ವಾರಾಣಸಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ| ಲಕ್ಷಾಂತರ ಜನರ ಸಮ್ಮುಖದಲ್ಲಿ ರೋಡ್ ಶೋ ನಡೆಸಿದ ಪ್ರಧಾನಿ| ಬನಾರಸ್ ವಿವಿ ಆವರಣದಲ್ಲಿ ಪಂಡಿತ್ ಮದನ್ ಮೋಹನ್ ಮಾಳವೀಯ ಪುತ್ಥಳಿಗೆ ಪುಷ್ಪ ನಮನ| ಬನಾರಸ್ ವಿವಿಯಿಂದ ದಶಾಶ್ವಮೇಧ ಘಾಟ್ ವರೆಗೆ ಒಟ್ಟು 7 ಕಿ.ಮೀ ರೋಡ್ ಶೋ| 240 ನಿಮಿಷಗಳ ಕಾಲ ರೋಡ್ ಶೋ ನಡೆಸಿದ ಮೋದಿ| ಗಂಗಾನದಿ ತಡದಲ್ಲಿ ಪ್ರಧಾನಿ ಮೋದಿಯಿಂದ ಗಂಗೆಗೆ ವಿಶೇಷ ಪೂಜೆ| ವಾರಾಣಸಿಯಲ್ಲಿ ಕೇಸರಿ ಕಳೆ ಮೊಳಗಿಸಿದ ಪ್ರಧಾನಿ ಮೋದಿ| ನಾಳೆ(ಏ.26) ವಾರಾಣಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿರುವ ಪ್ರಧಾನಿ ಮೋದಿ|
ವಾರಾಣಸಿ(ಏ.25): 2019ರ ಲೋಕಸಭೆ ಚುನಾವಣೆಯ ಅದ್ಬುತ ದೃಶ್ಯಗಳಿಗೆ ಇಂದು ಉತ್ತರ ಪ್ರದೇಶದ ವಾರಾಣಸಿ ಸಾಕ್ಷಿಯಾಯಿತು. ವಾರಾಣಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಭರ್ಜರಿ ರೋಡ್ ಶೋ ನಡೆಸಿದರು.
"
ಬನಾರಸ್ ಹಿಂದೂ ವಿಶ್ವ ವಿದ್ಯಾಲಯದ ಆವರಣದಲ್ಲಿರುವ ಪಂಡಿತ್ ಮದನ್ ಮೋಹನ್ ಮಾಳವೀಯ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಪ್ರಧಾನಿ ಮೋದಿ ರೋಡ್ ಶೋಗೆ ಚಾಲನೆ ನೀಡಿದರು.
ಮೋದಿ ರೋಡ್ ಶೋಗೆ ಜನಸಾಗರವೇ ಹರಿದು ಬಂದಿದ್ದು, ಲಕ್ಷಾಂತರ ಜನ ಪ್ರಧಾನಿ ದರ್ಶನಕ್ಕಾಗಿ ರೋಡ್ ಶೋನಲ್ಲಿ ಭಾಗವಹಿಸಿದ್ದರು. ಬನಾರಸ್ ಹಿಂದೂ ವಿವಿಯಿಂದ ದಶಾಶ್ವಮೇಧ ಘಾಟ್ ವರೆಗೂ ನಡೆದ ರೋಡ್ ಶೋ ಸಂಪೂರ್ಣ ಕೇಸರಿಮಯವಾಗಿತ್ತು.

ರೋಡ್ ಶೋ ಮ್ಯಾಪ್:
ಒಟ್ಟು 7 ಕಿ.ಮೀ ಉದ್ದದ ರಸ್ತೆಯಲ್ಲಿ 240 ನಿಮಿಷದ ಮಹಾಯಾತ್ರೆ ನಡೆಸಿದ ಪ್ರಧಾನಿ ಮೋದಿ, ಬನಾರಸ್ ವಿವಿ, ಲಂಕಾ ಗೇಟ್, ಅಸ್ಸಿ, ಸೋನಾರ್‌ಪುರ್, ಮದನ್ ಪುರ್, ಗೋದಾಲಿಯಾ ಹಾಗೂ ದಶಾಶ್ವಮೇಧ ಘಾಟ್’ವರೆಗೆ ರೋಡ್ ಶೋ ನಡೆಸಿದರು.
"
ರೋಡ್ ಶೋ ಮಧ್ಯದಲ್ಲಿ ಸುಮಾರು ಪ್ರಧಾನಿ ಮೋದಿ ಅವರಿಗೆ ಸುಮಾರು 60 ಸ್ಥಳಗಳಲ್ಲಿ ಹೂವಿನ ಸುರಿಮಳೆಯ ಸ್ವಾಗತ ನೀಡಲಾಯಿತು. ರೋಡ್ ಶೋ ಸಾಗುವ ಹಾದಿಯಲ್ಲಿ ಒಟ್ಟು 101 ಸ್ಥಳಗಳಲ್ಲಿ ಪ್ರಧಾನಿ ಮೋದಿಗಾಗಿ ವೆಲ್’ಕಮ್ ಪಾಯಿಂಟ್ಸ್’ಗಳನ್ನು ನಿರ್ಮಿಸಿದ್ದು ವಿಶೇಷ.
ಇನ್ನು ಪ್ರಧಾನಿ ಮೋದಿ ರೋಡ್ ಶೋಗೆ ಸಾಕ್ಷಿಯಾಗಲು ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಮೋದಿ ಅಭಿಮಾನಿಗಳು ಭಾಗವಹಿಸಿದ್ದರು. ಆಯಾ ರಾಜ್ಯದ ಸಾಂಸ್ಕೃತಿಕ ಉಡುಗೆ ತೊಟ್ಟ ಜನರು, ಸಾಂಪ್ರದಾಯಿಕ ನೃತ್ಯ ಮಾಡುತ್ತಾ ಪ್ರಧಾನಿ ಮೋದಿ ಅವರಿಗೆ ಬೆಂಬಲ ಸೂಚಿಸಿದರು.
ಬಳಿಕ ದಶಾಶ್ವಮೇಧ ಘಾಟ್’ನ ಗಂಗಾನದಿ ತಟದಲ್ಲಿ ಪವಿತ್ರ ಗಂಗಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ಗಂಗೆಗೆ ಪೂಜೆ ಸಲ್ಲಿಸುವ ಮೂಲಕ ರೋಡ್ ಶೋಗೆ ಅಂತ್ಯ ಹಾಡಿದರು.
ಪಂಚಭೂತಗಳ ಸಂಕೇತವಾಗಿ 7 ಅರ್ಚಕರಿಂದ ಆರತಿ ಬೆಳಗಿ ಪೂಜೆ ಸಲ್ಲಿಸಲಾಯಿತು. ಇನ್ನು ರೋಡ್ ಶೋ ತೆರಳಿದ ರಸ್ತೆಯುದ್ದಕ್ಕೂ 'ಹೌ ಇಸ್ ದಿ ಜೋಷ್' , ಚೌಕಿದಾರ್ ಸೇರಿದಂತೆ ಹಲವು ಬ್ಯಾನರ್‌ಗಳು ರಾರಾಜಿಸಿದವು.
ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಬಿಜೆಪಿ ನಾಯಕರು ಪ್ರಧಾನಿ ಮೋದಿ ಅವರಿಗೆ ಸಾಥ್ ನೀಡಿದರು.
ಇದಾದ ಬಳಿಕ ಪ್ರಧಾನಿ ಮೋದಿ ಬಿಜೆಪಿಯ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದರು. ನಾಳೆ(ಏ.26) ಪ್ರಧಾನಿ ಮೋದಿ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ.
