ಕ್ಷೇತ್ರ ಸಮೀಕ್ಷೆ: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ

ಬೆಂಗಳೂರು[ಏ.13]: ಜಾತಿ, ಧರ್ಮ ಮೀರಿ ಅಚ್ಚರಿಯ ಫಲಿತಾಂಶ ನೀಡುವ ರಾಜ್ಯದ ಕೆಲವೇ ಕ್ಷೇತ್ರಗಳಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಪ್ರಮುಖವಾದದ್ದು. ಅತಿ ಶ್ರೀಮಂತರ ಪ್ರದೇಶಗಳಿಂದ ಹಿಡಿದು ಕಡು ಬಡುವರವರೆಗೂ ಎಲ್ಲ ವರ್ಗದ ಜನರನ್ನು ಹೊಂದಿರುವ ಪಕ್ಕಾ ಕಾಸ್ಮೋಪಾಲಿಟನ್‌ ಗುಣ ಹೊಂದಿರುವ ಈ ಕ್ಷೇತ್ರವು ಅಲ್ಪಸಂಖ್ಯಾತ ಬಾಹುಳ್ಯ ಹೊಂದಿದ್ದರೂ ಬಿಜೆಪಿಯ ಕಮಲ ಚಿಗುರಿ ಬೇರು ಬಿಡಲು ಅವಕಾಶ ಮಾಡಿಕೊಟ್ಟಿದೆ.

ಇದೇ ಬಲದ ಮೇಲೆ ಬಿಜೆಪಿಯ ಹಾಲಿ ಸಂಸದ ಪಿ.ಸಿ. ಮೋಹನ್‌ ಹ್ಯಾಟ್ರಿಕ್‌ ಕನಸು ಹೊತ್ತು ಸ್ಪರ್ಧೆ ಮಾಡಿದ್ದರೆ, ಅವರನ್ನು ಈ ಬಾರಿ ಮಣಿಸಿ ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಳ್ಳಲು ಶತಪ್ರಯತ್ನ ನಡೆಸುತ್ತಿದ್ದಾರೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಕೂಟದ ರಿಜ್ವಾನ್‌ ಅರ್ಷದ್‌. ಇವರ ನಡುವೆ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಪಕ್ಷೇತರರಾಗಿ ಕಣದಲ್ಲಿರುವ ಮೂಲಕ ಈ ಕ್ಷೇತ್ರಕ್ಕೆ ಸ್ಟಾರ್‌ಗಿರಿ ತಂದುಕೊಟ್ಟಿದ್ದಾರೆ. ಜತೆಗೆ, ಬಿಜೆಪಿ ಅಭ್ಯರ್ಥಿ ಪರ ನಟ ದರ್ಶನ್‌, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪರ ನಟಿ ಖುಷ್ಬೂ ಪ್ರಚಾರದ ಅಬ್ಬರದಿಂದ ತಾರಾ ಪ್ರಚಾರದ ರಂಗೂ ಪಡೆದಿರುವುದು ಸೇರಿದಂತೆ ಹಲವು ಕಾರಣಗಳಿಗೆ ಗಮನ ಸೆಳೆಯುತ್ತಿದೆ.

