ಪ್ರಧಾನಿ ಮೋದಿ ಅವರು ಚಿತ್ರದುರ್ಗ ಸಮಾವೇಶಕ್ಕೆ ಆಗಮಿಸಿದ್ದಾಗ ಅವರ ಭದ್ರತಾ ಸಿಬ್ಬಂದಿ ಸೂಟ್‌ಕೇಸ್‌ವೊಂದನ್ನು ಖಾಸಗಿ ವಾಹನದಲ್ಲಿ ತೆಗೆದುಕೊಂಡು ಹೋಗಿದ್ದು, ಈ ಬಗ್ಗೆ ತನಿಖೆ ನಡೆಸಲು ಆಗ್ರಹಿಸಿದೆ.
ಕೋಲಾರ/ಬೆಂಗಳೂರು: ಪ್ರಧಾನಿ ಮೋದಿ ಅವರು ಚಿತ್ರದುರ್ಗ ಸಮಾವೇಶಕ್ಕೆ ಆಗಮಿಸಿದ್ದಾಗ ಅವರ ಭದ್ರತಾ ಸಿಬ್ಬಂದಿ ಸೂಟ್‌ಕೇಸ್‌ವೊಂದನ್ನು ಖಾಸಗಿ ವಾಹನದಲ್ಲಿ ತೆಗೆದುಕೊಂಡು ಹೋಗಿದ್ದ ವಿಡಿಯೋವೊಂದು ಈಗ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.
ಈ ಪೆಟ್ಟಿಗೆ ಕುರಿತು ಚುನಾವಣಾ ಆಯೋಗ ತನಿಖೆಗೆ ಆದೇಶಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರಾವ್ ಟ್ವೀಟ್ ಮೂಲಕ ಚುನಾವಣಾ ಆಯೋಗಕ್ಕೆ ವಿಚಾರಣೆ ನಡೆಸುವಂತೆ ಆಗ್ರಹಿಸಿದ್ದಾರೆ. ಕೋಲಾರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ವಿಮಾನದಿಂದ ಇಳಿಯುವಾಗ ಮೋದಿ ಅವರು ಸೂಟ್‌ಕೇಸ್‌ಗಳನ್ನು ತರುತ್ತಾರೆ, ಈ ಸೂಟ್‌ಕೇಸ್‌ಗಳಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಇದರ ಪರಿಶೀಲನೆ ಆಗಬೇಕು ಎಂದಿದ್ದಾರೆ. ಜತೆಗೆ, ಈ ಕುರಿತು ತನಿಖೆ ಆಗಬೇಕೆಂದು ಇದೇ ವೇಳೆ ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಈ ರಹಸ್ಯ ಪೆಟ್ಟಿಗೆ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಟ್ವೀಟ್ ಮೂಲಕ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದಾರೆ. ಚಿತ್ರದುರ್ಗ ಸಮಾವೇಶಕ್ಕೆ ಮೋದಿ ಆಗಮಿಸಿದ ವೇಳೆ ಹೆಲಿಕಾಪ್ಟರ್‌ನಿಂದ ರಹಸ್ಯಪೆಟ್ಟಿಗೆಯೊಂದನ್ನು ಕೆಳಕ್ಕಿಳಿಸಲಾಗಿತ್ತು. ಅದನ್ನು ನಂತರ ನೇರವಾಗಿ ಖಾಸಗಿ ಇನ್ನೋವಾ ವಾಹನದಲ್ಲಿ ತ್ವರಿತವಾಗಿ ಕೊಂಡೊಯ್ಯಲಾಯಿತು. ಆ ಪೆಟ್ಟಿಗೆಯಲ್ಲಿ ಏನಿತ್ತು? ಮತ್ತು ಆ ವಾಹನ ಯಾರಿಗೆ ಸೇರಿದ್ದು ಎನ್ನುವ ಕುರಿತು ಚುನಾವಣಾ ಆಯೋಗ ವಿಚಾರಣೆ ನಡೆಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
