿ ನಟಿಸಬೇಕು ಅಂದುಕೊಂಡಿದ್ದೇನೆ. 2019ರಲ್ಲಿ ನನ್ನ ನಟನೆಯ ಮೂರು ದೊಡ್ಡ ಸಿನಿಮಾಗಳು ತೆರೆಗೆ ಬರುತ್ತಿವೆ. ಸೀತಾರಾಮ ಕಲ್ಯಾಣ, ಐ ಲವ್ ಯೂ ಹಾಗೂ ನಟಸಾರ್ವಭೌಮ. ಈ ಮೂರು ಸಿನಿಮಾಗಳು ನನ್ನ ಪಾಲಿಗೆ ಬೆಸ್ಟ್ ಸಿನಿಮಾಗಳು 

ಶಾನ್ವಿ ಶ್ರೀವಾಸ್ತವ್

ಎಲ್ಲಾ ಭಾಷೆಗಳಲ್ಲೂ ನಟಿಸುವ ಕನಸು

ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು, ಪರ್‌ಫಾರ್ಮೆನ್ಸ್ ಆರ್ಟಿಸ್ಟ್ ಆಗಿ ಗುರುತಿಸಿಕೊಳ್ಳಬೇಕೆನ್ನುವ ಆಸೆ. ‘ಅವನೇ ಶ್ರೀಮನ್ನಾರಾಯಣ’ ಚಿತ್ರ ರಿಲೀಸ್ ಆದ್ರೆ, ಪ್ರೇಕ್ಷಕರು ನನ್ನನ್ನು ಕಲಾವಿದೆಯಾಗಿ ನೋಡಬಹುದೆನ್ನುವ ವಿಶ್ವಾಸವೂ ಇದೆ. ಹಾಗೆಯೇ ಎಲ್ಲಾ ಭಾಷೆಗಳಲ್ಲೂ ಗುರುತಿಸಿಕೊಳ್ಳಬೇಕೆನ್ನುವ ಮಹದಾಸೆಯೂ ಇದೆ. ಹೊಸ ವರ್ಷದಲ್ಲಾದರೂ ಅಂತಹ ಆಫರ್ ಬರಬಹುದೆನ್ನುವ ದೊಡ್ಡ ನಿರೀಕ್ಷೆ ಹೊತ್ತಿದ್ದೇನೆ. ಹಣ ಸಂಪಾದಿಸಬೇಕು, ಮನೆ ಕಟ್ಟಬೇಕು, ಐಷಾರಾಮಿ ಕಾರು ತೆಗೆದುಕೊಳ್ಳಬೇಕು ಎನ್ನುವುದಕ್ಕಿಂತ ಸಿನಿ ಜರ್ನಿಯೊಳಗಿನ ನನ್ನ ಕನಸನ್ನು ಹೊಸ ವರ್ಷದಲ್ಲಾದರೂ ನನಸಾಗಿಸಿಕೊಳ್ಳಬೇಕೆನ್ನುವುದು ನನ್ನ ಮೊದಲ ಆದ್ಯತೆ.

ಸೋನು ಗೌಡ

ಗುಳ್ಟು ರೀತಿಯ ಸಿನಿಮಾ ನನ್ನ ಆಸೆ

2018ರಲ್ಲಿ ನನಗೆ ಹೆಸರು ತಂದುಕೊಟ್ಟ ‘ಗುಳ್ಟು’ ರೀತಿಯ ಕಮರ್ಷಿಯಲ್ ಸಿನಿಮಾಗಳ ಕಡೆ ಹೆಚ್ಚು ಕೊಡಬೇಕು ಅಂದುಕೊಂಡಿದ್ದೇನೆ. ಇನ್ನೂ ೨೦೧೯ರಲ್ಲಿ ನನ್ನ ಬಹು ನಿರೀಕ್ಷೆಯ ಅಥವಾ ಕನಸಿನ ಸಿನಿಮಾ ಮೂರು. ಫಾರ್ಚುನರ್, ಚಂಬಲ್ ಹಾಗೂ ಐ ಲವ್ ಯೂ.

