ಮೈಸೂರು [ಮಾ.17]: ಮೈಸೂರು: ಮೈತ್ರಿ ಧರ್ಮದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಮಾಡಿಕೊಂಡಿರುವ ದೋಸ್ತಿ ಪಕ್ಷಗಳ ನಡುವೆ ಕೆಲ ಕ್ಷೇತ್ರಗಳಲ್ಲಿ ಹೊಂದಾಣಿಕೆ ಮೂಡಿಬರುತ್ತಿಲ್ಲ.

ಮಂಡ್ಯ ಹಾಗೂ ಹಾಸನದಲ್ಲಿ ದೋಸ್ತಿ ಪಕ್ಷಗಳಲ್ಲಿ ಒಮ್ಮತ ಕಂಡುಬರುತ್ತಿಲ್ಲ. ಅದರಲ್ಲೂ ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಬಿಟ್ಟು ಸುಮಲತಾ ಅಂಬರೀಶ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕರಿಗೆ ದೊಡ್ಡ ತಲೆನೋವಾಗಿದ್ದು, ಕಾಂಗ್ರೆಸ್ ನಮಗೆ ಬೆಂಬಲಿಸಿದ್ದರೆ ನಾವು ಬೇರೊಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಬೆಂಬಲಲಿಸಲ್ಲ ಎಂದು ಜೆಡಿಎಸ್ ನಾಯಕ ಬ್ಲ್ಯಾಕ್ ಮೇಲ್ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯದಲ್ಲಿ ನಮ್ಮನ್ನ ಹೇಗೆ ನಡೆಸಿಕೊಳ್ಳುತ್ತಿರೋ ಅದು ಮೈಸೂರಿನಲ್ಲಿ ಕೂಡ ಪ್ರತಿಧ್ವನಿಸಲಿದೆ ಎಂದು ಸಚಿವ ಸಾರಾ ಮಹೇಶ್ ಪರೋಕ್ಷವಾಗಿ ಕಾಂಗ್ರೆಸ್ ಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಸುಮಲತಾ ಸ್ವಾಗತಕ್ಕೆ ಕಾಂಗ್ರೆಸ್‌ ದಂಡು

ಸಾರಾ ಮಹೇಶ್ ಹೇಳಿಕೆಗೆ ಸಿದ್ದು ಕೌಂಟರ್
ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಕಾಂಗ್ರೆಸ್  ಕೈ ಕೊಟ್ರೆ, ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ನಾವು ಕೈ ಕೊಡ್ತೇವೆ ಎಂಬ ಸಚಿವ ಸಾರಾಮಹೇಶ್ ಹೇಳಿಕೆ ಸರಿಯಲ್ಲ ಎಂದು ಸಂಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪರಸ್ಪರ ನಂಬಿಕೆಯಿಂದ ಮೈತ್ರಿ ಮಾಡಿಕೊಂಡಿದ್ದೇವೆ.ಈ ರೀತಿಯ ಹೇಳಿಕೆಗಳಿಂದ ನಂಬಿಕೆ ಹಾಳಾಗುತ್ತದೆ. ನಂಬಿಕೆ ಬಗ್ಗೆ ಹೆಚ್ ಡಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ ಮಾತನಾಡಿದ್ದಾರಾ? ಅದನ್ನು ಬಿಟ್ಟು ಬೇರೆಯವರ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಸಾರಾ ಮಹೇಶ್ ಗೆ ತಿರುಗೇಟು ನೀಡಿದರು.