ನವದೆಹಲಿ(ಮೇ.21): ಮಹತ್ವದ ಬೆಳವಣಿಗೆಯೊಂದರಲ್ಲಿ ಚುನಾವಣೆ ಮತ ಎಣಿಕೆ ಸಮಯದಲ್ಲಿ ಇವಿಎಂ ಮತಗಳ ಜೊತೆ ಶೇ. 100 ವಿವಿಪ್ಯಾಟ್ ಚೀಟಿಗಳ ಹೊಂದಾಣಿಕೆಯಾಗಬೇಕೆಂದು  ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾ ಮಾಡಿದೆ.

ತಂತ್ರಜ್ಞರ ಗುಂಪೊಂದು ಚುನಾವಣಾ ಮತ ಎಣಿಕೆ ವೇಳೆ ಶೇ. 100ರಷ್ಟೂ ವಿವಿಪ್ಯಾಟ್ ಚೀಟಿಗಳ ಹೊಂದಾಣಿಕೆ ಆಗಬೇಕೆಂದು ಕೋರಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯದ ರಜಾ ಕಾಲದ ಪೀಠ ಮನವಿಯನ್ನು ತಳ್ಳಿ ಹಾಕಿದೆ.

ಚೆನ್ನೈ ಮೂಲದ ಟೆಕ್ ಫಾರ್ ಆಲ್ ಎಂಬ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅರುಣ್ ಮಿಶ್ರಾ ನೇತೃತ್ವದ ರಜಾ ಕಾಲದ ಪೀಠ, ಈ ಕುರಿತು ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ನೇತೃತ್ವದ ಪೀಠ ಹಿಂದೆಯೇ ತೀರ್ಪು ನೀಡಿದ್ದು, ಅದನ್ನು ಬದಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.