ಅಲ್ಪಸಂಖ್ಯಾತರ ಮತಗಳೇ ನಿರ್ಣಾಯಕವಾಗಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ 2008ರಲ್ಲಿ ಪುನರ್‌ ವಿಂಗಡಣೆ ಬಳಿಕ ಜನ್ಮ ತಳೆದ ಕ್ಷೇತ್ರ. ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕೆಲವು ಕ್ಷೇತ್ರಗಳನ್ನು ತನ್ನೊಳಗೆ ಕೂಡಿಸಿಕೊಂಡಿದೆ. 2009ರಲ್ಲಿ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಪಿ.ಸಿ. ಮೋಹನ್‌ 35 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್‌ನ ಎಚ್‌.ಟಿ. ಸಾಂಗ್ಲಿಯಾನ ವಿರುದ್ದ ಗೆದ್ದಿದ್ದರು. ಬಳಿಕ 2014ರಲ್ಲಿ 1.35 ಲಕ್ಷ ಅಂತರದಿಂದ ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌ ಮತ್ತೆ ಗೆದ್ದಿರುವ ಪಿ.ಸಿ. ಮೋಹನ್‌ ಸದ್ಯಕ್ಕೆ ಸಂಸದರಾಗಿದ್ದಾರೆ. 2009ರಲ್ಲಿ ಕೇವಲ 35 ಸಾವಿರ ಅಂತರದಿಂದ ಸೋಲೊಪ್ಪಿದ್ದ ನಿವೃತ್ತ ಐಪಿಎಸ್‌ ಅಧಿಕಾರಿ ಎಚ್‌.ಟಿ. ಸಾಂಗ್ಲಿಯಾನ ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಶಿವಾಜಿನಗರ, ಚಾಮರಾಜಪೇಟೆ, ಶಾಂತಿನಗರ, ಗಾಂಧಿನಗರ, ಸರ್ವಜ್ಞನಗರ, ಸಿ.ವಿ. ರಾಮನ್‌ನಗರ, ರಾಜಾಜಿನಗರ, ಮಹದೇವಪುರ ಸೇರಿ ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಮೊದಲ ಐದು ಕ್ಷೇತ್ರ ಕಾಂಗ್ರೆಸ್‌ ಗೆದ್ದಿದ್ದರೆ, ಉಳಿದ ಮೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಇದರ ಹೊರತಾಗಿಯೂ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರೇ ನಿರ್ಣಾಯಕರಾಗಿದ್ದಾರೆ. 2011ರ ಜನಗಣತಿ ಪ್ರಕಾರವೇ 4.5 ಲಕ್ಷ ಮುಸ್ಲೀಂ, 2 ಲಕ್ಷ ಕ್ರಿಶ್ಚಿಯನ್‌ ಜನಸಂಖ್ಯೆ ಇತ್ತು. ಜತೆಗೆ ತಮಿಳು, ಮಾರವಾಡಿ ಸೇರಿದಂತೆ ವಿವಿಧ ಮಾತೃ ಭಾಷೆಯ 5.5 ಲಕ್ಷ ಜನರು ಇದ್ದಾರೆ.

ಶಿವಾಜಿನಗರ, ಸರ್ವಜ್ಞನಗರ, ಶಾಂತಿನಗರ, ಚಾಮರಾಜಪೇಟೆಯಲ್ಲಿ ಮುಸ್ಲೀಂ, ಕ್ರಿಶ್ಚಿಯನ್‌ ಮತಗಳೇ ನಿರ್ಣಾಯಕ. ಹೀಗಿದ್ದರೂ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್‌ ಸತತ ಎರಡು ಬಾರಿ ಜಯಭೇರಿ ಬಾರಿಸಿದ್ದು, ಮೂರನೇ ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಅಲ್ಪಸಂಖ್ಯಾತ ಮತಗಳು ನಿರ್ಣಾಯಕವಾಗಿರುವುದು ಹಾಗೂ ಜೆಡಿಎಸ್‌ ಬೆಂಬಲವೂ ದೊರೆತಿರುವುದರಿಂದ ಮೈತ್ರಿ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿದಿದ್ದರು. ಆರಂಭದಲ್ಲೇ ಶಿವಾಜಿನಗರ ಶಾಸಕ ರೋಷನ್‌ಬೇಗ್‌ ಭಿನ್ನಮತ ವ್ಯಕ್ತಪಡಿಸಿದ್ದು, ರಿಜ್ವಾನ್‌ ಅರ್ಷದ್‌ ನಾಮಪತ್ರ ಸಲ್ಲಿಕೆ ವೇಳೆಯೂ ಗೈರು ಹಾಜರಾಗಿದ್ದರು. ಬಳಿಕ ಕೆಪಿಸಿಸಿ ಅಧ್ಯಕ್ಷರ ಸಂಧಾನದಿಂದ ಬೇಗ್‌ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

