ಬೆಂಗಳೂರು (ಮೇ. 21): ತೀವ್ರ ಕೂತೂಹಲಕಾರಿಯಾಗಿರುವ 2019ರ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನೆರಡೇ ದಿನ ಬಾಕಿ ಇದೆ. ಈ ನಡುವೆ ಭಾನುವಾರ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆಗಳು ಹೆಚ್ಚು ಸದ್ದು ಮಾಡುತ್ತಿವೆ.

ಇವಿಎಂ ಜೊತೆ ಶೇ.100ರಷ್ಟು ವಿವಿಪ್ಯಾಟ್ ಹೊಂದಾಣಿಕೆ: ಅರ್ಜಿ ತಿರಸ್ಕರಿಸಿದ ಸುಪ್ರೀಂ!

ಎನ್‌ಡಿಎಯೇ ಅಭೂತಪೂರ್ವ ಬಹುಮತ ಪಡೆಯುತ್ತದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಸಮೀಕ್ಷೆಗಳು ಫಲಿತಾಂಶದ ಕನ್ನಡಿ ಎಂಬ ವಾದ ಒಂದೆಡೆಯಾದರೆ, ಇವು ನಂಬಲರ್ಹವಲ್ಲ, ಇಂಥ ಸಮೀಕ್ಷೆಗಳು ತಲೆಕೆಳಗಾದ ಸಾಕಷ್ಟುಉದಾಹರಣೆಗಳಿವೆ ಎಂದು ಬೊಟ್ಟು ಮಾಡಿ ತೋರಿಸುವವರೂ ಇದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾ ಸಮೀಕ್ಷೆಗಳನ್ನು ಅರ್ಥೈಸಿಕೊಳ್ಳುವುದು ಹೇಗೆ ಎಂಬ ಕಿರು ಮಾಹಿತಿ ಇಲ್ಲಿದೆ.

ಸಮೀಕ್ಷೆಗಳು ವಿಶ್ವಾಸಾರ್ಹವೇ?

ವೈವಿಧ್ಯತೆ ಇರುವ, ಅಸಂಖ್ಯಾತ ರಾಜಕೀಯ ಪಕ್ಷಗಳು ನೆಲೆಯೂರಿರುವ ಭಾರತದಲ್ಲಿ ಚುನಾವಣೋತ್ತರ ಸಮೀಕ್ಷೆಗಳನ್ನು ಪೂರ್ತಿ ನಂಬುವಂತಿಲ್ಲ. ಏಕೆಂದರೆ ದೇಶದ ಯಾವುದೋ ಮೂಲೆಯ ಅಥವಾ ಅತಿ ಚಿಕ್ಕ ಸಂಖ್ಯೆಯ ಮತದಾರರನ್ನು ಪರಿಗಣಿಸಿ ಇಡೀ ಚುನಾವಣೆಯ ಫಲಿತಾಂಶ ಲೆಕ್ಕಹಾಕುವುದು ಸುಲಭವಲ್ಲ.

ಅಲ್ಲದೆ ಸಾರ್ವಜನಿಕ ಅಭಿಪ್ರಾಯ ಸಂಗ್ರಾಹಕನು ಸಮೀಕ್ಷೆ ಕೈಗೊಳ್ಳುವ ವಿಧಾನ ಅಪಾರದರ್ಶಕವಾಗಿರಬಹುದು. ಅಂದರೆ ನಮೂನೆ ಆಯ್ಕೆ, ಸಮೀಕ್ಷೆಯ ವಿಧಾನ, ಪರಿವರ್ತನೆಯಲ್ಲಿ ತಪ್ಪಾಗಿರಬಹುದು. ಆದಾಗ್ಯೂ ಹಲವಾರು ಸಮೀಕ್ಷೆಗಳು ಹೆಚ್ಚು ನಿಖರವಾಗಿರುತ್ತವೆ ಎಂಬ ವಾದವೂ ಇದೆ. ಕಳೆದೈದು ವರ್ಷಗಳಲ್ಲಿ ಕೆಲ ಎಕ್ಸಿಟ್‌ ಪೋಲ್‌ಗಳ ಲೆಕ್ಕಾಚಾರ ತಪ್ಪಾಗಿದೆ. 2004 ಮತ್ತು 2009ರ ಲೋಕಸಭೆಯ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯವೂ ತಲೆಕೆಳಗಾಗಿದೆ.

EVM ಬಗ್ಗೆ ಅನುಮಾನ: ತೇಜಸ್ವಿ ಸೂರ್ಯ ಓಪನ್ ಚಾಲೆಂಜ್!

