ಬೆಂಗಳೂರು[ಮೇ.21]: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಮುಕ್ತಾಯಗೊಂಡಿದೆ. ಮತದಾರರ ಮತಗಳು ದಾಖಲಾಗಿರುವ ಇವಿಎಂ ಯಂತ್ರಗಳು ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿವೆ. ಹೀಗಿದ್ದರೂ ಪ್ರತಿಪಕ್ಷ ನಾಯಕರು ಇವಿಎಂ ಮತ ಯಂತ್ರಗಳ ವಿಶ್ವಾಸಾರ್ಹತೆ ಕುರಿತು ಸವಾಲೆತ್ತಿದ್ದಾರೆ. ಅಲ್ಲದೇ ಶೇ. 50ರಷ್ಟು ಮತಗಳನ್ನು ವಿವಿಪ್ಯಾಟ್ ಹೋಲಿಕೆ ಮಾಡಬೇಕು ಎಂಬ ಪಟ್ಟು ಹಿಡಿದಿದ್ದಾರೆ. ಆದರೀಗ ಇವಿಎಂ ಕುರಿತಾಗಿ ಅನುಮಾನ ವ್ಯಕ್ತಪಡಿಡುತ್ತಿರುವ ಜನಪ್ರತಿನಿಧಿಗಳಿಗೆ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಬಹಿರಂಗ ಸವಾಲೊಂದನ್ನು ಎಸೆದಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ 'ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಎಲ್ಲರಿಗೂ ನನ್ನದೊಂದು ಸವಾಲಿ- ಈಗ ಇವಿಎಂ ಕುರಿತಾಗಿ ಅನುಮಾನ ವ್ಯಕ್ತಪಡಿಸುವ ಮುನ್ನ, ಇದೇ ಇವಿಎಂ ಯಂತ್ರಗಳಲ್ಲಿ ದಾಖಲಾದ ವೋಟುಗಳಿಂದ ಗೆದ್ದು ಬಂದ ನಿಮಗೆ, ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಧೈರ್ಯ ಇದೆಯಾ?' ಎಂದಿದ್ದಾರೆ. 

ಇವಿಎಂ ಕುರಿತು ರಾಜ್ಯ ನಾಯಕರು ಹೇಳಿದ್ದೇನು?

ನರೇಂದ್ರ ಮೋದಿ ಅಲೆ ಇದೆ ಎಂಬುದನ್ನು ಬಿಂಬಿಸಲು ಈ ಸಮೀಕ್ಷೆ ಮಾಡಲಾಗಿದೆ. ಇವಿಎಂಗಳು ನಂಬಿಕೆಗೆ ಅರ್ಹವಲ್ಲ. ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ಮಾಡಿದ್ದರೆ ಅನುಮಾನ ದೂರವಾಗುತ್ತಿತ್ತು
-ಎಚ್. ಡಿ. ಕುಮಾರಸ್ವಾಮಿ, ಮಾನ್ಯ ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ

ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 300ಕ್ಕೂ ಹೆಚ್ಚು ಸ್ಥಾನ ತೋರಿಸುತ್ತಿರುವುದು ನೋಡಿದರೆ ಸಮೀಕ್ಷೆಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಮಾಡಿಸಿದಂತಿದೆ. ಇನ್ನು ಇವಿಎಂಗಳ ಬಗ್ಗೆಯೂ ನಮಗೆ ಅನುಮಾನವಿದೆ
- ಡಾ.ಜಿ. ಪರಮೇಶ್ವರ್, ಉಪಮುಖ್ಯಮಂತ್ರಿ 

ಎಲೆಕ್ಟೋರಲ್ ಬಾಂಡ್ ಹಾಗೂ ಇವಿಎಂಗಳನ್ನು ಬದಲಾವಣೆ ಮಾಡಲಾಗಿದೆ. ಚುನಾವಣಾ ಆಯೋಗ ನಮೋ ಟಿವಿ, ಮೋದಿ ಸೇನೆ ಮತ್ತು ಕೇದಾರನಾಥದಲ್ಲಿಯ ಡ್ರಾಮಾ, ಮೋದಿ ಹಾಗು ಗ್ಯಾಂಗ್ ಮುಂದೆ ಶರಣಾಗಿರೋದನ್ನು ಎಲ್ಲ ಭಾರತೀಯರು ನೋಡಿದ್ದಾರೆ. ಚುನಾವಣಾ ಆಯೋಗ ಮೋದಿ ಗ್ಯಾಂಗ್ ಮುಂದೆ ಗೌರವಾನ್ವಿತವಾಗಿ ಭಯಗೊಂಡಿದೆ 
-ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ಎಕ್ಸಿಟ್ ಪೋಲ್ ಎಂಬ ಗಾಸಿಪ್ ನಂಬಲಾರೆ. ಸಾವಿರಾರು ಇವಿಎಂಗಳು ಬದಲಾವಣೆ ಮಾಡಿರುವ ಸಾಧ್ಯತೆಗಳಿವೆ. ಎಲ್ಲ ವಿರೋಧ ಪಕ್ಷಗಳು ಒಂದಾಗಿ ಈ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಭಾಗಿಯಾಗಲು ಮನವಿ ಮಾಡಿಕೊಳ್ಳುತ್ತೇನೆ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