ಕೋಮುವಾದಿ ಶಕ್ತಿಗಳ ವಿರುದ್ದ ಧ್ವನಿ ಎತ್ತುತ್ತಿದ್ದ ಖ್ಯಾತ ನಟ ಪ್ರಕಾಶ್‌ರಾಜ್‌ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ರಿಜ್ವಾನ್‌ ಅರ್ಷದ್‌ ಸೇರಿದಂತೆ ಕಾಂಗ್ರೆಸ್‌ ನಾಯಕರು ಮನವೊಲಿಸಲು ಯತ್ನಿಸಿದರೂ ಫಲ ನೀಡಿಲ್ಲ. ಹೀಗಾಗಿ ಪ್ರಕಾಶ್‌ರಾಜ್‌ ಸೆಳೆಯುವ ಪ್ರತಿ 10 ಮತಗಳಲ್ಲಿ 8 ಮತ ಮೈತ್ರಿ ಅಭ್ಯರ್ಥಿಯದ್ದಾಗಲಿದೆ ಎಂಬುದು ಕಾಂಗ್ರೆಸ್‌-ಜೆಡಿಎಸ್‌ ಅಭ್ಯರ್ಥಿಗೆ ತಲೆನೋವಿನ ಸಂಗತಿಯಾಗಿದೆ. ಕೋಮುವಾದಿ ವಿರುದ್ಧ ಧೋರಣೆ ಹಾಗೂ ತಮ್ಮ ಸಿನಿಮಾಗಳ ಮೂಲಕ ವಿಶೇಷ ಛಾಪು ಮೂಡಿಸಿರುವ ಪ್ರಕಾಶ್‌ರಾಜ್‌ ಜ್ಯಾತ್ಯಾತೀತ ಹಾಗೂ ತಮಿಳು ಮತಗಳಿಗೆ ಲಗ್ಗೆ ಹಾಕುವ ಆತಂಕ ಕಾಂಗ್ರೆಸ್‌ಗಿದೆ.

ಮತ್ತೊಂದೆಡೆ ಕಾಂಗ್ರೆಸ್‌ಗೆ ಮತ ಬ್ಯಾಂಕ್‌ ಆಗಿರುವ ಕ್ರಿಶ್ಚಿಯನ್‌ ಸಮುದಾಯಕ್ಕೆ ಒಂದೂ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿಲ್ಲ ಎಂದು ಹೇಳಿ ಅಲೆಕ್ಸಾಂಡರ್‌ ಹಾಗೂ ಎಚ್‌.ಟಿ. ಸಾಂಗ್ಲಿಯಾನ ಮುನಿಸಿಕೊಂಡಿದ್ದಾರೆ. ಅಲೆಕ್ಸಾಂಡರ್‌ ಮನವೊಲಿಕೆಗೆ ಕಾಂಗ್ರೆಸ್‌ ಯಶಸ್ವಿಯಾದರೂ 2009ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ 35 ಸಾವಿರ ಮತಗಳ ಅಂತರದಿಂದ ಸೋತಿದ್ದ ಎಚ್‌.ಟಿ. ಸಾಂಗ್ಲಿಯಾನ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಸಮುದಾಯಕ್ಕೆ ಅಭ್ಯರ್ಥಿ ನೋಡಿ ಜಾತಿ, ಮತ, ಪಕ್ಷದ ಬೇಧವಿಲ್ಲದೆ ಮತ ಚಲಾಯಿಸಿ ಎಂದು ಕರೆ ನೀಡಿದ್ದಾರೆ. ಇದು ಮೈತ್ರಿ ಅಭ್ಯರ್ಥಿಗೆ ಮತ್ತೊಂದು ಪೆಟ್ಟಾಗುವುದರಿಂದ ಕಾಂಗ್ರೆಸ್‌ ನಾಯಕತ್ವ ಸಾಂಗ್ಲಿಯಾನ ಮನವೊಲಿಕೆಯಲ್ಲಿ ನಿರತವಾಗಿದೆ.

ಮೈತ್ರಿಗೆ ಜಮೀರ್‌ ಅಹ್ಮಮದ್‌ ಬಲ:

