ಉಡುಪಿ ಈ ಮಾಜಿ ಯೋಧನಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದೇ ಒಂದು ಹವ್ಯಾಸ!
ಚುನಾವಣೆಯಲ್ಲಿ ಸ್ಪರ್ಧಿಸುವುದು ಈ ನಿವೃತ್ತ ಯೋಧನಿಗೆ ಹವ್ಯಾಸ| ಉಡುಪಿಯ ಮಾಜಿ ಯೋಧ ಸುಧೀರ್ ಕಾಂಚನ್ 10ನೇ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ|
ಉಡುಪಿ[ಮಾ.30]: ಚುನಾವಣೆಯಲ್ಲಿ ಸ್ಪರ್ಧಿಸುವುದು ಇವರಿಗೊಂದು ಹವ್ಯಾಸ, ಒಂದಲ್ಲ ಒಂದು ದಿನ ನಾನು ಗೆದ್ದೇ ಗೆಲ್ಲುತ್ತೇನೆ, ಸಮಾಜದ ಸೇವೆ ಮಾಡುತ್ತೇನೆ ಎನ್ನುವ ಪೂರ್ಣ ಭರವಸೆ ಇವರಿಗಿದೆ. ಅದಕ್ಕಾಗಿ ಅವರು ಇದುವರೆಗೆ ಸುಮಾರು 10ಕ್ಕೂ ಹೆಚ್ಚು ಬಾರಿ ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ.
ಇವರು ಉಡುಪಿ ತಾಲೂಕಿನ ಬೆಂಗ್ರೆ ಗ್ರಾಮದ ನಿವಾಸಿ ಸುಧೀರ್ ಕಾಂಚನ್ (63) ಭೂಸೇನೆಯಲ್ಲಿ ಸೇವೆ ಸಲ್ಲಿಸಿರುವ ಅವರು ಸ್ವಯಂನಿವೃತ್ತಿಯ, ನಂತರ ಬ್ಯಾಂಕ್ ಉದ್ಯೋಗಿಯಾಗಿ, ಈಗ ಸಮಾಜಸೇವೆಯಲ್ಲಿಯೇ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಕಂದಾಯ ಇಲಾಖೆ, ಜಿಪಂ, ತಾಪಂಗಳಲ್ಲಿ ಅವರು ಚಿರಪರಿಚಿತರು. ಅವರು 1978ರಲ್ಲಿ ಈ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿ, ಬೇಂಗ್ರೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಸದಸ್ಯರಾದರು. ನಂತರ ಮಂಡಲ ಪಂಚಾಯತ್ ಮತ್ತು ಪುನಃ ಗ್ರಾಪಂ ಚುನಾವಣೆಯಲ್ಲಿ ಗೆದ್ದು ಸದಸ್ಯರಾದರು.
ನಡುವೆ 1983ರಲ್ಲಿ ಬಂಗಾರಪ್ಪ ಅವರ ಕರ್ನಾಟಕ ಕ್ರಾಂತಿ ರಂಗದಿಂದ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ, ಸೋತರು. 1991ರಲ್ಲಿ ಉಡುಪಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತರು. 1994ರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು, ನಡುವೆ 1996ರಲ್ಲಿ ವಿಧಾನ ಪರಿಷತ್ತಿಗೂ ಸ್ಪರ್ಧಿಸಿದರು, ಆದರೇ ಛಲ ಬಿಡದೇ 2014ರಲ್ಲಿ ಮತ್ತೊಮ್ಮೆ ಲೋಕಸಭೆಗೆ ಸ್ಪರ್ಧಿಸಿದರು, 2018ರಲ್ಲಿ ಉಡುಪಿ ವಿಧಾನಸಭೆಗೆ ಸ್ಪರ್ಧಿಸಿದರು, ಆದರೇ ಗೆಲವು ಅವರಿಗೆ ಒಲಿಯಲಿಲ್ಲ, ಮಾತ್ರವಲ್ಲ ಠೇವಣಿಯೂ ಉಳಿಯಲಿಲ್ಲ.
ಮನೋರಮಾ ಮಧ್ವರಾಜ್ ಅವರು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದಾಗ, ಅವರ ಆಪ್ತ ಕಾರ್ಯದರ್ಶಿಯೂ ಆಗಿದ್ದ ಸುಧೀರ್ ಕಾಂಚನ್, ಇನ್ನೂ ನಿರಾಶರಾಗಿಲ್ಲ, ಈಗ 2019ರಲ್ಲಿ ಪುನಃ ಲೋಕಸಭೆಗೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಪ್ರತಿಯೊಬ್ಬ ಪ್ರಜೆಗೂ ಹಕ್ಕಿದೆ ಎನ್ನುವುದನ್ನು ಅವರು ಸಾಬೀತು ಮಾಡುತ್ತಿದ್ದಾರೆ.
-ಸುಭಾಶ್ಚಂದ್ರ ಎಸ್.ವಾಗ್ಳೆ
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...