ಬೆಂಗಳೂರು (ಮೇ. 21):  ಹಿಂದೂ ಸಮಾಜ ಜಾಗೃತಗೊಳಿಸುವ ಹಾಗೂ ಹಿಂದೂ ರಾಷ್ಟ್ರ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಮೇ 27ರಿಂದ ಜೂನ್‌ 8ರ ರವರೆಗೆ ಗೋವಾದ ಪೊಂಡಾದ ರಾಮನಾಥ ದೇವಸ್ಥಾನದಲ್ಲಿ ‘ಎಂಟನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ವಕ್ತಾರ ಮೋಹನ್‌ ಗೌಡ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ಬಾಂಗ್ಲಾದೇಶದ ಮೈನಾರಿಟಿ ವಾಚ್‌ನ ಅಧ್ಯಕ್ಷ ರವೀಂದ್ರ ಘೋಷ್‌, ರಾಮ ಮಂದಿರ ಆಂದೋಲನದ ಹಿರಿಯ ವಕೀಲ ಹರಿ ಶಂಕರ ಜೈನ್‌, ಸುಪ್ರೀಂ ಕೋರ್ಟ್‌ನ ವಕೀಲ ಜೆ.ಸಾಯಿದೀಪಕ್‌, ವಲ್ಡರ್ ಹಿಂದೂ ಫೆಡರೇಷನ್‌ನ ಅಜಯ್‌ ಸಿಂಹ, ಗೃಹ ಸಚಿವಾಲಯದ ನಿವೃತ್ತ ಅಧಿಕಾರಿ ಆರ್‌.ವಿ.ಎಸ್‌.ಮಣಿ, ಬಂಗಾಳದ ವಕೀಲ ಜಾಯದೀಪ ಮುಖರ್ಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಹಿಂದೂ ಸಮಾಜ ಜಾಗೃತಗೊಳಿಸುವ ಹಾಗೂ ಹಿಂದೂ ರಾಷ್ಟ್ರದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಆಯೋಜಿಸಿರುವ 13 ದಿನಗಳ ಅಧಿವೇಶನ ಅಧಿವೇಶನದಲ್ಲಿ ಬಾಂಗ್ಲಾದೇಶ ಸೇರಿದಂತೆ ದೇಶದ 26 ರಾಜ್ಯಗಳ 200ಕ್ಕೂ ಅಧಿಕ ಹಿಂದೂಪರ ಸಂಘಟನೆಗಳ ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ಅತಿಯಾಗಿರುವ ಭ್ರಷ್ಟಾಚಾರದ ತಡೆ ಹಾಗೂ ಭಾರತವನ್ನು ಸಂವಿಧಾನಾತ್ಮಕವಾಗಿ ಹಿಂದೂ ರಾಷ್ಟ್ರ ಎಂದು ಘೋಷಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲು ಈ ಅಧಿವೇಶನದ ಸಂದರ್ಭದಲ್ಲಿಯೇ ‘ಧರ್ಮಪ್ರೇಮಿ ನ್ಯಾಯವಾದಿಗಳ ಅಧಿವೇಶನ’ ಏರ್ಪಡಿಸಲಾಗಿದೆ.

ಅಂತೆಯೆ ‘ಉದ್ಯಮಿಗಳ ಅಧಿವೇಶನ’, ಸೋಶಿಯಲ್‌ ಮೀಡಿಯಾ ಕಾನ್‌ಕ್ಲೇವ್‌’ ಹಾಗೂ ‘ಹಿಂದೂ ರಾಷ್ಟ್ರ ಸಂಘಟಕ ಪ್ರಶಿಕ್ಷಣ ಅಧಿವೇಶನ’ ಜರುಗಲಿದೆ ಎಂದು ತಿಳಿಸಿದರು.