ವೈಷ್ಣವಿ (ಅಗ್ನಿ ಸಾಕ್ಷಿ)

ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವೆ

ಹೊಸ ವರ್ಷಕ್ಕೆ ನನ್ನ ಭರವಸೆಯ ಸಿನಿಮಾ ‘ಗಿರ್‌ಗಿಟ್ಲೆ’ ತೆರೆಗೆ ಬರಲಿದೆ. ಅದೇ ನನಗೆ ದೊಡ್ಡ ಖುಷಿ. ‘ಅಗ್ನಿ ಸಾಕ್ಷಿ’ಗೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ನನಗೂ ಆ ಪಾತ್ರ ಸಾಕಷ್ಟು ಮೆಚ್ಚುಗೆಯಾಗಿದೆ. ಹಾಗಾಗಿ ಅದನ್ನೇ ಮುಂದುವರೆಸುತ್ತೇನೆ. ಸಿನಿಮಾಗಳಲ್ಲಿ ಕೆಲಸ ಮಾಡಬೇಕು ಎನ್ನುವ ಆಸೆ ಇದೆ. ಆದರೆ ನನ್ನ ‘ಗಿರ್‌ಗಿಟ್ಲೆ’ ಸಿನಿಮಾ ತೆರೆಗೆ ಬರುವವರೆಗೂ ಬೇರೆ ಸಿನಿಮಾಗಳ ಬಗ್ಗೆ ಯೋಚನೆ ಮಾಡಬಾರದು ಎಂದುಕೊಂಡಿದ್ದೇನೆ.2019ರಲ್ಲಿ ಒಂದಷ್ಟು ಒಳ್ಳೆಯ ಚಿತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಇದೆ. ಅದಕ್ಕೆ ತಕ್ಕಂತೆ ಅವಕಾಶಗಳೂ ಬರುತ್ತಿವೆ. ಹಾಗಾಗಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎನ್ನುವ ಪ್ಲ್ಯಾನ್ ನನ್ನದು.

ಮಾನ್ವಿತಾ ಹರೀಶ್

ಒಳ್ಳೆಯ ಸಿನಿಮಾ ಮಾಡ್ಬೇಕು

ನಾನೊಬ್ಬ ನಟಿ. ಸಿನಿಮಾವೇ ನನ್ನ ಜಗತ್ತು. ಅದೇ ನನ್ನ ಮೊದಲ ಆದ್ಯತೆ. ಒಳ್ಳೆಯ ಕತೆ ಇರಬೇಕು, ಅದರಲ್ಲಿ ಒಳ್ಳೆಯ ಪಾತ್ರ ಸಿಗಬೇಕು, ಒಂದೊಳ್ಳೆ ಸಿನಿಮಾ ಮಾಡಬೇಕು ಎನ್ನುವುದೇ ನನ್ನಾಸೆ. ಕಳೆದ ವರ್ಷ ಕೂಡ ಹಾಗೆಯೇ ಅಂದುಕೊಂಡಿದ್ದೆ. ಅದೃಷ್ಟ ಎನ್ನುವ ಹಾಗೆಯೇ ಒಳ್ಳೆಯದೇ ಆಯಿತು. ಹೊಸ ವರ್ಷಕ್ಕೂ ಅದೇ ನನ್ನ ಟಾರ್ಗೆಟ್. ಜತೆಗೆ ಒಳ್ಳೆಯ ಊಟ ಮಾಡ್ಬೇಕು, ಕಣ್ತುಂಬ ನಿದ್ದೆ ಮಾಡ್ಬೇಕು, ಮನಸ್ಸಿಗೆ ಖುಷಿ ತರುವ , ಕಣ್ಣಿಗೆ ಹಿತ ನೀಡುವ ಸುಂದರ ತಾಣಗಳಿಗೆ ಹೋಗಿ ಬರಬೇಕು, ಅಗತ್ಯಕ್ಕೆ ತಕ್ಕಷ್ಟು ಸಂಪಾದನೆ ಮಾಡ್ಬೇಕು, ಫ್ಯಾಮಿಲಿ ಜತೆಗೆ ನೆಮ್ಮೆದಿಯಿಂದ ಇರಬೇಕು, ಸಾಧ್ಯವಾದಷ್ಟು ಸಮಾಜಕ್ಕೆ ಒಳ್ಳೆಯದನ್ನು ಮಾಡ್ಬೇಕು. ಇದು ೨೦೧೯ಕ್ಕಿರುವ ನನ್ನ ಆದ್ಯತೆ.