ಬೆಂಗಳೂರು, [ಮಾ.19]: ಎಚ್.ಡಿ.ದೇವೇಗೌಡ ಅವರ ಸ್ಪರ್ಧಿಸುವ ಕ್ಷೇತ್ರ ಇನ್ನು ಫೈನಲ್ ಆಗಿಲ್ಲ. ಆದ್ರೆ ದೇವೇಗೌಡ ಅವರು ಇದೀಗ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಹೇಳಿದ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿರುವುದು ಹಲವು ಆಯಾಮಗಳಿಗೆ ಎಡೆಮಾಡಿಕೊಟ್ಟಿದೆ.

ಬೆಂಗಳೂರಿನಲ್ಲಿಂದು [ಮಂಗಳವಾರ] ಮೈತ್ರಿ ನಾಯಕರು ಸುದ್ದಿಗೊಷ್ಠಿ ನಡೆಸಿದರು. ಈ ವೇಳೆ ಪ್ರತಿಕ್ರಿಯಿಸಿದ ದೊಡ್ಡಗೌಡ್ರು, ನನಗೆ ಎಲ್ಲಿ ಸ್ಪರ್ಧೆ ಮಾಡಬೇಕೋ ಬೇಡವೂ ಎಂಬುದರ ಬಗ್ಗೆ ಸ್ವಾತಂತ್ರ್ಯವಿದೆ. ನನ್ನ ಸ್ಪರ್ಧೆ ಬಗ್ಗೆ ನಿಮಗೆ ಸಾಕಷ್ಟು ಕುತೂಹಲವಿದೆ, ಅದು ನನಗೂ ಗೊತ್ತಿದೆ.

ನನ್ನ ಉಪಯುಕ್ತತೆ ದೆಹಲಿಯಲ್ಲಿ ಎಷ್ಟಿದೆ ಎಂಬುದನ್ನೂ ನೋಡ್ತಿದ್ದೇನೆ. ನಾನು ನಿಲ್ಲಬೇಕು ಅಂತನೂ ಒತ್ತಾಯವಿದೆ  ಸಿದ್ದರಾಮಯ್ಯ, ದಿನೇಶ್ ಗುಂಡುರಾವ್​ ಹೇಳಿದ ಕಡೆ ನಾನು ಕಣಕ್ಕಿಳಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.  ದೇವೇಗೌಡ ಅವರ ಈ ಹೇಳಿಕೆ ಹಿಂದೆ ಅಸಲಿ ಕಾರಣ ಬೇರೆಯೇ ಇದೆ.

ಬೆಂಗ್ಳೂರು ಉತ್ತರ: ದೊಡ್ಡಗೌಡ್ರಿಗೆ ನಡುಕ ಹುಟ್ಟಿಸಿದ ಸಿದ್ದರಾಮಯ್ಯ ಶಿಷ್ಯಂದಿರು..!

ಬೆಂಗಳೂರು ಉತ್ತರ ಹಾಗೂ ತುಮಕೂರು ಕ್ಷೇತ್ರಗಳು ದೇವೇಗೌಡ ಅವರ ಮುಂದೆ ಇದ್ದು, ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡ ಅವರು ಕಾಂಗ್ರೆಸ್ ನಾಯಕರ ಮೊರೆ ಹೋಗಿದ್ದಾರೆ.

ಯಾಕಂದ್ರೆ ಬೆಂಗಳೂರು ಉತ್ತರ ಹಾಗೂ ತುಮಕೂರು ಕ್ಷೇತ್ರಗಳಲ್ಲಿ ಮೈತ್ರಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ದೇವೇಗೌಡರ ಗಮನಕ್ಕೆ ಬಂದಿದೆ. ಸಿದ್ದರಾಮಯ್ಯ ಅವರ ಆಪ್ತರಾದ ಬೈರಾತಿ ಬ್ರದರ್ಸ್ ಹಾಗೂ ಎಸ್.ಟಿ.ಸೊಮಶೇಖರ್ ಕ್ಷೇತ್ರಗಳು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಒಳಪಡಲಿದ್ದು, ದೇವೇಗೌಡ ಕುಟುಂಬಕ್ಕೆ ಸಿದ್ದರಾಮಯ್ಯ ಆಪ್ತರು ವಿರೋಧಿಗಳಾಗಿದ್ದಾರೆ.

ಇನ್ನು ತುಮಕೂರು ವಿಷಯಕ್ಕೆ ಬಂದ್ರೆ ಮೊದಲಿಗೆ ಹಾಲಿ ಸಂಸದ ಮುದ್ದೇಹನುಮೇಗೌಡ ಅಸಮಾಧನಗೊಂಡಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣರಂತಹ ನಾಯಕರುಗಳು ಸಹ ಜೆಡಿಎಸ್ ಗೆ ಬೆಂಬಲಿಸಲು ನಿರಾಕರಿಸುತ್ತಿದ್ದಾರೆ. 

ಈ ಎಲ್ಲಾ ಗೊಂದಲಗಳ ನಡುವೆ ಏಕಾಏಕಿಯಾಗಿ ಸ್ಪರ್ಧಿಸಿದ್ರೆ ಕಥೆ ಏನು? ಎನ್ನುವುದು ದೇವೇಗೌಡರ ಲೆಕ್ಕಾಚಾರವಾಗಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡ ಅವರು ಸಿದ್ದು ಹಾಗೂ ದಿನೇಶ್ ಅವರು ಹೇಳಿದ ಕಡೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. 

ಇದನ್ನು ಒಟ್ಟಾರೆಯಾಗಿ ವ್ಯಾಖ್ಯಾನಿಸುವುದಾದರೆ ಬೆಂಗಳೂರು ಉತ್ತರ ಹಾಗೂ ತುಮಕೂರು ಕ್ಷೇತ್ರಗಳಲ್ಲಿ  ಜೆಡಿಎಸ್ ಗೆ ಬೆಂಬಲ ಸೂಚಿಸಲೇಬೇಕು ಎನ್ನುವುದನ್ನು ಸ್ಥಳೀಯ ನಾಯಕರಿಗೆ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರಿಂದ ಸೂಚನೆ ಕೊಡಿಸುವುದು ದೇವೇಗೌಡರ ಮಾಸ್ಟರ್ ಪ್ಲಾನ್ ಆಗಿದೆ. ಅಷ್ಟೇ ಅಲ್ಲದೇ ತಮ್ಮನ್ನ ಗೆಲ್ಲಿಸುವ ಜವಾಬ್ದಾರಿಯನ್ನು ಕಾಂಗ್ರೆಸ್ ನಾಯಕರ ಮೇಲೆ ಹಾಕಿದ್ದಾರೆ.

ಒಂದು ವೇಳೆ ದೊಡ್ಡಗೌಡ್ರ ಫಲಿತಾಂಶ ಹೆಚ್ಚು ಕಡಿಮೆಯಾದ್ರೆ ಅದನ್ನು ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರ ತಲೆಗೆ ಕಟ್ಟಿದ್ರೂ ಆಶ್ಚರ್ಯಪಡಬೇಕಿಲ್ಲ.