2009ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ 1.60 ಲಕ್ಷ ಮತ ಪಡೆದಿದ್ದ ಜಮೀರ್‌ ಅಹ್ಮದ್‌ಖಾನ್‌ ಕಾಂಗ್ರೆಸ್‌ ಶಾಸಕರಾಗಿದ್ದಾರೆ. ಜತೆಗೆ ಕಳೆದ ಎರಡು ಚುನಾವಣೆಯಲ್ಲಿ ಜ್ಯಾತ್ಯಾತೀತ ಮತ ವಿಭಜಿಸಿದ್ದ ಜೆಡಿಎಸ್‌ ಬೆಂಬಲವೂ ರಿಜ್ವಾನ್‌ ಅರ್ಷದ್‌ಗಿದೆ. ಮುಸ್ಲಿಂ ನಾಯಕತ್ವಕ್ಕೆ ಪೈಪೋಟಿಗೆ ಬಿದ್ದಿರುವ ರೀತಿಯಲ್ಲಿ ರೋಷನ್‌ಬೇಗ್‌, ಜಮೀರ್‌ ಅಹ್ಮದ್‌ಖಾನ್‌ ಮೈತ್ರಿ ಅಭ್ಯರ್ಥಿಗೆ ಮತ ಕೊಡಿಸಲು ಹೋರಾಡುತ್ತಿದ್ದಾರೆ. ಹೀಗಾಗಿ ಅಲ್ಪಸಂಖ್ಯಾತ ಮತಗಳನ್ನೇ ಬಹುವಾಗಿ ನೆಚ್ಚಿಕೊಂಡಿರುವ ರಿಜ್ವಾನ್‌ಗೆ ಪ್ಲಸ್‌ ಆಗುವ ನಿರೀಕ್ಷೆ ಇದೆ.

ಇದರ ಜತೆಗೆ ದಿನೇಶ್‌ ಗುಂಡೂರಾವ್‌ ಅವರು ಸತತ ಐದು ಬಾರಿಯಿಂದ ಗಾಂಧಿನಗರ ಕ್ಷೇತ್ರದ ಶಾಸಕರಾಗಿದ್ದರೂ ಕಳೆದ ಬಾರಿ ಬಿಜೆಪಿಗೆ 30 ಸಾವಿರ ಲೀಡ್‌ ಲಭಿಸಿತ್ತು. ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರಾಗಿರುವ ಅವರು ಬಿಜೆಪಿಗೆ ಲೀಡ್‌ ದೊರೆಯದಂತೆ ತಪ್ಪಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಜತೆಗೆ ರಾಜಾಜಿನಗರ ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಪಾಲಿಕೆ ಸದಸ್ಯರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಪೆರೇಡ್‌ ಮಾಡುತ್ತಿದ್ದಾರೆ. ಇವೆಲ್ಲವೂ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸುತ್ತಿವೆ. ಇದಲ್ಲದೆ, ಸಿ.ವಿ.ರಾಮನ್‌ನಗರ ಕ್ಷೇತ್ರ ವ್ಯಾಪ್ತಿಯ ವಿಮಾನಪುರ, ಎಚ್‌ಎಎಲ್‌ ಸುತ್ತಮುತ್ತ ರಫೇಲ್‌ ಡೀಲ್‌ ತಪ್ಪಿಸಿದ ವಿಚಾರ ಇಟ್ಟುಕೊಂಡು ಭಾವನಾತ್ಮಕ ಪ್ರಚಾರದಲ್ಲಿ ಕಾಂಗ್ರೆಸ್‌ ತೊಡಗಿದೆ.

ಹಿಂದು ಮತ ಕ್ರೋಡೀಕರಣ ನಿರೀಕ್ಷೆಯಲ್ಲಿ ಬಿಜೆಪಿ:

