ಬೆಂಗಳೂರು[ಮಾ.24]: ಶನಿವಾರ ರಾತ್ರಿ ದೆಹಲಿಯಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕ ಜೆ.ಪಿ.ನಡ್ಡಾ ಅವರು ಪತ್ರಿಕಾಗೋಷ್ಠಿ ನಡೆಸಿ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದ್ದಾರೆ. ಭಾನುವಾರ ಮೂರನೇ ಹಾಗೂ ಅಂತಿಮ ಪಟ್ಟಿಹೊರಬೀಳುವ ಸಾಧ್ಯತೆ ನಿಚ್ಚಳವಾಗಿದೆ.

ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಾದರೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಟಿಕೆಟ್‌ ಲಭಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ಆ ಕ್ಷೇತ್ರದಿಂದ ಬೇರೆಯವರನ್ನು ಕಣಕ್ಕಿಳಿಸುವ ಕುರಿತ ಪ್ರಯತ್ನವೂ ನಡೆದಿದೆ. ಈ ಬಗ್ಗೆ ಭಾನುವಾರ ಸ್ಪಷ್ಟ ಚಿತ್ರಣ ಹೊರಬೀಳುವ ನಿರೀಕ್ಷೆಯಿದೆ ಎನ್ನಲಾಗಿದೆ.

ಬೆಂ. ದಕ್ಷಿಣದಿಂದ ತೇಜಸ್ವಿ ಸೂರ್ಯ ಸ್ಪರ್ಧಿಸಿದರೆ ಕಾಂಗ್ರೆಸ್ ಸ್ಪರ್ಧಿ ಯಾರು?

ಪಕ್ಷದ ರಾಜ್ಯ ಘಟಕದಿಂದ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅನಂತಕುಮಾರ್‌ ಅವರ ಹೆಸರನ್ನು ಮಾತ್ರ ರಾಷ್ಟ್ರೀಯ ಘಟಕಕ್ಕೆ ಶಿಫಾರಸು ಮಾಡಲಾಗಿದೆ. ಆದರೆ, ಸಂಘ ಪರಿವಾರದ ಮುಖಂಡರು ತೇಜಸ್ವಿನಿ ಅವರ ಬದಲಿಗೆ ಪಕ್ಷದ ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಬಲ ಹಿಂದುತ್ವ ಪ್ರತಿಪಾದಕ ತೇಜಸ್ವಿ ಸೂರ್ಯ ಅವರ ಹೆಸರನ್ನು ವರಿಷ್ಠರ ಮುಂದೆ ಪ್ರಸ್ತಾಪಿಸಿದ್ದಾರೆ. ಹೀಗಾಗಿ, ಪರ ವಿರೋಧದ ಚರ್ಚೆ ಮುಂದುವರೆದಿರುವುದರಿಂದ ಎರಡನೇ ಪಟ್ಟಿಯಲ್ಲೂ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅಖೈರುಗೊಳ್ಳಲಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆ ಅಥವಾ ಕಣಕ್ಕಿಳಿಸಿ ನಂತರ ವಾಪಸ್‌ ಪಡೆಯಬೇಕೆ ಎಂಬ ಚರ್ಚೆ ನಡೆದಿದ್ದರೂ ರಾಜ್ಯ ಘಟಕದ ಹಿರಿಯ ನಾಯಕರು ಮಾತ್ರ ಸುಮಲತಾ ಅಂಬರೀಷ್‌ ಅವರಿಗೆ ಬೇಷರತ್ತಾಗಿ ಅಧಿಕೃತ ಬೆಂಬಲ ಘೋಷಿಸುವುದೇ ಸೂಕ್ತ ಎಂಬ ನಿಲುವನ್ನು ವರಿಷ್ಠರಿಗೆ ತಿಳಿಸಿದ್ದರು. ಅಂತಿಮವಾಗಿ ಹೈಕಮಾಂಡ್‌ ರಾಜ್ಯ ನಾಯಕರ ಮಾತಿಗೆ ಸಹಮತ ಸೂಚಿಸಿ ಬಹಿರಂಗವಾಗಿಯೇ ಸುಮಲತಾ ಅಂಬರೀಷ್‌ ಅವರನ್ನು ಬೆಂಬಲಿಸುವ ಹೇಳಿಕೆ ನೀಡಿದೆ.

ಇನ್ನು ಹಾಲಿ ಸಂಸದ ಕರಡಿ ಸಂಗಣ್ಣ ಪ್ರತಿನಿಧಿಸುವ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಯಾರಿಗೆ ಟಿಕೆಟ್‌ ನೀಡಬೇಕು ಎಂಬ ಗೊಂದಲ ಮುಂದುವರೆದಿದೆ. ಕರಡಿ ಸಂಗಣ್ಣ ಅವರ ಬದಲು ಡಾ.ಬಸವರಾಜ್‌ ಅಥವಾ ಸಿ.ವಿ.ಚಂದ್ರಶೇಖರ್‌ ಅವರಿಗೆ ಟಿಕೆಟ್‌ ನೀಡಬೇಕು ಎಂಬ ಪ್ರಸ್ತಾವನೆಯೂ ಗಂಭೀರವಾಗಿ ವರಿಷ್ಠರ ಮುಂದಿದೆ. ಈ ಬಗ್ಗೆಯೂ ಭಾನುವಾರವೇ ಸ್ಪಷ್ಟಚಿತ್ರಣ ಹೊರಬೀಳುವ ನಿರೀಕ್ಷೆಯಿದೆ.

ಅದೇ ರೀತಿ ಚಿಕ್ಕೋಡಿ ಕ್ಷೇತ್ರದಿಂದ ಅಣ್ಣಾ ಸಾಹೇಬ್‌ ಜೊಲ್ಲೆ ಮತ್ತು ಮಾಜಿ ಸಂಸದ ರಮೇಶ್‌ ಕತ್ತಿ ನಡುವೆ ಇನ್ನೂ ಅಖೈರುಗೊಳಿಸಲು ಸಾಧ್ಯವಾಗಿಲ್ಲ. ರಾಯಚೂರಿನಿಂದ ಅಮರೇಶ್‌ ನಾಯಕ್‌ ಅಥವಾ ತಿಪ್ಪರಾಜು ಹವಾಲ್ದಾರ್‌ ನಡುವೆ ಪೈಪೋಟಿ ಮುಂದುವರೆದಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅಥವಾ ಅವರ ಪುತ್ರಿ ನಿಶಾ ಯೋಗೇಶ್ವರ್‌ ಹೆಸರು ಮುಂಚೂಣಿಯಲ್ಲಿದೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