ಮುಖ್ಯಮಂತ್ರಿ ಪುತ್ರ, ಅಂಬಿ ಪತ್ನಿ ನಡುವೆ ಜಿದ್ದಾ ಜಿದ್ದಿ, ರೋಚಕ ಕದನ | ಮಂಡ್ಯ ಫಲಿತಾಂಶದ ಮೇಲೆ ರಾಜ್ಯದ ಕಣ್ಣು ಜೆಡಿಎಸ್‌ಗೆ ಕಾಂಗ್ರೆಸ್ ಒಳೇಟಿನ ಭೀತಿ | ಸುಮಲತಾಗೆ ದೇವೇಗೌಡ, ಸಿಎಂ ಕುಮಾರಸ್ವಾಮಿ ಜನಪ್ರಿಯತೆ ಮುಳುವು

ಕೆ.ಎನ್. ರವಿ, ಕನ್ನಡಪ್ರಭ ವಾರ್ತೆ

ಮಂಡ್ಯ[ಏ.09]: ಮಂಡ್ಯ ಎಂದರೆ ನಾಡಿನ ರಾಜಕೀಯ ರಾಜಧಾನಿ ಎಂದೇ ಗುರುತಿಸಬಹುದು. ರಾಜಕೀಯವಾಗಿ ಅಷ್ಟು ಕ್ರಿಯಾಶೀಲ ಈ ಜಿಲ್ಲೆ. ಸಕ್ಕರೆ, ಕಬ್ಬು, ಕಾವೇರಿ ಹಾಗೂ ಕಾವೇರಿಗಾಗಿ ನಡೆಯುವ ಹೋರಾಟ ಈ ಜಿಲ್ಲೆಯನ್ನು ರಾಜಕೀಯವಾಗಿ ಕ್ರಿಯಾಶೀಲವಾಗಿ ಮಾಡಿ ಬಿಟ್ಟಿದೆ. ಜಿಲ್ಲೆಯ ಜನ ರಾಜಕೀಯ ಆಗು-ಹೋಗುಗಳ ಬಗ್ಗೆ ಒಂದು ನೋಟ ನೆಟ್ಟಿರುತ್ತಾರೆ. ಇಂತಹ ರಾಜಕೀಯ ಸಕ್ರಿಯ ಜಿಲ್ಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣಾ ಹೋರಾಟ ಮೇರೆ ಮೀರಿದೆ. ಮಂಡ್ಯ ಕಡೆ ಇಡೀ ಇಂಡಿಯಾ ತಿರುಗಿ ನೋಡುವಂತಹ ರಾಜಕೀಯ ಕದನ ಆರಂಭವಾಗಿದೆ.

ಮುಖ್ಯಮಂತ್ರಿ ಕುಮಾರ ಸ್ವಾಮಿ ಮಂಡ್ಯದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಲು ಮುಂದಾದರೆ ಅವರಿಗೆ ಎದುರಾದವರು ಅಂಬರೀಷ್ ಪತ್ನಿ ಸುಮಲತಾ. ಇದು ಜಿಲ್ಲಾ ರಾಜಕೀಯ ಚಿತ್ರಣವನ್ನು ಬದಲಿಸಿದ್ದಷ್ಟೇ ಅಲ್ಲದೆ, ಮಂಡ್ಯ ಲೋಕಸಭಾ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆಯುವಂತೆ ಮಾಡಿದೆ.

ಇಂಡಿಯಾ ಕಣ್ಣು ಮಂಡ್ಯ ಮ್ಯಾಲೆ

ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ. ಅವರಿಗೆ ಸವಾಲು ಹಾಕಿರುವ ಸುಮಲತಾ ಆರಂಭದಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಕಾಂಗ್ರೆಸ್ ಈ ಕ್ಷೇತ್ರವನ್ನು ಮೈತ್ರಿ ಪರಿಣಾಮವಾಗಿ ಜೆಡಿಎಸ್‌ಗೆ ಬಿಟ್ಟುಕೊಟ್ಟ ಕಾರಣ ಸುಮಲತಾಗೆ ಟಿಕೆಟ್ ನಿರಾಕರಿಸಲಾಯಿತು. ಹೀಗಾಗಿ ಅವರು ಪಕ್ಷೇತರ ಅಭ್ಯರ್ಥಿ. ಅಷ್ಟೇ ಅಲ್ಲ, ಸುಮಲತಾ ಅವರಿಗೆ ಬಿಜೆಪಿಯೂ ನೇರವಾಗಿ ಬೆಂಬಲ ಘೋಷಿಸಿತು. ಜತೆಗೆ, ಕಾಂಗ್ರೆಸ್‌ನ ಸ್ಥಳೀಯ ನಾಯಕರಾದ ಚಲುವರಾಯಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಮೊದಲಾದವರು ಪರೋಕ್ಷವಾಗಿ ಬೆನ್ನಿಗೆ ನಿಂತರು. ಸುಮಲತಾ ಪರವಾಗಿ ಕನ್ನಡ ಚಿತ್ರೋದ್ಯಮದ ಸೂಪರ್‌ಸ್ಟಾರ್‌ಗಳಾದ ದರ್ಶನ್ ಹಾಗೂ ಯಶ್ ಪ್ರಚಾರಕ್ಕೆ ಇಳಿದರು.

ನೋಡ ನೋಡುತ್ತಿದ್ದಂತೆಯೇ ಸುಮಲತಾ ಅತ್ಯಂತ ಪವರ್‌ಫುಲ್ ಅಭ್ಯರ್ಥಿಯಾಗಿ ಬದಲಾದರು. ಅವರ ಕಾರ್ಯಕ್ರಮಗಳಿಗೆ ಅಪಾರ ಜನಸ್ತೋಮ ಆಗಮಿಸತೊಡ ಗಿತು. ಇದಾಗುತ್ತಿದ್ದಂತೆಯೇ ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ನೇರವಾಗಿ ಮಂಡ್ಯ ಅಖಾಡಕ್ಕೆ ಧುಮುಕಿದರು. ರಣತಂತ್ರಗಳನ್ನು ರೂಪಿಸತೊಡಗಿದರು. ಸುಮಲತಾಗೆ ಬೆಂಬಲ ನೀಡಿದ ಕಾಂಗ್ರೆಸ್ ನಾಯಕರ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿದರು. ಸುಮಲತಾ ಪರ ಪ್ರಚಾರಕ್ಕೆ ತೊಡಗಿದ ನಟರ ಮೇಲೆ ವಾಗ್ದಾಳಿ ನಡೆಸತೊಡಗಿದರು. ಪರಿಣಾಮ- ಮಂಡ್ಯ ಕಣ ರಂಗೇರಿತು. ಇಡೀ ನಾಡಿನ ಕಣ್ಣು ಮಂಡ್ಯದ ಮೇಲೆ ಸ್ಥಿರವಾಯಿತು.

ರಾಷ್ಟ್ರೀಯ ಪಕ್ಷಗಳು ಕಣದಲ್ಲಿಲ್ಲ

ಜೆಡಿಎಸ್ ಅಲೆಯಿಂದಾಗಿ ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಜಿಲ್ಲೆಯಲ್ಲಿ ಧೂಳೀಪಟಗೊಂಡಿದ್ದ ಕಾಂಗ್ರೆಸ್ ಈ ಲೋಕಸಭಾ ಚುನಾವಣೆಯಲ್ಲೂ ಅನಿವಾರ್ಯವಾಗಿ ಹೊಂದಾಣಿಕೆ ರಾಜಕಾರಣದ ಮೊರೆ ಹೋಗಿದೆ. ಪಕ್ಷದ ಸ್ಥಳೀಯ ಕಾರ್ಯಕರ್ತರ ವಿರೋಧವಿದ್ದರೂ ಮೈತ್ರಿಯ ಭಾಗವಾಗಿ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ವರಿಷ್ಠರು ಜೆಡಿಎಸ್‌ಗೆ ಬಿಟ್ಟುಕೊಟ್ಟು ಬೆಂಬಲ ಘೋಷಿಸಿದ್ದಾರೆ. ಇನ್ನು ಬಿಜೆಪಿ ಈ ಜಿಲ್ಲೆಯಲ್ಲಿ ತಳವೂರುವ ಪ್ರಯತ್ನ ನಡೆಸುತ್ತಿದ್ದರೂ ಪಕ್ಷದ ಬೇರಿನ್ನೂ ಗಟ್ಟಿಯಾಗಿಲ್ಲ. ಹಾಗಾಗಿ ಬಿಜೆಪಿಯದ್ದೇ ನಿದ್ದರೂ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಸ್ಥಿತಿ. ಇದೇ ಕಾರಣಕ್ಕೆ ಈ ಬಾರಿ ಬಿಜೆಪಿ ಪಕ್ಷೇತರ ಅಭ್ಯರ್ಥಿ ಸುಮಲತಾರಿಗೆ ಬೆಂಬಲ ಘೋಷಿಸಿದೆ.

