‘ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ’
ಲೋಕಸಭಾ ಚುನಾಣೆಯು ಮುಕ್ತಾಯವಾಗಿದೆ. ರಾಜ್ಯದಲ್ಲಿ ಇನ್ನೇನಿದ್ದರು ಫಲಿತಾಂಶದ ಕಾತರ ಅಭ್ಯರ್ಥಿಗಳಲ್ಲಿದೆ. ಇದೇ ವೇಳೆ ಹಲವು ಮುಖಂಡರು ಗೆಲುವಿನ ಭರವಸೆಯಲ್ಲಿದ್ದಾರೆ.
ಶಿವಮೊಗ್ಗ : ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಹಲವೆಡೆ ಅಭ್ಯರ್ಥಿಗಳು ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.
ಇಬ್ಬರು ಮುಖ್ಯಮಂತ್ರಿಗಳ ಪುತ್ರರ ಹಣಾಹಣಿಯ ಕ್ಷೇತ್ರವಾಗಿದ್ದ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಗೆಲುವು ಖಚಿತ ಎಂದು ಬಿಜೆಪಿ ನಾಯಕ ಆಯನೂರು ಮಂಜುನಾಥ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಬಿ ವೈ ರಾಘವೇಂದ್ರ ವಿಜಯಶಾಲಿ ಆಗುತ್ತಾರೆ .ಲೋಕಸಭಾ ಕ್ಷೇತ್ರದಲ್ಲಿ ನಮೋ ಟ್ರೆಂಡ್ ಹಿನ್ನೆಲೆಯಲ್ಲಿ ಯುವ ಮತದಾರರು ಬಿಜೆಪಿಗೆ ಮತ ಹಾಕಿದ್ದಾರೆ. ನೂರು ಬಸ್ಸುಗಳಲ್ಲಿ , ರೈಲುಗಳಲ್ಲಿ , ಸ್ವತಃ ಕಾರಿನಲ್ಲಿ ಬಂದು ಮತ ಚಲಾವಣೆ ಮಾಡಿದ್ದಾರೆ ಎಂದರು.
ಕಳೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ರಾಘವೇಂದ್ರ ಗೆಲುವು ಪಡೆದಿದ್ದು, ಕಳೆದ 6 ತಿಂಗಳಲ್ಲಿ ಬಿಜೆಪಿ ಸಂಸದರಾಗಿ ಮಾಡಿದ ಪ್ರಯತ್ನದಿಂದ, ಅಭಿವೃದ್ಧಿ ಕಾರ್ಯಗಳಿಂದ ಹೆಚ್ಚು ಮತಗಳು ಬಿಜೆಪಿ ಪರವಾಗಿ ಚಲಾಯಿಸಲ್ಪಟ್ಟಿವೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಖಚಿತ ಎಂದು ಮಂಜುನಾಥ್ ಹೇಳಿದರು.
ಇನ್ನು ಇದೇ ವೇಳೆ ವಿಪಕ್ಷ ಮುಖಂಡರ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಜೆಡಿಎಸ್ ಒಗ್ಗೂಡಿ ಬಂದರೂ ನಮ್ಮ ಗೆಲುವಿನೊಳಗೆ ನಮ್ಮ ವಿರೋಧಿ ಗಳ ಪಾತ್ರ ಇದೆ. ವಿರೋಧಿಗಳು ಈಗಲೇ ಕಾರಣ ಹುಡುಕಿಕೊಳ್ಳುವುದು ಒಳ್ಳೆಯದು. ಸೋತ ಮೇಲೆ ಮತಯಂತ್ರ ದ ಮೇಲೆ ದೋಷ ಹೇರುವುದು ಮಾಡುತ್ತಾರೆ ಎಂದು ವಿಪಕ್ಷ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.
ಅಲ್ಲದೇ ಮತದಾನ ಜಾಗೃತಿಗಾಗಿ ಜಿಲ್ಲಾಧಿಕಾರಿ ಡಾ. ದಯಾನಂದ ಅವರು ಉಪವಾಸ ಸತ್ಯಾಗ್ರಹ ನಡೆಸಿದ್ದು, ಈ ಪ್ರಯತ್ನವೂ ಸಹ ಮತದಾನ ಪ್ರಮಾಣ ಹೆಚ್ಚಳವಾಗಲು ಕಾರಣವಾಗಿದೆ ಎಂದು ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಹೇಳಿದರು.
12ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಆಯನೂರು ಮಂಜುನಾಥ್ ಅವರು ಕಾಂಗ್ರೆಸ್ ನಲ್ಲಿದ್ದ ಬಂಗಾರಪ್ಪ ಅವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಸದ್ಯ ಬಿಜೆಪಿ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.