ಮಂಡ್ಯ :  ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ತಮ್ಮ ಸ್ಥಿರ ಹಾಗೂ ಚರಾಸ್ತಿಗಳ ಒಟ್ಟು ಮೌಲ್ಯ 23.50 ಕೋಟಿ ಎಂದು ಅಫಿಡವಿಟ್‌ನಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ. ಈ ಆಸ್ತಿಯಲ್ಲಿ ಪತಿ ದಿ.ಅಂಬರೀಶ್ ಹೆಸರಲ್ಲಿರುವ ಆಸ್ತಿಯೂ ಸೇರಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಒಂದು ಮನೆ, ಉತ್ತರಹಳ್ಳಿಯಲ್ಲಿ ಒಂದು ಮನೆ, ಪಾಲುದಾರಿಕೆಯಲ್ಲಿರುವ ಅಪಾರ್ಟ್‌ಮೆಂಟ್‌ ಸೇರಿದಂತೆ ಒಟ್ಟಾರೆ ಮೌಲ್ಯ 17.72 ಕೋಟಿ, ಅಲ್ಲದೇ ಒಂದೂವರೆ ಕೋಟಿ ರು. ಮೌಲ್ಯದ 5.6 ಕೆ.ಜಿ ಚಿನ್ನ, 12 ಲಕ್ಷ ರು. ಮೌಲ್ಯದ 31 ಕೆಜಿ ಬೆಳ್ಳಿ, ವಿವಿಧೆಡೆ 1.97 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ವಾಣಿಜ್ಯ ಮಳಿಗೆಗಳ ಒಟ್ಟು ಮೌಲ್ಯ  41 ಲಕ್ಷ ಎಂದು ಘೋಷಣೆ ಮಾಡಿಕೊಂಡಿದ್ದಾರೆ.

ತಮ್ಮ ಕುಟುಂಬ ಸರ್ಕಾರಕ್ಕೆ ಯಾವುದೇ ತೆರಿಗೆ ಬಾಕಿ ಉಳಿಸಿಕೊಂಡಿರುವುದಿಲ್ಲ. ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ತಮ್ಮ ಮೇಲೆ ಇರುವುದಿಲ್ಲ.  1.42 ಕೋಟಿ ಕೈ ಸಾಲವಿದೆ. ಉಳಿತಾಯ ಖಾತೆ, ವಿಮೆ, ಷೇರು ಸೇರಿದಂತೆ ವಿವಿಧೆಡೆಗಳಲ್ಲಿ 5.68 ಕೋಟಿ ಹೂಡಿಕೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿರುವ ಸುಮಲತಾ ಬೆಂಗಳೂರಿನ ಜೆ.ಪಿ.ನಗರದ ನಿವಾಸಿಯಾಗಿದ್ದಾರೆ. ಮದ್ದೂರು ವಿಧಾನಸಭಾ ಕ್ಷೇತ್ರದ ದೊಡ್ಡರಸಿನಕೆರೆ ಗ್ರಾಮದ ಬೂತ್‌ ಸಂಖ್ಯೆ 164ರಲ್ಲಿ ಸುಮಲತಾ ಅವರ ಮತದಾರರ ಕ್ರಮ ಸಂಖ್ಯೆ 448 ಆಗಿದೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