ಸರ್ಕಾರದ ವಿರುದ್ಧ ಸಮರಕ್ಕಿಳಿದ ಸುಮ

ಅಂಬರೀಷ್ ಬದುಕಿದ್ದಾಗ ಸುಮಲತಾ ಯಾವತ್ತೂ ರಾಜಕೀಯದ ಕುರಿತು ಬಹಿರಂಗವಾಗಿ ಮಾತನಾಡಿದವರೇ ಅಲ್ಲ. ಆದರೆ, ಅಂಬರೀಷ್ ಅನಿರೀಕ್ಷಿತ ಅಗಲಿಕೆಯ ನೋವಿನ ನಡುವೆ ಅಚ್ಚರಿ ಎಂಬಂತೆ ಮಂಡ್ಯ ಲೋಕಸಭೆಗೆ ಸ್ಪರ್ಧಿಸುವ ಘೋಷಣೆ ಮಾಡಿದ್ದು, ಇದಕ್ಕಾಗಿ ಟಿಕೆಟ್‌ಗೆ ಕಾಂಗ್ರೆಸ್ ನಾಯಕರ ಬಾಗಿಲು ಬಡಿದು ಕೊನೆಗೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು ಎಲ್ಲವೂ ಮಂಡ್ಯದ ಜನ, ಪ್ರತಿಸ್ಪರ್ಧಿಗಳ ಪಾಲಿಗೆ ಅಚ್ಚರಿ ಮೇಲೆ ಅಚ್ಚರಿ. ಅಂಬರೀಷ್ ಪ್ರತಿನಿಧಿಸಿದ್ದ ಪಕ್ಷದ ಬೆಂಬಲವೂ ಕೈಚೆಲ್ಲಿದ ಪರಿಸ್ಥಿತಿಯಲ್ಲಿ ಮೊದಲ ಚುನಾವಣೆಯಲ್ಲೇ ಇಡೀ ಸರ್ಕಾರವನ್ನೇ ಎದುರು ಹಾಕಿಕೊಂಡು ಸ್ಪರ್ಧೆಗಿಳಿಯುವುದು ಸುಲಭದ ಮಾತೇನೂ ಅಲ್ಲ. ಇಂಥ ಸಂದರ್ಭದಲ್ಲಿ ಅನಾಯಾಸವಾಗಿ ಒದಗಿಬಂದ ಬಿಜೆಪಿ ಬೆಂಬಲ, ಜತೆಗೆ ರೈತ ಸಂಘ ಹಾಗೂ ಜಿಲ್ಲೆಯಲ್ಲಿ ಜೆಡಿಎಸ್ ಅನ್ನು ವಿರೋಧಿಸುತ್ತಲೇ ಬಂದಿರುವ ಸ್ಥಳೀಯ ಕಾಂಗ್ರೆಸ್‌ನ ಕೆಲ ಮುಖಂಡರು, ದೊಡ್ಡ ಸಂಖ್ಯೆಯ ಕಾರ್ಯ ಕರ್ತರ ಬೆಂಬಲ ಸುಮಲತಾಗೆ ವರದಾನವಾಗಿದೆ.

8 ಕ್ಷೇತ್ರದಲ್ಲೂ ಜೆಡಿಎಸ್:

ನಿಖಿಲ್‌ಗೆ ಪ್ಲಸ್ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ಧಿಸುತ್ತಿರುವ ನಿಖಿಲ್ ಕುಮಾರಸ್ವಾಮಿಗೂ ಇದು ಮೊದಲ ಚುನಾವಣೆ. ಸ್ಪರ್ಧೆಗೆ ಮೊದಲೇ ಸಿದ್ಧವಾದಂತಿದ್ದ ನಿಖಿಲ್ ಕಳೆದೊಂದು ವರ್ಷದಿಂದ ಮಂಡ್ಯಕ್ಕೆ ಭೇಟಿ ಕೊಟ್ಟು ಕಾರ್ಯಕರ್ತರು, ಜನರ ಜತೆ ಬೆರೆಯುವ ಮೂಲಕ ಕ್ಷೇತ್ರದ ಪರಿಚಯವನ್ನೂ ಮಾಡಿಕೊಂಡಿದ್ದರು. ಹೇಳಿ ಕೇಳಿ ಮಂಡ್ಯ ಜೆಡಿಎಸ್‌ನ ಭದ್ರಕೋಟೆ. ಮೂವರು ಸಚಿವರು, ಕ್ಷೇತ್ರದ ಅಷ್ಟೂ ಶಾಸಕರು ಜೆಡಿಎಸ್‌ನವರೇ ಅನ್ನುವುದು ನಿಖಿಲ್‌ಗೆ ಪ್ಲಸ್ ಪಾಯಿಂಟ್. ಇದರ ಜತೆಗೆ ದೇವೇಗೌಡರ ನಾಮಬಲ ಮತ್ತು ಮುಖ್ಯಮಂತ್ರಿಯೂ ಆಗಿರುವ ತಂದೆ ಕುಮಾರ ಸ್ವಾಮಿಯ ಕೃಪಾಶೀರ್ವಾದವೂ ನಿಖಿಲ್ ಮೇಲಿದೆ

ದಳಪತಿಗಳಿಗೆ ಕಾಂಗ್ರೆಸ್ ಒಳೇಟಿನ ಭೀತಿ

ಮೇಲ್ನೋಟಕ್ಕೆ ಇಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದರೂ ಜೆಡಿಎಸ್‌ಗೆ ಕಾಂಗ್ರೆಸ್‌ನ ಒಳಏಟಿನದ್ದೇ ಆತಂಕ. ಈಗಾಗಲೇ ಅನೇಕ ಮುಖಂಡರು ಬಹಿರಂಗವಾಗಿಯೇ ಮೈತ್ರಿ ಧರ್ಮ ಮುರಿದು ಸುಮಲತಾಗೆ ಬೆಂಬಲ ಘೋಷಿಸಿದ್ದಾರೆ. ಇನ್ನು ಪ್ರಭಾವಿ ಮುಖಂಡರಾದ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಹಾಗೂ ರಮೇಶ್ ಬಾಬು ಬಂಡಿಸಿದ್ದೇಗೌಡರು ಕೂಡ ನಿಖಿಲ್ ವಿರುದ್ಧ ಕೆಲಸ ಮಾಡುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠರ ಮೂಲಕ ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಮೂಗುದಾರ ಹಾಕಿಸುವ ಪ್ರಯತ್ನವೂ ನಡೆಯುತ್ತಿದೆ. ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ, ರೇವಣ್ಣ, ಅನಿತಾ ಕುಮಾರಸ್ವಾಮಿ ಹಾಗೂ ಸ್ಥಳೀಯ ಜೆಡಿಎಸ್ ಮುಖಂಡರು ಕಾಂಗ್ರೆಸ್ ಮುಖಂಡರ ಮನೆಗೆ ತೆರಳಿ ಮಾತುಕತೆ ನಡೆಸಿ ಮನವೊಲಿಕೆ ಪ್ರಯತ್ನ ಮಾಡಿದ್ದಾರೆ. ಇದರ ಜತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿಕೆಶಿ ಸಮ್ಮುಖದಲ್ಲಿ ಸಭೆಗಳ ಮೇಲೆ ಸಭೆಗಳೂ ನಡೆದಿವೆ. ಆದರೂ ವರಿಷ್ಠರ ಮಾತನ್ನು ಕೇಳುವ ಸ್ಥಿತಿಯಲ್ಲಂತೂ ಬಹುತೇಕರು ಇಲ್ಲ. ಇದು ನಿಖಿಲ್‌ಗೆ ಸಮಸ್ಯೆ ಸೃಷ್ಟಿಸಬಹುದು.