ಫಲಿತಾಂಶದ ದಿಕ್ಕು ಸಮೀಕ್ಷೆಯಲ್ಲಿ ಸ್ಪಷ್ಟ

ಚುನಾವಣೋತ್ತರ ಸಮೀಕ್ಷೆಗಳ ನಿಖರತೆ ಎಷ್ಟುಎನ್ನುವುದನ್ನು ಬಿಟ್ಟು ಗಮನಿಸಬೇಕಾದ ಅಂಶ ಎಂದರೆ, ಈ ಬಾರಿ ಎಲ್ಲಾ ಸಮೀಕ್ಷೆಗಳೂ ಬಿಜೆಪಿ ನೇತೃತ್ವದ ಎನ್‌ಡಿಎ ಕನಿಷ್ಠ 272 ಸೀಟುಗಳನ್ನು ಪಡೆದು ಸರ್ಕಾರ ರಚಿಸುತ್ತದೆ ಎಂದು ಹೇಳಿರುವುದು. ಇಲ್ಲಿ ವೈಯಕ್ತಿಕ ನಂಬರ್‌ಗಳ ಬದಲಾಗಿ ಅದರಲ್ಲೂ ವೋಟ್‌ ಶೇರ್‌ನಲ್ಲಾದ ಬದಲಾವಣೆ ಹೊರತುಪಡಿಸಿ ಟ್ರೆಂಡ್‌ ಬಗ್ಗೆ ಗಮನಹರಿಸಬೇಕಾಗುತ್ತದೆ.

ಈ ಲಾಜಿಕ್‌ ಫಲಿಸಿದರೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರದಲ್ಲಿ ಮತ್ತೊಮ್ಮೆ ಗದ್ದುಗೆ ಹಿಡಿಯಲಿದ್ದಾರೆ. ಸದ್ಯ ಅವರು ಕೇವಲ 272 ಸೀಟು ಪಡೆಯುತ್ತಾರೋ ಅಥವಾ 350 ಸೀಟು ಪಡೆದು ಅಭೂತಪೂರ್ವ ಜಯ ಗಳಿಸುತ್ತಾರೋ ಎನ್ನುವುದು ಪ್ರಮುಖ ಪ್ರಶ್ನೆ.

ಅನುಮಾನಕ್ಕೆ ಏನು ಕಾರಣ?

ಒಂದು ವೇಳೆ ಈ ಸಮೀಕ್ಷೆಗಳನ್ನು ಸರಿಯಾಗಿ ಕೈಗೊಂಡಿರದೆ ಇದ್ದರೆ ಫಲಿತಾಂಶ ತಪ್ಪಾಗಬಹುದಲ್ಲವೇ ಎಂಬ ಅನುಮಾನ ಮೂಡುತ್ತದೆ. ಆಗ ಅವುಗಳ ಸರಾಸರಿ ನೋಡಿದರೆ ಕೆಲ ಹೊಳಹುಗಳು ತಿಳಿಯುತ್ತವೆ. ಜನಾಭಿಪ್ರಾಯ ಸಂಗ್ರಾಹಕರು ನಮೂನೆಗಳಿಂದ ಕಚ್ಚಾ ಮಾಹಿತಿ ಸಂಗ್ರಹಿಸಿ ಅದನ್ನು ರಾಜಕೀಯ ವಿವೇಕ/ ಲೋಕಜ್ಞಾನದೊಂದಿಗೆ ಅನ್ವಯಿಸಿ ಪರಿಣಾಮಕಾರಿಯಾಗಿ ಊಹಿಸಲೂಬಹುದು.

ಅಂದರೆ ಕೆಲ ಸಂದರ್ಭದಲ್ಲಿ ಅವರು, ಮತದಾರರ ಗ್ರಹಿಕೆ ಬದಲಾಗಿ ಜನಪ್ರಿಯ ಗ್ರಹಿಕೆಯೊಂದಿಗೇ ಊಹಿಸಿ ಫಲಿತಾಂಶವನ್ನು ಊಹೆ ಮಾಡಿರಬಹುದು ಎಂದರ್ಥ. ಆದರೆ ಅಭಿಪ್ರಾಯ ಸಂಗ್ರಾಹಕರ ಬಳಿ ತಮ್ಮ ನಿಲುವು ವ್ಯಕ್ತಪಡಿಸದ ಸೈಲೆಂಟ್‌ ಮತದಾರರೂ ನಿರ್ಣಾಯಕರಾಗುತ್ತಾರೆ.

ವೋಟ್‌ ಶೇರ್‌ನ ಅಂತರದ ಅರ್ಥವೇನು?

