ಬೆಂಗಳೂರು (ಆ. 27): ಹಾಲಿವುಡ್ ಸಿನಿಮಾಗಳಲ್ಲಿ ನೋಡುವ ಕತೆಯನ್ನು ಕನ್ನಡ ಸಿನಿಮಾ ಪರದೆ ಮೇಲೂ ನೋಡಿದರೆ ಹೇಗಿರುತ್ತದೆಂಬ ಕುತೂಹಲದಲ್ಲಿ ಹುಟ್ಟಿಕೊಂಡ ಸಿನಿಮಾ ‘ಉದ್ದಿಶ್ಯ’. ಹೀಗಾಗಿ ಯಾವಾಗಲೂ ಪರಭಾಷೆಯ ಚಿತ್ರಗಳೊಂದಿಗೆ ಕನ್ನಡ ಸಿನಿಮಾಗಳನ್ನು ಕಂಪೈರ್ ಮಾಡುವವರಿಗೆ ಈ ಸಿನಿಮಾ ಉತ್ತರವಾಗುತ್ತದೆಂಬ ನಂಬಿಕೆ ನಿರ್ದೇಶಕ ಹೇಮಂತ್ ಅವರ ನಂಬಿಕೆ.

ಬಿಜೆಪಿ ವಕ್ತಾರ ಹಾಗೂ ಮಾಜಿ ವಿಧಾನಪರಿಷತ್‌ನ ಸದಸ್ಯ ಅಶ್ವತ್ ನಾರಾಯಣ ಅವರ ಅಳಿಯ ಹೇಮಂತ್. ಹಾಗಂತ ಫ್ಯಾಮಿಲಿ ಸ್ಟೇಟಸ್‌ನೊಂದಿಗೆ ಸಿನಿಮ ನಿರ್ದೇಶನಕ್ಕಿಳಿದವರಲ್ಲ. ಅಮೆರಿಕಾದಲ್ಲಿ ಕೆಲಸ ಮಾಡುವಾಗಲೇ ಕಿರುಚಿತ್ರಗಳನ್ನು ನಿರ್ದೇಶಿಸುವ ಮೂಲಕ ಸಿನಿಮಾ ಪಾಠಗಳನ್ನು ಕಲಿತವರು. ಅದೇ ಅನುಭವದಲ್ಲಿ ತಮ್ಮ ನೆಲದ ಭಾಷೆಯಲ್ಲೊಂದು ಸಿನಿಮಾ ಮಾಡಬೇಕೆಂಬ ಕನಸಿನೊಂದಿಗೆ ‘ಉದ್ದಿಶ್ಯ’ ಚಿತ್ರವನ್ನು ರೂಪಿಸಿದ್ದಾರೆ.

ಅಮೆರಿಕದಲ್ಲಿರುವಾಗ ನೋಡಿದ ಹಾಲಿವುಡ್ ಸಿನಿಮಾಗಳಿಂದ ಸ್ಫೂರ್ತಿಗೊಂಡು ಈ ಚಿತ್ರ ನಿರ್ದೇಶಿಸಿದ್ದು, ಕತೆ ಕೂಡ ಇಂಗ್ಲಿಷ್ ಚಿತ್ರದ ಹಂತಕ್ಕಿರುತ್ತದೆಂಬುದು ನಿರ್ದೇಶಕರ ನಂಬಿಕೆ. ಅಂದಹಾಗೆ ಇದೇ ತಿಂಗಳು 31 ಕ್ಕೆ ತೆರೆ ಕಾಣುತ್ತಿರುವ ‘ಉದ್ದಿಶ್ಯ’ ಚಿತ್ರದ ಬಗ್ಗೆ ನಿರ್ದೇಶಕ ಹೇಮಂತ್ ಅವರು ಹೇಳುವ ಮಾತುಗಳೇನು?

1. ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶಿಸುವ ಜತೆಗೆ ಚಿತ್ರದ ನಾಯಕ ನಟನಾಗಿಯೂ ಕಾಣಿಸಿಕೊಳ್ಳುತ್ತಿದ್ದೇನೆ. ‘ಉದ್ದಿಶ್ಯ’ ಎಂದರೆ ತಮ್ಮ ಇಚ್ಛೆಯಂತೆ ನಡೆಯುವುದು. ಮನುಷ್ಯನ ಆ ಇಚ್ಛೆಗಳೇನು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.

