ವಾರಾಣಸಿ(ಏ.26): ನಿನ್ನೆಯಷ್ಟೇ(ಏ.25) ಸ್ವಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಈ ವೇಳೆ ಪ್ರಧಾನಿ ಮೋದಿ ಅವರ ನಾಮಪತ್ರಕ್ಕೆ ಸೂಚಕರಾಗಿ ಹಲವು ಪ್ರಮುಖರು ಸಹಿ ಮಾಡಿದ್ದು ವಿಶೇಷವಾಗಿತ್ತು.

ಶಿಕ್ಷಣ ತಜ್ಞೆ ಡಾ. ಅನ್ನಪೂರ್ಣ ಶುಕ್ಲಾ: ಇವರು ಬನಾರಸ್ ಹಿಂದೂ ವಿವಿ ಸ್ಥಾಪಕ ಮದನ್ ಮೋಹನ್ ಮಾಳವೀಯ ಅವರ ಮೊಮ್ಮಗಳು.

ದೋಮರಾಜ್ ಜಗದೀಶ್: ಮಣಿಕರ್ಣಿಕ ಘಾಟ್ ನ ಸ್ಮಶಾನದ ಕಾವಲುಗಾರ

(ಮಣಿಕರ್ಣಿಕ ಘಾಟ್ ಗಂಗಾನದಿ ತಟದಲ್ಲಿರುವ ಹಿಂದೂಗಳ ಪವಿತ್ರ ಸ್ಥಳವಾಗಿದ್ದು, ಇಲ್ಲಿ ಮೃತದೇಹಗಳ ಅಂತ್ಯಸಂಸ್ಕಾರ ನಡೆಸಿದರೆ ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆ ಇದೆ.)

ರಮಾಶಂಕರ್ ಪಟೇಲ್: ಹಿರಿಯ ಕೃಷಿ ವಿಜ್ಞಾನಿ

ಸುಭಾಷ್ ಗುಪ್ತ: ಆರ್‌ಎಸ್‌ಎಸ್‌ ಕಾರ್ಯಕರ್ತ

ಸೂಚಕರು ಎಂದರೆ ಯಾರು?:

ಚುನಾವಣೆಗಳಲ್ಲಿ ಪಕ್ಷದ ಅಥವಾ ಪಕ್ಷೇತರ ಅಭ್ಯರ್ಥಿ ಪರ ಸೂಚಕರೊಬ್ಬರು ನಾಮಪತ್ರಕ್ಕೆ ಸಹಿ ಹಾಕುತ್ತಾರೆ. ನಿರ್ದಿಷ್ಟ ವ್ಯಕ್ತಿ ನಿರ್ದಿಷ್ಟ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಲು ಸೂಚಕರು ನಾಮಪತ್ರಕ್ಕೆ ಸಹಿ ಹಾಕುತ್ತಾರೆ. ಅಲ್ಲದೇ ನಾಮಪತ್ರದಲ್ಲಿ ಅಭ್ಯರ್ಥಿ ಸಲ್ಲಿಸಿರುವ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಆಯೋಗಕ್ಕೆ ವಾಗ್ದಾನ ಮಾಡಲು ಸೂಚಕರು ನಾಮಪತ್ರಕ್ಕೆ ಸಹಿ ಹಾಕುತ್ತಾರೆ.

ಹೀಗೆ ಪ್ರಧಾನಿ ಮೋದಿ ನಾಮಪತ್ರಕ್ಕೆ ಸೂಚಕರಾಗಿ ಸಮಾಜದ ವಿವಿಧ ವರ್ಗದ ಪ್ರಮುಖರು ಸಹಿ ಮಾಡಿದ್ದು ವಿಶೇಷವಾಗಿತ್ತು.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು, ಏ.23ರಂದು ಎರಡನೇ ಹಂತದ ಮತದಾನ ಮಯಕ್ತಾಯ ಕಂಡಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.