ಮತದಾನೋತ್ತರ ಸಮೀಕ್ಷೆಗಳನ್ನು ಓದುವ ಇನ್ನೊಂದು ವಿಧಾನ ವೋಟ್‌ ಶೇರ್‌ನತ್ತ ಗಮನಹರಿಸುವುದು. ಭಾರತದ ಹಳೆಯ ವ್ಯವಸ್ಥೆಯನ್ನು ಗಮನಿಸಿದಾಗ ಪಕ್ಷವೊಂದು ಬಹುಮತ ಪಡೆಯುತ್ತದೆಯೇ ಎಂದು ನಿಖರವಾಗಿ ಊಹಿಸುವುದು ಕಷ್ಟ. 2014ರಲ್ಲಿ ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ 19% ವೋಟ್‌ ಶೇರ್‌ ಪಡೆದಿತ್ತು. ಆದರೆ ಯಾವುದೇ ಸೀಟ್‌ಗಳನ್ನೂ ಗೆದ್ದಿರಲಿಲ್ಲ.

ಇದೇ ವೇಳೆ ಎಲ್ಲಾ ಪ್ರಮುಖ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್‌ ನೇತೃತ್ವದ ಯುಪಿಎ ನಡುವೆ ವೋಟ್‌ ಶೇರ್‌ನಲ್ಲೂ ಸಾಕಷ್ಟುಕಡಿಮೆ ಅಂತರ ಇರುವುದಾಗಿ ಭವಿಷ್ಯ ಹೇಳಿದ್ದವು. ಆದರೆ ಕೊನೆಯಲ್ಲಿ ಅತಿ ಹೆಚ್ಚು ಅಂತರವಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಮೀಕ್ಷೆಗಳು ಸ್ಥಳೀಯ ಪಕ್ಷಗಳ ವೋಟ್‌ ಶೇರ್‌ಗಿಂತ ರಾಷ್ಟ್ರೀಯ ಮೈತ್ರಿಕೂಟಗಳಿಗೆ ಹೆಚ್ಚು ವೋಟ್‌ ಶೇರ್‌ ನೀಡುತ್ತಿವೆ.

27 ರಿಂದ ಗೋವಾದಲ್ಲಿ 8 ನೇ ಹಿಂದೂ ರಾಷ್ಟ್ರ ಅಧಿವೇಶನ

ಹಿಂದಿ ಹಾರ್ಟ್‌ಲ್ಯಾಂಡ್‌ ಕತೆ ಏನು?

2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೇವಲ 9 ರಾಜ್ಯಗಳಲ್ಲಿ 252 ಸೀಟು ಪಡೆದಿತ್ತು. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ಹರಾರ‍ಯಣ, ಮಹಾರಾಷ್ಟ್ರ ಈ 9 ರಾಜ್ಯಗಳು. ಈ ರಾಜ್ಯಗಳ ಪೈಕಿ 3ನ್ನು ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಕಳೆದುಕೊಂಡಿದೆ.

ಜೊತೆಗೆ ಈ ಬಾರಿ ಪ್ರತಿಯೊಂದು ಸಮೀಕ್ಷೆಗಳು 2014ರಲ್ಲಿ ಬಿಜೆಪಿ ಈ ರಾಜ್ಯಗಳಲ್ಲಿ ಕಂಡಿದ್ದ ಅಭೂತಪೂರ್ವ ಜಯ ಅಸಾಧ್ಯ ಎಂದು ಹೇಳಿವೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಸೀಟುಗಳು ಭಾರೀ ಪ್ರಮಾಣದಲ್ಲಿ ತಗ್ಗಲಿವೆ ಎಂದು ಹೇಳಿವೆ.

ಉತ್ತರ ಪ್ರದೇಶದಲ್ಲಿ ಏನಾಗಬಹುದು?

ಉತ್ತರ ಪ್ರದೇಶದಲ್ಲಿ 80 ಲೋಕಸಭಾ ಕ್ಷೇತ್ರಗಳಿವೆ. 2014ರಲ್ಲಿ ಇವುಗಳ ಪೈಕಿ ಎನ್‌ಡಿಎ 73ರನ್ನು ಗೆದ್ದಿತ್ತು. ಈ ಬಾರಿ ಈ ಜಯಕ್ಕೆ ತಡೆಗೋಡೆಯಾಗಲು ಬಿಎಸ್‌ಪಿ ಮತ್ತು ಎಸ್‌ಪಿ ಒಂದಾಗಿವೆ. ಈ ಪ್ರಕಾರ ಗಠಬಂಧನ್‌ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಪ್ರಬಲ ಸ್ಪರ್ಧೆ ನೀಡಲಿದೆ.

