ಶಿವಮೊಗ್ಗ : ರಾಜ್ಯದಲ್ಲಿ ಲೋಕಸಭಾ ಚುನಾವಣೆ  ಮುಕ್ತಾಯವಾಗಿದ್ದು, ಅಭ್ಯರ್ಥಿಗಳು ಫಲಿತಾಂಶದತ್ತ ಕಾತರರಾಗಿದ್ದಾರೆ. 

 ಇತ್ತ ಟಫ್ ಫೈಟ್ ಗೆ ಸಾಕ್ಷಿಯಾಗಿದ್ದ ಶಿವಮೊಗ್ಗ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರು ಗೆಲುವಿನ ಭರವಸೆ ವ್ಯಕ್ತಪಡಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ, ಲೋಕಸಭಾ ಉಪ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ ಮಧು ಬಂಗಾರಪ್ಪ ಈ ಬಾರಿ ಹಾಲಿ ಸಂಸದ ರಾಘವೇಂದ್ರ ವಿರುದ್ಧ  ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ.

ಟ್ರಬಲ್ ಶೂಟರ್ ಎಂದೇ ಹೆಸರಾದ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ಮುಖಂಡರು ಜಿಲ್ಲೆಯಲ್ಲಿ ಮಧು ಪರ ಪ್ರಚಾರ ನಡೆಸಿದ್ದು ವರ್ಕೌಟ್ ಆಗುವ ಭರವಸೆಯಲ್ಲಿದ್ದಾರೆ. 

ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿರುವ ಮಧು ಬಂಗಾರಪ್ಪ, ಜೆಡಿಎಸ್ ಪಕ್ಷದ ನಾಯಕರು ಒಗ್ಗೂಡಿ ಕೆಲಸ ಮಾಡಿದ್ದಾರೆ.  ಎಲ್ಲಾ ಕ್ಷೇತ್ರದಲ್ಲಿ ಹೆಚ್ಚಿನ ಲೀಡ್ ತೆಗೆದುಕೊಂಡು ಗೆದ್ದೆ ಗೆಲ್ಲುತ್ತೇನೆ ಎಂದಿದ್ದಾರೆ. 

ಪರಸ್ಪರ ವೈಮನಸ್ಸು ಹೊಂದಿದ್ದ ಭದ್ರಾವತಿಯ ಹಾಲಿ ಶಾಸಕ ಬಿ ಕೆ ಸಂಗಮೇಶ್ವರ ಹಾಗೂ ಮಾಜಿ ಶಾಸಕ ಅಪ್ಪಾಜಿ ಗೌಡ ಎಲ್ಲಾ ವೈಮನಸ್ಸು ಮರೆತು ಕೆಲಸ ಮಾಡಿದ್ದಾರೆ ಇದು ಪ್ಲಸ್ ಪಾಯಿಂಟ್ ಆಗಲಿದೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲಾಗುವುದು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ. 

ಇನ್ನು ಚುನಾವಣೆ ಫಲಿತಾಂಶಕ್ಕೆ ಒಂದು ತಿಂಗಳು ಬಾಕಿ ಉಳಿದಿದ್ದು, ಈ ಸಮಯದಲ್ಲಿ, ತಮ್ಮ ಕೆಲಸಗಳ ಬಗ್ಗೆ ಮಾತನಾಡಿದ್ದಾರೆ.  ಶಾಸಕನಾಗುವ ಮೊದಲು ಬಗರ್ ಹುಕುಂ ರೈತರ ಪರ ಹೋರಾಟ ಮಾಡಿದ್ದು ಶಾಸಕನಾದ ಮೇಲೆ ನೀರಾವರಿ ಯೋಜನೆಗೆ ಹೋರಾಟ ನಡೆಸಿದ್ದು ನನಗೆ ಸಮಾಧಾನ ತಂದಿದೆ ಎಂದರು. 

ರಾಜ್ಯ ಸರ್ಕಾರ ಬೀಳಲಿದೆ ಎನ್ನುವ ಬಿಜೆಪಿ ನಾಯಕರ ಭವಿಷ್ಯ ಸುಳ್ಳಾಗಲಿದ್ದು, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಬೀಳುವುದು ಖಚಿತ. ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರವನ್ನು ಬೀಳಿಸುವುದು ಮಾತ್ರ ಯಾರಿಂದಲೂ ಸಾಧ್ಯವಿಲ್ಲ ಎಂದರು. 

‘ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ’