Asianet Suvarna News Asianet Suvarna News

ಅಂದು ಕೈಗೆ ಮುಳುವಾಗಿದ್ದ ವಿಜಯಾ ಬ್ಯಾಂಕ್ ಈಗ ಬಿಜೆಪಿಗೇ ತಿರುಗುಬಾಣ?

ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಮುಳುವಾಗಿದ್ದ ಸುಂದರರಾಮ ಶೆಟ್ಟಿ ರಸ್ತೆ ವಿಚಾರ| ವಿಜಯಾ ಬ್ಯಾಂಕ್ ಈಗ ಬಿಜೆಪಿಗೇ ತಿರುಗುಬಾಣ?

Merger of Vijaya Bank To Backfire On BJP In Loksabha Polls at Coastal Karnataka
Author
Bangalore, First Published Apr 1, 2019, 11:26 AM IST

ಬೆಂಗಳೂರು[ಏ.01]: ಕೇಂದ್ರ ಸರ್ಕಾರ ಏ.1ರಿಂದ ವಿಜಯಾ ಬ್ಯಾಂಕ್ ಅಸ್ತಿತ್ವವನ್ನು ಅಧಿಕೃತವಾಗಿ ರದ್ದುಗೊಳಿಸಿ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಳಿಸಲಿದೆ. ಕರಾವಳಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ವಿಜಯಾ ಬ್ಯಾಂಕ್ ಚುನಾವಣೆಯ ಹೊಸ್ತಿಲಲ್ಲೇ ವಿಲೀನಕ್ಕೆ ಒಳಗಾಗಿದೆ. ವರ್ಷದ ಹಿಂದೆ ರಸ್ತೆಯೊಂದಕ್ಕೆ ವಿಜಯಾ ಬ್ಯಾಂಕ್‌ನ ಸಂಸ್ಥಾಪಕರಲ್ಲೊಬ್ಬರಾದ ಮೂಲ್ಕಿ ಸುಂದರರಾಮ ಶೆಟ್ಟರ ಹೆಸರಿಡುವ ನಿಟ್ಟಿನಲ್ಲಿ ಹೋರಾಟ ನಡೆಸಿದ್ದ ಬಿಜೆಪಿಗೆ ಈಗ ಅದೇ ವಿಚಾರ ತಿರುಗುಬಾಣವಾಗಲಿದೆಯೇ ಎಂಬ ಚರ್ಚೆ ರಾಜಕೀಯ ಮೊಗಸಾಲೆಯಲ್ಲಿ ಆರಂಭಗೊಂಡಿದೆ

ಒಂದೆಡೆ ಕಾಂಗ್ರೆಸ್ ನಿರಂತರವಾಗಿ ಸಂಸದರ ಆಡಳಿತ ವೈಫಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದರೆ, ಈಗ ನಿರ್ಣಾಯಕ ಹಂತದಲ್ಲಿ ವಿಜಯಾ ಬ್ಯಾಂಕ್ ಅಸ್ತ್ರವೂ ಅದರ ಬತ್ತಳಿಕೆಗೆ ಸೇರಿಕೊಂಡಿದೆ. ಬ್ಯಾಂಕ್ ವಿಲೀನ ತಡೆಗೆ ಏನೂ ಕ್ರಮ ಕೈಗೊಳ್ಳದ ಕುರಿತು ವಾಕ್‌ಪ್ರಹಾರ ನಡೆಸುತ್ತಿದೆ. ಜತೆಗೆ ಇತರ ಪಕ್ಷಗಳು, ಸಂಘ ಸಂಸ್ಥೆಗಳು ಕೂಡ ನಳಿನ್ ಮೇಲೆ ಮುಗಿಬೀಳಲು ತಯಾರಿ ನಡೆಸಿವೆ. ಜಿಲ್ಲೆಯ ವಿವಿಧೆಡೆ ಕರಾಳ ದಿನ ಆಚರಣೆಗೆ ‘ವಿರೋಧಿ’ಗಳು ಅಣಿಯಾಗಿದ್ದಾರೆ.

ಅಂದು ಬಿಜೆಪಿ ಹೋರಾಟ:

ಕಳೆದ ವಿಧಾನಸಭೆ ಚುನಾವಣೆಗೆ ಮೊದಲು ನಗರದ ಲೈಟ್ ಹೌಸ್ ಹಿಲ್ ರಸ್ತೆಗೆ ಮೂಲ್ಕಿ ಸುಂದರ ರಾಮ ಶೆಟ್ಟರ ಹೆಸರಿಡುವ ವಿಚಾರದಲ್ಲಿ ಭಾರಿ ರಾದ್ಧಾಂತವೇ ನಡೆದಿತ್ತು. ಮಹಾನಗರ ಪಾಲಿಕೆಯಲ್ಲಿ ನಡೆದ ನಿರ್ಣಯದಂತೆ ರಸ್ತೆಗೆ ಹೆಸರಿಡಲು ದಿನಾಂಕ ನಿಗದಿ ಮಾಡಿದಾಗ ಸೈಂಟ್ ಅಲೋಶಿಯಸ್ ಕಾಲೇಜಿನ ವತಿಯಿಂದ ಪ್ರತಿಭಟನೆ ಆಯೋಜಿಸಲಾಗಿತ್ತು. ಪರ- ವಿರೋಧದ ಕೂಗು ಹೆಚ್ಚಿದಾಗ ಯಥಾಸ್ಥಿತಿ ಕಾಪಾಡುವಂತೆ ರಾಜ್ಯ ಸರ್ಕಾರ 2017ರ ಜು.1ರಂದು ದಿಢೀರನೆ ರಾತ್ರೋರಾತ್ರಿ ಆದೇಶ ಜಾರಿಗೊಳಿಸಿತ್ತು. ಇದಕ್ಕೆ ಆಗಿನ ಶಾಸಕ ಜೆ.ಆರ್. ಲೋಬೊ ಅವರೇ ಕಾರಣ ಎಂದು ಆರೋಪಿಸಿದ್ದ ಬಿಜೆಪಿಯವರು ಬಂಟ ಸಮುದಾಯವನ್ನು ಪ್ರಭಾವಿತಗೊಳಿಸಿದ್ದರು.

ಅಂದಿನಿಂದ ಚುನಾವಣೆ ನಡೆಯುವವರೆಗೂ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ರಸ್ತೆ ವಿಚಾರದಲ್ಲೇ ಪರ- ವಿರೋಧದ ರಾಜಕಾರಣ ನಡೆದಿತ್ತು. ಲೋಬೊ ವಿರುದ್ಧ ಬಿಜೆಪಿಗೆ ಅಂದು ಪ್ರಬಲ ಅಸ್ತ್ರವಾಗಿದ್ದು ಇದೇ ವಿಚಾರ. ಕೊನೆಗೂ ಜೆ.ಆರ್. ಲೋಬೊ ಅವರ ಸೋಲಿಗೆ ಇದು ಪ್ರಮುಖ ಕಾರಣವಾಯಿತು

ಇಂದು ಮೌನ: ಚುನಾವಣೆಗೆ ಮೊದಲು ಮೂಲ್ಕಿ ಸುಂದರ ರಾಮ ಶೆಟ್ಟರ ಹೆಸರಿಡಲು ಹೋರಾಡಿದ್ದ ಬಿಜೆಪಿ, ಗೆದ್ದ ಬಳಿಕ ಈ ನಿಟ್ಟಿನಲ್ಲಿ ಯಾವುದೇ ಮುಂದಡಿ ಇಡಲಿಲ್ಲ. ಇಂದಿಗೂ ಆ ರಸ್ತೆಗೆ ನಾಮಕರಣವೇ ಆಗಿಲ್ಲ. ಅಂದು ಹೋರಾಡಿದ್ದ ಬಿಜೆಪಿ ನಾಯಕರು ಈಗ ಮೌನ ವಹಿಸಿದ್ದಾರೆ. ಈ ನಡುವೆ, ಅದೇ ವಿಜಯಾ ಬ್ಯಾಂಕ್ ವೀಲಿನಗೊಂಡಿದ್ದು, ಅಂದಿನ ಬಿಜೆಪಿಯವರ ಅಸ್ತ್ರವೇ ಇಂದು ಅವರಿಗೆ ಪ್ರತ್ಯಸ್ತ್ರವಾಗಲಿದೆಯೇ ಕಾದುನೋಡಬೇಕಿದೆ.

ಬಂಟರ ಒಲವಿಗೆ ಪೈಪೋಟಿ: ಲೋಕಸಭೆ ಚುನಾವಣೆಯ ಕಣದಲ್ಲಿರುವ ಕಾಂಗ್ರೆಸ್‌ನ ಮಿಥುನ್ ರೈ ಬಂಟ ಸಮುದಾಯವರೇ ಆಗಿರುವುದು ಮತ್ತು ಬ್ಯಾಂಕ್ ವಿಚಾರವನ್ನು ಕಾಂಗ್ರೆಸ್ ಕೈಗೆತ್ತಿಕೊಂಡಿರುವುದು ಬಿಜೆಪಿಗೆ ಇನ್ನೊಂದು ತಲೆನೋವಾಗಿದೆ. ಸಮುದಾಯದ ಓಟುಗಳನ್ನು ಸೆಳೆಯುವ ನಿಟ್ಟಿನಲ್ಲಿ ಎರಡೂ ಪಕ್ಷದವರು ಶತಪ್ರಯತ್ನದಲ್ಲಿ ತೊಡಗಿದ್ದಾರೆ. ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರ ಹೆಸರನ್ನು ಮುಂದಿಟ್ಟು ಎರಡೂ ಪಕ್ಷಗಳು ರೇಜಿಗೆ ಹುಟ್ಟಿಸುವ ರಾಜಕಾರಣಕ್ಕೆ ಇಳಿದಿವೆ. ಇಷ್ಟೆಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸುಮಾರು ಒಂದೂವರೆ ಲಕ್ಷದಷ್ಟು ಓಟ್‌ಬ್ಯಾಂಕ್ ಹೊಂದಿರುವ ಬಂಟ ಸಮುದಾಯ ಮಾತ್ರ ಎತ್ತ ಕಡೆ ಒಲವು ತೋರಲಿದೆ ಎಂಬುದು ಸಸ್ಪೆನ್ಸ್ ಆಗಿಯೇ ಉಳಿದಿದೆ.

-ಸಂದೀಪ್ ವಾಗ್ಲೆ, ಕನ್ನಡಪ್ರಭ

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

Follow Us:
Download App:
  • android
  • ios