ಉಗ್ರ ಮಸೂದ್ ಅಝರ್ ಅಳಿಯನಿಗೆ ಕಾಂಗ್ರೆಸ್ ಟಿಕೆಟ್| ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಯೋಗಿ ಆದಿತ್ಯನಾಥ್ ಆರೋಪ| ಸಹರಾಂಪುರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಇಮ್ರಾನ್ ಮಸೂದ್| ಇಮ್ರಾನ್ ಮಸೂದ್ ಗೂ ಮಸೂದ್ ಅಝರ್ ಗೂ ಸಂಬಂಧವಿಲ್ಲ| ಯೋಗಿ ಆದಿತ್ಯನಾಥ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಕಾಂಗ್ರೆಸ್|
ಲಕ್ನೋ(ಮಾ.26): ಉತ್ತರ ಪ್ರದೇಶದ ಸಹರಾಂಪುರ್ ಕ್ಷೇತ್ರದಿಂದ ಇಮ್ರಾನ್ ಮಸೂದ್ ಎಂಬುವವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ವಿವಾದಕ್ಕೆ ಕಾರಣವಾಗಿದೆ.
ಇಮ್ರಾನ್ ಮಸೂದ್ ಅವರನ್ನು ಮಸೂದ್ ಅಝರ್ ಅಳಿಯ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ದೇಶದ್ರೋಹಿ ಕಾಂಗ್ರೆಸ್ ಪಕ್ಷ ಉಗ್ರ ಮಸೂದ್ ಅಝರ್ ಅಳಿಯನಿಗೆ ಟಿಕೆಟ್ ನೀಡಿದೆ ಎಂದು ಬಿಂಬಿಸಲಾಗಿದೆ.
ಆದರೆ ಇಮ್ರಾನ್ ಮಸೂದ್ ಅವರಿಗೂ ಉಗ್ರ ಮಸೂದ್ ಅಝರ್ ಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದ ಯೋಗಿ ಆದಿತ್ಯನಾಥ್, ಇಮ್ರಾನ್ ಮಸೂದ್ ಉಗ್ರ ಮಸೂದ್ ಅಝರ್ ಅಳಿಯ ಎಂದು ಆರೋಪಿಸಿದ್ದರು.
ಇನ್ನು ಬಿಜೆಪಿ ಆರೋಪಕ್ಕೆ ಕೆಂಡಾಮಂಡಲವಾಗಿರುವ ಕಾಂಗ್ರೆಸ್, ಬಿಜೆಪಿ ನಾಯಕರು ಸುಳ್ಳು ಆರೋಪಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದೆ. ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಕೂಡ ಯೋಗಿ ಆದಿತ್ಯನಾಥ್ ಹೇಳಿಕೆಯನ್ನು ಖಂಡಿಸಿದ್ದಾರೆ.
