ನವದೆಹಲಿ (ಏ. 16): ದೇಶದ ರಾಜಕೀಯ ಪಕ್ಷಗಳ ಪೈಕಿ ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 669 ಕೋಟಿ ರು. ಬ್ಯಾಂಕ್‌ ಬ್ಯಾಲೆನ್ಸ್‌ನೊಂದಿಗೆ ಅತಿ ಶ್ರೀಮಂತ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಅದೇ ರಾಜ್ಯದ ಇನ್ನೊಂದು ರಾಜಕೀಯ ಪಕ್ಷವಾದ ಸಮಾಜವಾದಿ ಪಕ್ಷ (ಎಸ್‌ಪಿ) 471 ಕೋಟಿ ರು.ನೊಂದಿಗೆ ನಂ.2 ಶ್ರೀಮಂತ ರಾಜಕೀಯ ಪಕ್ಷವಾಗಿದೆ. ಕಾಂಗ್ರೆಸ್‌ ಪಕ್ಷ ನಂ.3 ಹಾಗೂ ಬಿಜೆಪಿ ನಂ.4 ಶ್ರೀಮಂತ ರಾಜಕೀಯ ಪಕ್ಷಗಳಾಗಿವೆ.

ಈ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಮತವನ್ನೂ ಚಲಾಯಿಸಿಲ್ಲ ಈ ಗ್ರಾಮ!

ಮಾಯಾವತಿಯವರ ಬಿಎಸ್‌ಪಿ ದೆಹಲಿಯ ಎಂಟು ರಾಷ್ಟ್ರೀಕೃತ ಬ್ಯಾಂಕುಗಳ ಖಾತೆಗಳಲ್ಲಿ ತನ್ನ ಹಣ ಇರಿಸಿದೆ. ಪಕ್ಷದ ಬಳಿ 95.54 ಲಕ್ಷ ರು. ನಗದು ಇದೆ. ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಒಂದೇ ಒಂದು ಸೀಟು ಗೆಲ್ಲದಿದ್ದರೂ ದೇಣಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದಿಲ್ಲ ಎಂಬುದು ಗಮನಾರ್ಹ. ವಿವಿಧ ರಾಜಕೀಯ ಪಕ್ಷಗಳು ಸಲ್ಲಿಸಿರುವ ವೆಚ್ಚದ ವರದಿಯನ್ನು ಆಧರಿಸಿ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ಆಸ್ತಿ ವಿವರವನ್ನು ಕ್ರೋಢೀಕರಿಸಿದೆ.

ದೇಶದ 3ನೇ ಅತಿ ಶ್ರೀಮಂತ ಪಕ್ಷವಾಗಿರುವ ಕಾಂಗ್ರೆಸ್‌ನ ಬ್ಯಾಂಕ್‌ ಖಾತೆಗಳಲ್ಲಿ 196 ಕೋಟಿ ರು. ಇದೆ. ಇದು ಕಳೆದ ನ.2ರಂದು ಕರ್ನಾಟಕದ ವಿಧಾನಸಭೆ ಚುನಾವಣೆ ನಂತರ ಪಕ್ಷ ಸಲ್ಲಿಸಿದ ವಿವರವಾಗಿದ್ದು, ಇತ್ತೀಚಿನ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಪಕ್ಷ ಗೆದ್ದ ನಂತರ ವೆಚ್ಚದ ವಿವರವನ್ನು ಸಲ್ಲಿಕೆ ಮಾಡಿಲ್ಲ.

ದೇಶದ 4ನೇ ಅತಿ ಶ್ರೀಮಂತ ಪಕ್ಷ ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷವಾಗಿದ್ದು, ಅದರ ಬಳಿ 107 ಕೋಟಿ ರು.ಗಳಿವೆ. 5ನೇ ಸ್ಥಾನದಲ್ಲಿರುವ ಬಿಜೆಪಿಯ ಬಳಿ 82 ಕೋಟಿ ರು. ಇದೆ. ಬಿಜೆಪಿ ಬಳಿ ಹಣದ ಸಂಗ್ರಹ ಕಡಿಮೆಯಿದ್ದರೂ 2017-18ರಲ್ಲಿ ಅತಿಹೆಚ್ಚು 1027 ಕೋಟಿ ರು. ದೇಣಿಗೆ ಸಂಗ್ರಹಿಸಿದ ಪಕ್ಷ ಇದೇ ಆಗಿದೆ. ಆದರೆ, ಅದೇ ವರ್ಷ 758 ಕೋಟಿ ರು.ಗಳನ್ನು ಪಕ್ಷವು ವೆಚ್ಚ ಮಾಡಿದೆ.

ಯಾರಲ್ಲಿ ಎಷ್ಟು ಹಣವಿದೆ?

1. ಬಿಎಸ್‌ಪಿ 669 ಕೋಟಿ

2. ಎಸ್‌ಪಿ 471 ಕೋಟಿ

3. ಕಾಂಗ್ರೆಸ್‌ 196 ಕೋಟಿ

4. ಟಿಡಿಪಿ 107 ಕೋಟಿ

5. ಬಿಜೆಪಿ 82 ಕೋಟಿ