ಬೆಂಗಳೂರು, (ಮಾ.15): ತವರು ಕ್ಷೇತ್ರ ಹಾಸನವನ್ನು ಮೊಮ್ಮಗನಿಗೆ ಧಾರೆ ಎರೆದಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಸೇಫ್ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. 

ಬೆಂಗಳೂರು ಉತ್ತರ ಹಾಗೂ ತುಮಕೂರು ಈ ಎರಡು ಕ್ಷೇತ್ರಗಳು ದೇವೇಗೌಡರ ಮುಂದೆ ಇದ್ದು, ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಗೊಂದಲದಲ್ಲಿದ್ದಾರೆ. 

ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನುವ ಮಾತುಗಳ ರಾಜ್ಯ ರಾಜಕಾರಣಲ್ಲಿ ಬಲವಾಗಿ ಕೇಳಿಬರುತ್ತಿದ್ದವು. ಆದ್ರೆ ಇದೀಗ ದೊಡ್ಡಗೌಡ್ರು ತಮ್ಮ ವರಸೆ ಬದಲಿಸಿದ್ದು, ತುಮಕೂರಿನತ್ತ ಮುಖ ಮಾಡುತ್ತಾರೆ ಎನ್ನುವ ಸುದ್ದಿ ಜೆಡಿಎಸ್ ಪಡಸಾಲೆಯಲ್ಲಿ ಹರಿದಾಡುತ್ತಿದೆ.

ದೋಸ್ತಿ ಕುಸ್ತಿ: 'ಹಾಸನದ ರಾಜಕಾರಣಗಳಿಗೆ ತುಮಕೂರಿನಲ್ಲಿ ಬೆಂಬಲ ದೊರಕಲ್ಲ'

ರಾಜಕೀಯ ಪಂಡಿತರ ವಿಶ್ಲೇಷಣೆಯಂತೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಅಲ್ಪಸಂಖ್ಯಾತರ ಮತಗಳ ಮೇಲೆ ಜೆಡಿಎಸ್ ಹೆಚ್ಚು ಅವಲಂಬಿತವಾಗಿದ್ದು, ಬೆಂಗಳೂರು ಉತ್ತರ ದೇವೇಗೌಡರಿಗೆ ಅಷ್ಟೊಂದು ಸೇಫ್ ಅಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇದು ಒಂದು ಭಾಗವಾದರೆ ಮತ್ತೊಂದು ಕಡೆ ದೇವೇಗೌಡರಿಗೆ ಸಿದ್ದರಾಮಯ್ಯ ಅವರ ಶಿಷ್ಯಂದಿರ ಭಯ ಕೂಡ ಇದೆ.  ಹೌದು... ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಶಿಷ್ಯಂದಿರು ಕೈಕೊಡುವ  ಭಯ ದೇವೇಗೌಡರನ್ನ ಕಾಡುತ್ತಿದೆ.

ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕಾಂಗ್ರೆಸ್, 3 ಜೆಡಿಎಸ್ ಹಾಗೂ ಒಂದು ಕ್ಷೇತ್ರ ಬಿಜೆಪಿ ಆಡಳಿತದಲ್ಲಿದ್ದು, ದೇವೇಗೌಡರು ಬೆಂಗಳೂರು ಉತ್ತರದಿಂದ ಸ್ಪರ್ಧಿಸಲು ಮುಂದಾದರೆ ಅವರು ಕಾಂಗ್ರೆಸ್ ನ್ನು ಹೆಚ್ಚು ಅವಲಂಬಿತವಾಗಿರಬೇಕಾಗುತ್ತದೆ.

ದೇವೇಗೌಡರ ಕ್ಷೇತ್ರ ಆಯ್ಕೆ ಇನ್ನೂ ನಿಗೂಢ: ಈ 2 ಕ್ಷೇತ್ರಗಳ ಮೇಲಿದೆ ಕಣ್ಣು!

5 ಕಾಂಗ್ರೆಸ್ ಶಾಸಕರ ಪೈಕಿ ಸಿದ್ದರಾಮಯ್ಯ ಅವರ ಅತ್ಯಾಪ್ತರಾದ ಹೆಬ್ಬಾಳ್ ಕ್ಷೇತ್ರದ ಶಾಸಕ ಬೈರಾತಿ ಸುರೇಶ್ ಹಾಗೂ ಕೆ.ಆರ್.ಪುರಂ ಕ್ಷೇತ್ರದ ಶಾಸಕ ಬೈರಾತಿ ಬಸವರಾಜ್ ಹಾಗೂ ಯಶವಂತಪುರ (ಎಸ್.ಟಿ.ಸೋಮಶೇಖರ್)  ಕ್ಷೇತ್ರಗಳು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಒಳಪಡುತ್ತವೆ.

ಈ ಹಿನ್ನೆಲೆಯಲ್ಲಿ 2018ರ ವಿಧಾನಸಭೆಯಲ್ಲಿನ ಚಾಮುಂಡೇಶ್ವರಿ ಕ್ಷೇತ್ರದ ಸೇಡನ್ನು ಈ ಚುನಾವಣೆಯಲ್ಲಿ ತೀರಿಸಿಕೊಳ್ಳುತ್ತಾರೆ ಎನ್ನುವ ಹೆದರಿಕೆ ದೇವೇಗೌಡರಲ್ಲಿದೆ. ಇದ್ರಿಂದ ದೊಡ್ಡಗೌಡ್ರು ತುಮಕೂರಿನತ್ತ ಮುಖಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಎಸ್‌.ಟಿ. ಸೋಮಶೇಖರ್ ಅವರು ಕೆಲ ದಿನಗಳಿಂದ ಅಷ್ಟೇ ನಮಗೆ ಸಿದ್ದರಾಮಯ್ಯ ಅವರೇ ಸಿಎಂ ಎಂದು ದೇವೇಗೌಡರ ವಿರುದ್ಧ ಬಹಿರಂಗವಾಗಯೇ ಕಿಡಿಕಾರಿದ್ದನ್ನ ಇಲ್ಲಿ ಸ್ಮರಿಸಬಹುದು.

ಒಂದು ವೇಳೆ ದೊಡ್ಡಗೌಡ್ರು ತುಮಕೂರಿಗೆ ಹೋದ್ರೆ, ನಿವೃತ್ತ ನ್ಯಾಯಾಧೀಶ ಗೋಪಾಲಗೌಡ ಅವರನ್ನು ಬೆಂಗಳೂರು ಉತ್ತರದಿಂದ ಕಣಕ್ಕಳಿಸಲು ಜೆಡಿಎಸ್ ಚಿಂತನೆಯಲ್ಲಿ ತೊಡಗಿದೆ.

ಒಟ್ಟಿನಲ್ಲಿ ದೇವೇಗೌಡ ಅವರು ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎನ್ನುವುದು ಮಾತ್ರ ನಿಗೂಢವಾಗಿದೆ.