ಒಕ್ಕಲಿಗರದ್ದೇ ಪ್ರಾಬಲ್ಯ

ಮಂಡ್ಯದಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ. ಕ್ಷೇತ್ರದಲ್ಲಿ 7.40 ಲಕ್ಷ ಒಕ್ಕಲಿಗರಿದ್ದರೆ, ನಂತರದ ಸ್ಥಾನ 3.50 ಲಕ್ಷ ಜನಸಂಖ್ಯೆ ಹೊಂದಿರುವ ದಲಿತರದು. ಇದಲ್ಲದೆ, ಒಂದು ಲಕ್ಷ ಲಿಂಗಾಯಿತರು, ಇಷ್ಟೇ ಪ್ರಮಾಣದ ಕುರುಬರು, 80 ಸಾವಿರ ಮುಸ್ಲಿಮರು, 40 ಸಾವಿರ ಬೆಸ್ತರು, 30 ಸಾವಿರ ಬ್ರಾಹ್ಮಣರು ಇದ್ದಾರೆ. ಇತರೆ ಸಮುದಾಯದವರು 2 ಲಕ್ಷದಷ್ಟಿದ್ದಾರೆ.

22 ಮಂದಿ ಕಣದಲ್ಲಿ

ಕೆ.ನಿಖಿಲ್ (ಜೆಡಿಎಸ್), ನಂಜುಂಡಸ್ವಾಮಿ (ಬಿಎಸ್ಪಿ), ಬಿ.ಸಿ. ಜಯಶಂಕರ್ (ಐರಾ ನ್ಯಾಷನಲ್ ಪಾರ್ಟಿ), ಸಿ.ಪಿ. ದಿವಾಕರ್ (ಉತ್ತಮ ಪ್ರಜಾಕೀಯ ಪಕ್ಷ), ಗುರುಲಿಂಗಯ್ಯ (ಇಂಡಿಯನ್ ನ್ಯೂ ಕಾಂಗ್ರೆಸ್ ಪಕ್ಷ) ಸಂತೋಷ್ ಎಚ್.ಪಿ (ಇಂಜಿನಿ ಯರ್ಸ್ ಪಕ್ಷ).

ಪಕ್ಷೇತರರು: ಎ. ಸುಮಲತಾ, ಕೌಡ್ಲೆ ಚೆನ್ನಪ್ಪ, ಪ್ರೇಮ್ ಕುಮಾರ್, ಎಂ. ಎಲ್. ಶಶಿಕುಮಾರ್, ಲಿಂಗೇಗೌಡ ಎಸ್.ಎಚ್, ಸತೀಶ್ ಕುಮಾರ್ ಟಿ.ಎನ್, ಎಚ್.ನಾರಾ ಯಣ್, ಅರವಿಂದ್ ಪ್ರೇಮಾನಂದ, ಸುಮಲತಾ ಪಿ.ಎಸ್., ಸಿ.ಪುಟ್ಟರಾಜು, ತುಳಸಪ್ಪ ದಾಸರ, ಮಂಜುನಾಥ್, ಬಿ.ಸುಮ ಲತಾ, ಬಿ. ಮಂಜುನಾಥ, ಎಂ. ಸುಮಲತಾ, ಸಿ.ಲಿಂಗೇಗೌ

2018ರ ಉಪ ಚುನಾವಣೆ

ಶಿವರಾಮೇಗೌಡ (ಜೆಡಿಎಸ್) 5,69,347 

ಸಿದ್ದರಾಮಯ್ಯ (ಬಿಜೆಪಿ) 2,44,404 

ಗೆಲುವಿನ ಅಂತರ 3,24,943

ಮತದಾರರು:16,90,483| ಪುರುಷ:8,45,479| ಮಹಿಳೆ:8,44,094| ಇತರೆ:102| ಸೇವಾ ಮತದಾರರು:789

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