ತಾರಕಕ್ಕೇರಿದ ಸಿದ್ದರಾಮಯ್ಯ, ಈಶ್ವರಪ್ಪ ಟಾಕ್ ವಾರ್| ಸಿದ್ದು ಜಾತಿವಾದಿ, ನಾನು ರಾಷ್ಟ್ರೀಯವಾದಿ: ಈಶ್ವರಪ್ಪ
ಬೆಳಗಾವಿ[ಏ.04]: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜಾತಿವಾದಿಯಾಗಿದ್ದರೆ, ನಾನು ರಾಷ್ಟ್ರೀಯವಾದಿ. ಇದನ್ನು ನೇರವಾಗಿ ಹೇಳಿದರೆ ಸಿದ್ದರಾಮಯ್ಯ ಅವರಿಗೆ ಸಿಟ್ಟು ಬರುತ್ತದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ಬೆಳಗಾವಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯಗೆ ಜಾತಿ ಬಿಟ್ಟರೆ ಬೇರೆ ಗೊತ್ತಿಲ್ಲ. ಎಚ್.ವಿಶ್ವನಾಥ ಅವರಿಗೆ ಮೋಸ ಮಾಡಿರುವ ಸಿದ್ದರಾಮಯ್ಯ ಅವರು, ವಿಜಯಶಂಕರ್‌ಗೆ ಟಿಕೆಟ್ ಕೊಡಿಸಿದ ತೃಪ್ತಿಯಲ್ಲಿದ್ದಾರೆ. ಸೋಲುವ ಕ್ಷೇತ್ರಗಳಲ್ಲಿ ಕುರುಬರಿಗೆ ಟಿಕೆಟ್ ಕೊಡಿಸಿದ್ದಾರೆ. ದಾವಣಗೆರೆಯಲ್ಲಿ ಶಾಮನೂರ ಸೇರಿ ಯಾರಿಗೂ ಬೇಡವಾದ ಟಿಕೆಟ್ ಅನ್ನು ಕುರುಬರಿಗೆ ಕೊಡಿಸಿದ್ದಾರೆ. ಕುರುಬರ ಹೆಸರಲ್ಲಿ ಸಿದ್ದರಾಮಯ್ಯ ಉದ್ಧಾರ ಆಗಿದ್ದಾರೆ. ಬಿಜೆಪಿ ಅವಧಿಯಲ್ಲಿ ಹಿಂದುಳಿದ, ಅಲ್ಪಸಂಖ್ಯಾತ ಕಲ್ಯಾಣಕ್ಕೆ ಅನೇಕ ಯೋಜನೆ ತಂದಿದ್ದೇವೆ. ಸಿದ್ದರಾಮಯ್ಯ ಏನು ಮಾಡಿದ್ದಾರೆ ಹೇಳಬೇಕು. ಹಿಂದುಳಿದವರಿಗೆ ಏನು ಮಾಡಿದ್ದಾರೆ ಎಂದು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಜಾತಿ ವಿಚಾರ ಪ್ರಸ್ತಾಪಿಸಲಾಗುತ್ತಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷಗಳು ನಮ್ಮನ್ನು ಜಾತಿವಾದಿಗಳು ಎಂದು ಟೀಕಿಸುತ್ತಾರೆ. ಇದೀಗ ನಾಯ್ಡು, ಕುರುಬ, ಒಕ್ಕಲಿಗರ ಜಾತಿ ತಂದಿದ್ದು ಯಾರು? ಜಾತಿ ಬಗ್ಗೆ ಸಿದ್ದರಾಮಯ್ಯ, ಶಿವರಾಮೇಗೌಡ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡುತ್ತಾರೆ. ನಮ್ಮನ್ನು ಕೋಮುವಾದಿಗಳು ಎನ್ನುತ್ತಾರೆ. ಅವರಿಗೆ ಮತದಾರರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
