'ನಮ್ಮ ನಾಯಕನಿಗೆ ಟಿಕೆಟ್ ನೀಡಿ' ಬಿಜೆಪಿಗೆ ಹೊಸ ತಲೆ ನೋವು| ನಾಯಕರಿಗಾಗಿ ಹೊಡೆದಾಡಿಕೊಂಡ ಕಾರ್ಯಕರ್ತರು| ಟಿಕೆಟ್ ಫೈಟ್ ಗಾಗಿ ಕಪ್ಪು ಪಟ್ಟಿ ಪ್ರದರ್ಶನ!
ಪಾಟ್ನಾ[ಮಾ.26]: ಲೋಕಸಭಾ ಚುನಾವಣೆಗಾಗಿ ಬಿಹಾರದಲ್ಲಿ ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ನಡುವೆ ಸೀಟು ಹಂಚಿಕೆ ನಡೆದಿದೆ. ಆದರೀಗ ಪಕ್ಷದೊಳಗೇ ಅಸಮಾಧಾನ ಭುಗಿಲೆದ್ದಿದೆ. ಪಾಟ್ನಾದಲ್ಲಿಂದು ಬಿಜೆಪಿ ಪಕ್ಷದ ಇಬ್ಬರು ದಿಗ್ಗಜ ನಾಯಕರ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಪಾಟ್ನಾ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಕೇಂದ್ರ ಸಚಿವ ಹಾಗ ಬಿಹಾರದ ಸಾಹಿಬ್ ಕ್ಷೇತ್ರದ ಅಭ್ಯರ್ಥಿ ರವಿಶಂಕರ್ ಪ್ರಸಾದ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ 'ರವಿಶಂಕರ್ ಪ್ರಸಾದ್ ಗೋ ಬ್ಯಾಕ್' ಹಾಗೂ 'ಆರ್. ಕೆ. ಸಿನ್ಹಾ ಜಿಂದಾಬಾದ್' ಎನ್ನುವ ಘೋಷಣೆಯನ್ನೂ ಕೂಗಿದ್ದಾರೆ.
ಹೌದು ಮಂಗಳವಾರದಂದು ಪಾಟ್ನಾ ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹಾಗೂ ಬಿಜೆಪಿ ಸಂಸದ ಆರ್. ಕೆ ಸಿನ್ಹಾರವರ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ. ಆರ್. ಕೆ. ಸಿನ್ಹಾ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು ಆದರೆ ಪಕ್ಷ ಅವರಿಗೆ ಟಿಕೆಟ್ ನೀಡದಿರುವುದೇ ಬೆಂಬಲಿಗರ ಆಕ್ರೋಶಕ್ಕೆ ಕಾರಣವೆನ್ನಲಾಗಿದೆ. ಈ ಕೋಪದಿಂದಲೇ ಬೆಂಬಲಿಗರು ರವಿಶಂಕರ್ ಪ್ರಸಾದ್ ವಿರುದ್ಧ ಧ್ವನಿ ಎತ್ತಿದ್ದರು. ಖಾಸಗಿ ಭದ್ರತಾ ಏಜೆನ್ಸಿ ಹೊಂದಿರುವ ಆರ್. ಕೆ ಸಿನ್ಹಾರಿಗೆ ಬಹುದೊಡ್ಡ ಸಂಖ್ಯೆಯ ಬೆಂಬಲಿಗರಿದ್ದಾರೆ.
ಸುದ್ದಿ ಸಂಸ್ಥೆ ANI ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಈ ವಿಡಿಯೋದಲ್ಲಿ ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿರುವ ಸಿನ್ಹಾ ಬೆಂಬಲಿಗರು ಕಪ್ಪುಪಟ್ಟಿ ಪ್ರದರ್ಶಿಸುತ್ತಿರುವುದು ಗಮನಿಸಬಹುದು. ಇನ್ನು ಹೊಡೆದಾಡಿಕೊಂಡ ಸಂದರ್ಭದಲ್ಲಿ ಬೆಂಬಲಿಗರು ಅಶ್ಲೀಲ ಪದ ಬಳಕೆ ಮಾಡಿರುವುದರಿಂದ ವಿಡಿಯೋಗಳನ್ನು ಶೇರ್ ಮಾಡಿಕೊಂಡಿಲ್ಲ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