ಕಳೆದ ಎರಡು ಬಾರಿ ಸಂಸದರಾಗಿ ಕೆಲಸ ಮಾಡಿರುವ ಬಿಜೆಪಿಯ ಪಿ.ಸಿ.ಮೋಹನ್‌ ಅವರಿಗೆ ಕಾಂಗ್ರೆಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ರಿಜ್ವಾನ್‌ ಅರ್ಷದ್‌ ಅವರೇ ಎದುರಾಳಿಯಾಗಿರುವುದು ಹೆಚ್ಚು ಆತಂಕ ಉಂಟಾಗಿಲ್ಲ. ಅಲ್ಪಸಂಖ್ಯಾತ ಸಮುದಾಯದಿಂದ ಹೆಚ್ಚು ಮತಗಳು ಬರದಿದ್ದರೂ ಇತರ ವರ್ಗಗಳಿಂದ ಅದರಲ್ಲೂ ಹಿಂದೂ ಮತಗಳು ಕ್ರೋಡೀಕರಣವಾಗುವ ವಿಶ್ವಾಸ ಬಿಜೆಪಿ ಪಾಳೆಯದಲ್ಲಿದೆ. ಮೇಲಾಗಿ ನಗರದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸ್ಪಂದಿಸಿದ್ದರಿಂದ ಹಾಗೂ ಕ್ಷೇತ್ರದ ಜನರಿಗೆ ಸುಲಭವಾಗಿ ಲಭ್ಯವಾಗಿರುವುದರಿಂದ ಮೋಹನ್‌ ಅವರಿಗೆ ಹ್ಯಾಟ್ರಿಕ್‌ ಗೆಲುವಿಗೆ ತೊಂದರೆಯಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಬಿಜೆಪಿ ಪಾಳೆಯದಲ್ಲಿ ಈ ಕ್ಷೇತ್ರದ ಮಟ್ಟಿಗೆ ಯಾವುದೇ ಅಪಸ್ವರ ಇಲ್ಲ. ಮೋಹನ್‌ ಪರವಾಗಿ ಪಕ್ಷದ ಸಂಘಟನೆ ಸಂಪೂರ್ಣವಾಗಿ ನಿಂತು ಕೆಲಸ ಮಾಡುತ್ತಿದೆ.

ಈ ಕ್ಷೇತ್ರದಲ್ಲಿ ಖ್ಯಾತ ನಟ ಪ್ರಕಾಶ್‌ ರಾಜ್‌ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಮೇಲ್ನೋಟಕ್ಕೆ ಬಿಜೆಪಿಗೆ ತುಸು ಅನುಕೂಲವಾಗುವಂತೆ ಕಾಣುತ್ತಿದೆ. ಹಾಗಂತ ಪ್ರಕಾಶ್‌ ರಾಜ್‌ ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಚುನಾವಣೆ ಘೋಷಣೆಯಾಗುವ ಎರಡು ತಿಂಗಳು ಮೊದಲೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಯೋಜಿತವಾಗಿ ಕೆಲಸ ಆರಂಭಿಸಿರುವುದರಿಂದ ಒಂದು ವೇಳೆ ಗೆಲ್ಲುವುದಕ್ಕೆ ಸಾಧ್ಯವಾಗದಿದ್ದರೂ ಹೆಚ್ಚಿನ ಮತಗಳನ್ನು ಸೆಳೆಯುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.

ಕಳೆದ ಎರಡು ಬಾರಿ ಗೆದ್ದಿರುವ ವಿಶ್ವಾಸದಲ್ಲಿರುವ ಪಿ.ಸಿ. ಮೋಹನ್‌ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯವಾದ ವಿಚಾರಗಳಿಟ್ಟುಕೊಂಡು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಪಿ.ಸಿ. ಮೋಹನ್‌ ಕ್ಷೇತ್ರಕ್ಕಾಗಿ ಹೆಚ್ಚು ಕೆಲಸ ಮಾಡಲ್ಲ ಎಂಬ ಆರೋಪಕ್ಕೆ ಮೋದಿ ನೋಡಿ ಮತ ನೀಡಿ ಎಂಬ ಸ್ಲೋಗನ್‌ ಅನ್ನು ಬಿಜೆಪಿ ಕಾರ್ಯಕರ್ತರು ಬಳಸುತ್ತಿದ್ದಾರೆ. ಆದರೆ, ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಐವರು ಘಟಾನುಘಟಿ ಕಾಂಗ್ರೆಸ್‌ ಶಾಸಕರು (ಗಾಂಧಿನಗರ- ದಿನೇಶ್‌ ಗುಂಡೂರಾವ್‌, ಶಾಂತಿನಗರ- ಎನ್‌.ಎ. ಹ್ಯಾರೀಸ್‌, ಸರ್ವಜ್ಞ ನಗರ-ಕೆ.ಜೆ. ಜಾಜ್‌ರ್‍, ಶಿವಾಜಿನಗರ- ರೋಷನ್‌ಬೇಗ್‌ ಮತ್ತು ಚಾಮರಾಜಪೇಟೆ- ಜಮೀರ್‌ ಅಹ್ಮದ್‌ ಖಾನ್‌) ಅವರು ಟೊಂಕಕಟ್ಟಿನಿಂತಿರುವುದು ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌ ಪಾಲಿಗೆ ವರದಾನವಾಗಿದೆ. ಹೀಗಾಗಿ ಇಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಹಾಗೂ ಬಿಜೆಪಿ ನಡುವೆ ನೇರಾನೇರ ಹೋರಾಟ ನಡೆದಿದೆ.