ಆದರೆ ಮೂರನೇ ಸ್ಪರ್ಧಿ ಕಾಂಗ್ರೆಸ್‌ನಿಂದ ಕೆಲ ಮತಗಳು ವಿಭಜನೆಯಾಗಲಿವೆ ಎಂದು ಹೇಳಲಾಗುತ್ತಿದೆ. ಈ ರಾಜ್ಯದ ಭವಿಷ್ಯದ ಬಗ್ಗೆ ಚುನಾವಣೋತ್ತರ ಸಮೀಕ್ಷೆಗಳು ಅಷ್ಟೇನೂ ಸ್ಪಷ್ಟಚಿತ್ರಣ ನೀಡಿಲ್ಲ.

ಪೂರ್ವದಲ್ಲಿ ಏನಾಗಬಹುದು?

ಮತದಾನೋತ್ತರ ಸಮೀಕ್ಷೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾದ ಫಲಿತಾಂಶ ಅಚ್ಚರಿ ಮೂಡಿಸಿದೆ. ಇಲ್ಲಿ ಬಿಜೆಪಿ ಪ್ರತಿಪಪಕ್ಷವಾಗಲು ಮಾತ್ರ ಸೀಮಿತ ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಆದರೆ, ಈಗ ಕೆಲ ಸಮೀಕ್ಷೆಗಳು ಬಿಜೆಪಿಗೇ ಹೆಚ್ಚು ಸ್ಥಾನ ನೀಡುತ್ತಿವೆ.

ಆದಾಗ್ಯೂ ಸಮೀಕ್ಷೆಗಳು ನೀಡಿರುವ ಸಂಖ್ಯೆಗಳು ಸ್ಪಷ್ಟವಾಗಿಲ್ಲ. ಅವುಗಳಿಂದ ಸ್ಪಷ್ಟಚಿತ್ರಣವೂ ಸಿಗುತ್ತಿಲ್ಲ. ಬಿಜೆಪಿಗೆ ಹೆಚ್ಚು ಸೀಟು ಬರುತ್ತದೆ ಅಂದರೆ ಬಂಗಾಳದ ಟಿಎಂಸಿ ಹಾಗೂ ಒಡಿಶಾದ ಬಿಜೆಡಿ ಸೋಲುತ್ತವೆ ಎಂದರ್ಥವೇ? ಅದು ಸ್ಪಷ್ಟವಾಗುತ್ತಿಲ್ಲ.

ಬೇರೆಡೆಗೆ ಏನಾಗಬಹುದು?

ದೇಶದ ಬೇರೆಡೆಗಳಲ್ಲಿ ಏನಾಗಬಹುದೆಂದು ಸ್ಪಷ್ಟವಾಗಿ ಊಹಿಸುವುದು ಕಷ್ಟ. ಕರ್ನಾಟಕದಲ್ಲಿ ಬಲವಾಗಿ ನೆಲೆಯೂರಲು ಬಿಜೆಪಿ ಶ್ರಮ ವಹಿಸುತ್ತಿದೆ. ಅದನ್ನು ಬಿಟ್ಟರೆ ದಕ್ಷಿಣದಲ್ಲಿ ಬಿಜೆಪಿ ಪ್ರಭಾವ ಹೆಚ್ಚೇನೂ ಕಾಣಿಸುತ್ತಿಲ್ಲ. ಕೇಸರಿ ಪಡೆ ಮತ್ತು ಅದರ ಮಿತ್ರ ಪಕ್ಷಗಳು ಈಶಾನ್ಯ ಭಾರತದ 25 ಸೀಟುಗಳಲ್ಲಿ ಅರ್ಧದಷ್ಟನ್ನು ಪಡೆಯಬಹುದು. ಆಂಧ್ರಪ್ರದೇಶದ ಬಗ್ಗೆ ಸಮೀಕ್ಷೆಗಳ ಚಿತ್ರಣ ಅಸ್ಪಷ್ಟವಾಗಿದೆ. ಕೆಲ ಸಮೀಕ್ಷೆಗಳು ಆಂಧ್ರದಲ್ಲಿ ಆಡಳಿತಾರೂಢ ಟಿಡಿಪಿ ಸೋತು ವೈಎಸ್‌ಆರ್‌ ಕಾಂಗ್ರೆಸ್‌ ಗೆಲ್ಲುತ್ತದೆ ಎಂದು ಹೇಳುತ್ತಿವೆ.