ಪುಣೆ:  ಇತ್ತ ಕರ್ನಾಟಕದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಕುಟುಂಬದ ಮೂವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರ ತಪಾಸಣೆಯಲ್ಲಿದ್ದರೆ, ಅತ್ತ ಮಹಾರಾಷ್ಟ್ರದಲ್ಲಿ ಕುಟುಂಬದಿಂದ ಇಬ್ಬರು ಆಗಲೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆಂದು ಎನ್‌ಸಿಪಿ ನಾಯಕ ಶರದ್ ಪವಾರ್ ಚುನಾವಣಾ ಕಣಕ್ಕಿಳಿಯದಿರಲು ನಿರ್ಧರಿಸಿದ್ದಾರೆ.

ಈ ಮುನ್ನ ಪವಾರ್‌ ಅವರು ಲೋಕಸಭೆ ಚುನಾವಣೆಯಿಂದ ನಿವೃತ್ತರಾಗಿದ್ದರೂ ‘ಕೊನೇ ಸಲ ಒಂದು ಕೈ ನೋಡೇ ಬಿಡೋಣ’ ಎಂದು ಪಣ ತೊಟ್ಟು ಮಹಾರಾಷ್ಟ್ರದ ಮಧಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಕೊನೇ ಕ್ಷಣದಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪವಾರ್‌, ‘ನಾನು ಮಧಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಭಾರಿ ಒತ್ತಡವಿತ್ತು. ಆದರೆ ನನ್ನ ಉಮೇದುವಾರಿಕೆ ಘೋಷಣೆ ಆಗಿಲ್ಲ. ಈಗಾಗಲೇ ನನ್ನ ಕುಟುಂಬದ ಇಬ್ಬರು ಸ್ಪರ್ಧಿಸುತ್ತಿದ್ದು, ನಾನೂ ಸ್ಪರ್ಧಿಸಿದರೆ ಚೆನ್ನಾಗಿರಲ್ಲ ಎಂದು ತೀರ್ಮಾನಿಸಿದ್ದೇನೆ,’ ಎಂದು ಹೇಳಿದರು.

‘ಸೋಲಿನ ಭೀತಿಯಿಂದ ನೀವು ಈ ಕ್ರಮಕ್ಕೆ ಮುಂದಾಗಿದ್ದೀರಾ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘14 ಚುನಾವಣೆಗಳಲ್ಲಿ ಸತತ ಜಯ ಸಾಧಿಸಿದ್ದೇನೆ. 15ನೇ ಚುನಾವಣೆ ನನಗೆ ಭಯವಾಗುತ್ತಾ?’ ಎಂದು ತಿರುಗೇಟು ನೀಡಿದರು. ಮಧಾ ಕ್ಷೇತ್ರ ಹಾಲಿ ಎನ್‌ಸಿಪಿ ಬಳಿಯೇ ಇದ್ದು ವಿಜಯಸಿಂಹ ಮೊಹಿತೆ ಪಾಟೀಲ ಅವರು ಸಂಸದರಾಗಿದ್ದಾರೆ.

ಚುನಾವಣೆ ಸಂಬಂಧಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ...

ಸೋದರ ಸಂಬಂಧಿಗೆ ಟಿಕೆಟ್‌:

‘ನನ್ನ ಸೋದರ ಸಂಬಂಧಿ ಅಜಿತ್‌ ಪವಾರ್‌ ಅವರ ಪುತ್ರ ಪಾರ್ಥ ಪವಾರ್‌ ಅವರಿಗೆ ಮಾವಲ್‌ ಕ್ಷೇತ್ರದ ಟಿಕೆಟ್‌ ನೀಡಬೇಕು ಎಂದು ಅನೇಕರು ಒತ್ತಾಯಿಸುತ್ತಿದ್ದಾರೆ. ಮುಂದಿನ ಪೀಳಿಗೆಗೆ ಅವಕಾಶ ನೀಡಬೇಕೆಂಬ ಇಚ್ಛೆ ನನ್ನದು,’ ಎಂದು ಹೇಳುವ ಪಾರ್ಥ ಅವರು ಚುನಾವಣೆಗೆ ಸ್ಪರ್ಧಿಸುವ ಸುಳಿವನ್ನು ಶರದ್‌ ಪವಾರ್‌ ನೀಡಿದರು.

ಪವಾರ್ ನಿರ್ಧಾರಕ್ಕೆ ಶ್ಲಾಘನೆ:

ಕುಟುಂಬ ರಾಜಕಾರಣದ ಬಗ್ಗೆ ಅತೀವ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಶರದ್ ಪವಾರ್ ಈ ನಿರ್ಧಾರಕ್ಕೆ ಎಲ್ಲೆಡೆಯಿಂದ ತೀವ್ರ ಶ್ಲಾಘನೆ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಒಂದು ಕುಟುಂಬದ ಎಷ್ಟು ಜನ ಚುನಾವಣೆಯಲ್ಲಿ ಸ್ಪರ್ಧಿಸಬಹುದೆಂಬುವುದು ಮಾತ್ರ ಇನ್ನೂ ಮಿಲಿಯನ್ ಡಾಲರ್ ಪ್ರಶ್ನೆ...