ಕಣದಲ್ಲಿರುವವರು:

ಕಾಂಗ್ರೆಸ್‌ನಿಂದ ರಿಜ್ವಾನ್‌ ಅರ್ಷದ್‌, ಬಿಜೆಪಿಯಿಂದ ಪಿ.ಸಿ. ಮೋಹನ್‌, ಪ್ರಕಾಶ್‌ ರಾಜ್‌ (ಪಕ್ಷೇತರ), ಉತ್ತಮ ಪ್ರಜಾಕೀಯ ಪಾರ್ಟಿ - ಮೆಲ್ಲೆಗಟ್ಟಿಶ್ರೀದೇವಿ, ಬಿಎಸ್‌ಪಿ - ಎಂ.ಕೆ. ಪಾಷ, ಕರ್ನಾಟಕ ಕಾರ್ಮಿಕರ ಪಕ್ಷ - ಡಾ. ಫಿಲಿಪ್‌ ಮರಿಯನ್‌, ಡೆಮಾಕ್ರಟಿಕ್‌ ಪ್ರಜಾಕ್ರಾಂತಿ ಪಾರ್ಟಿ ಸೆಕ್ಯುಲರ್‌ - ಹುಣಸೂರು ಕೆ. ಚಂದ್ರಶೇಖರ್‌, ಇಂಡಿಯನ್‌ ಕ್ರಿಶ್ಚಿಯನ್‌ ಫ್ರಂಟ್‌ - ಆರ್‌. ಶ್ರೀನಿವಾಸನ್‌. ಪಕ್ಷೇತರರು: ಡಾ. ಮೀರ್‌ ಲಾಯಕ್‌ ಹುಸೇನ್‌, ಎಸ್‌.ಆರ್‌. ವೇಣುಗೋಪಾಲ್‌, ಪ್ರದೀಪ್‌ ಮೆಂಡೊಂಕ, ಸೈಯದ್‌ ಆಸಿಫ್‌ ಬುಕಾಲಿ, ಎಸ್‌.ಮೋಹನ್‌ ಕುಮಾರ್‌, ಮೊಹಮದ್‌ ಹನೀಫ್‌, ಟಿ. ದಯಾಳ್‌ ಕುಮಾರ್‌, ಜೆನಿಫರ್‌ ರಸೆಲ್‌, ರಾಪರ್ಟಿ ಅನಿಲ್‌ಕುಮಾರ್‌, ಫ್ರಾನ್ಸಿಸ್‌ ಬಿನ್ನಿ ಜೋಸ್‌, ಬಿ. ಕೃಷ್ಣ ಪ್ರಸಾದ್‌, ಎ. ಕ್ರಿಸ್ತುರಾಜ್‌, ಎಸ್‌. ಪಾಂಡುರಂಗನ್‌, ಬಿ.ಕೆ. ರಾಮ, ಸುಹೇಲ್‌ ಸೇಟ್‌, ಕೆಂಪುರಾಜನ್‌.

2014ರ ಫಲಿತಾಂಶ

ಪಿ.ಸಿ. ಮೋಹನ್‌ (ಬಿಜೆಪಿ) - 5,57,130

ರಿಜ್ವಾನ್‌ ಅರ್ಷದ್‌ (ಕಾಂಗ್ರೆಸ್‌) - 4,19,630

ವಿ. ಬಾಲಕೃಷ್ಣನ್‌ (ಆಮ್‌ ಆದ್ಮಿ ಪಕ್ಷ) - 39,869

ನಂದಿನಿ ಅಳ್ವ (ಜೆಡಿಎಸ್‌) - 20,387

ಮತದಾರರು: 22,15,758| ಪುರುಷರು: 11,45,974| ಮಹಿಳೆಯರು: 10,58,369| ಇತರೆ: 397

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.