2. ನಾನು ಅಮೆರಿಕದಲ್ಲಿ ಕಿರುಚಿತ್ರಗಳನ್ನು ಮಾಡುವಾಗ ನನಗೆ ಸಿಕ್ಕ ಕತೆ. ಅಮೆರಿಕದ ನೆಲದಲ್ಲಿ  ಸಿಕ್ಕ ಕತೆಯನ್ನು ಕನ್ನಡದ ನೇಟಿವಿಟಿಗೆ ತಕ್ಕಂತೆ ಈ ಕತೆಯನ್ನು ಬದಲಾಯಿಸಿಕೊಂಡು ಸಿನಿಮಾ ಮಾಡಲಾಗಿದೆ. ಹೀಗಾಗಿ ಕತೆಗೆ ಅಮೆರಿಕಾ ಮೂಲವಿದೆ. ಪತ್ತೆದಾರಿಯ ರೀತಿಯ ಕತೆಯಲ್ಲಿ ತನಿಖಾಧಿಕಾರಿಯ ಪಾತ್ರವನ್ನು ನಾನು ಮಾಡಿದ್ದು, ನನ್ನ ಮಾವ ಅಶ್ವತ್ ನಾರಾಯಣ ಅವರು ಚರ್ಚ್‌ನ ಫಾದರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

3. ಕಿರುತೆರೆ ಪ್ರತಿಭೆ ಅರ್ಚನಾ ಗಾಯಕ್‌ವಾಡ್ ಈ ಚಿತ್ರದ ಮುಖ್ಯ ನಾಯಕ ನಟಿ. ಇಷ್ಟು ವರ್ಷ ಹಾಕಿದ ಶ್ರಮ ಈಗ ಫಲ ಕೊಡುತ್ತಿದೆ. ಇವರೊಂದಿಗೆ ಅಕ್ಷತಾ ಶ್ರೀಧರ್, ಇಚ್ಛಾ, ಪ್ರಣಮ್ಯ ಕೂಡ ಕಾಣಿಸಿಕೊಂಡಿದ್ದಾರೆ. ಹೆಣ್ಣಿನ ಮಸ್ಸುಗಳನ್ನು ಅನಾವರಣ ಮಾಡುವುದರಿಂದ ಇಲ್ಲಿ ನಾಲ್ಕು ಮಂದಿ ನಾಯಕಿರಿದ್ದಾರೆ.

4.  ಇಂದಿನ ಹದಿಹರೆಯದ ಮನಸ್ಸುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. ವಿಶೇಷ ಅಂದರೆ ಇಂಗ್ಲಿಷ್‌ನಲ್ಲಿ ಅತ್ಯಂತ ಜನಪ್ರಿಯಗೊಂಡಿರುವ ಮತ್ತು ಅತಿ ಹೆಚ್ಚು ಮಾರಾಟವಾಗಿರುವ ಕಾದಂಬರಿಯನ್ನು ಆಧರಿಸಿ
‘ಉದ್ದಿಶ್ಯ’ ಚಿತ್ರ ಮಾಡಿದ್ದೇನೆ. ಕನ್ನಡದಲ್ಲಿ ಮೂಡಿಬರುತ್ತಿರುವ ಹಾಲಿವುಡ್ ಸಿನಿಮಾ ಅಂತ ಈ ಕಾರಣಕ್ಕೆ ನಾನು ಹೇಳಿದ್ದು. ಆ ಕಾದಂಬರಿ ಯಾವುದು ಎಂಬುದು ಸದ್ಯಕ್ಕೆ ಸಸ್ಪೆನ್ಸ್ ಆಗಿರಲಿ.

5.  ಚಿತ್ರದ ತಾಂತ್ರಿಕ ವಿಭಾಗದಲ್ಲೂ ಹಾಲಿವುಡ್‌ನಲ್ಲಿ ಸಿನಿಮಾ ಪಾಠಗಳನ್ನು ಕಲಿತವರೇ ಇದ್ದಾರೆ. ಯೂರೋಪ್‌ನಲ್ಲಿ ಕಲಿತ ಚೇತನ್ ರಘುರಾಮ್ ಅಲ್ಲಿನ ಸಾಕಷ್ಟು ಕಿರುಚಿತ್ರಗಳಿಗೆ ಛಾಯಾಗ್ರಾಹಕಾಗಿದ್ದವರು ಈಗ ‘ಉದ್ದಿಶ್ಯ’ಗೆ ಕ್ಯಾಮೆರಾ
ಹಿಡಿದ್ದಾರೆ. ಚಿತ್ರದಲ್ಲಿ ಒಂದೇ ಹಾಡು ಇದೆ. ಅದಕ್ಕೆ ಸೋಲೆಮನ್ ಸಂಗೀತವಿದೆ. ಹೀಗೆ ನುರಿತ ತಂತ್ರಜ್ಞರ ತಂಡ ಚಿತ್ರಕ್ಕೆ ಕೆಲಸ ಮಾಡಿದೆ.