ಬಿಜೆಪಿ ಪಂಟನ ಹಣಿಯಲು ಕಾಂಗ್ರೆಸ್ಸಿಂದ ಹೊಸ ಬಂಟ| ಮೋದಿ ಅಲೆ ಬೆನ್ನೇರಿ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿ ಸಂಸದ ಕಟೀಲು| ಅಭಿವೃದ್ಧಿಯೇ ತೊಡರುಗಾಲು- ಹಿರಿಯರ ಬದಿಗೊತ್ತಿ ಹೊಸ ಮುಖಕ್ಕೆ ಕಾಂಗ್ರೆಸ್ ಮಣೆ| ನಳಿನ್ ವೈಫಲ್ಯವನ್ನೇ ಮುಂದಿಟ್ಟು ಗೆಲ್ಲುವ ಆಸೆ
-ಆತ್ಮಭೂಷಣ್, ಕನ್ನಡ ಪ್ರಭ
ಕ್ಷೇತ್ರ ಸಮೀಕ್ಷೆ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ
ಮಂಗಳೂರು[ಮಾ.31]: ಧಾರ್ಮಿಕ ಸಾಮರಸ್ಯ ವಿಚಾರದಲ್ಲಿ ಕರ್ನಾಟಕದ ಅತ್ಯಂತ ಸೂಕ್ಷ್ಮ ಜಿಲ್ಲೆ ದಕ್ಷಿಣ ಕನ್ನಡ. ಹಿಂದು, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗಳ ತೀವ್ರಗಾಮಿ ನಾಯಕರ ಉಗಮ ಸ್ಥಳವಿದು. ಉಗ್ರ ಹಿಂದುತ್ವವಾದ ಇಲ್ಲಿ ಹುಟ್ಟಿಕೊಂಡು ಹೇಗೆ ರಾಜ್ಯಾದ್ಯಂತ ಪಸರಿಸತೊಡಗಿದೆಯೋ, ಅದೇ ರೀತಿ ಕಟ್ಟರ್ ಮುಸ್ಲಿಂ ಧೋರಣೆಯೂ ಬಲವಾಗಿ ಬೇರು ಬಿಟ್ಟಿರುವ ಜಿಲ್ಲೆಯಿದು. ಬಲಪಂಥೀಯ, ಎಡಪಂಥೀಯ, ನಡುಪಂಥೀಯ ಹೀಗೆ ಯಾವುದೇ ‘ಇಸಂ’ ಇರಲಿ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಅದು ತನ್ನ ತೀವ್ರ ಸ್ವರೂಪದಲ್ಲೇ ಅಸ್ತಿತ್ವದಲ್ಲಿ ಇರುತ್ತದೆ.
ಹೀಗಾಗಿಯೇ ಕರ್ನಾಟಕದ ಮಟ್ಟಿಗೆ ಉಗ್ರ ಹಿಂದುತ್ವದ ಪ್ರಯೋಗ ಶಾಲೆಯಾಗಿಯೂ ಮಂಗಳೂರು ಮಾರ್ಪಟ್ಟಿತ್ತು. ಇದರ ಫಲವಾಗಿ ದಕ್ಷಿಣ ಕನ್ನಡ ಬಿಜೆಪಿಯ ಗಟ್ಟಿನೆಲ. ಇಂತಹ ಗಟ್ಟಿನೆಲದಲ್ಲಿ ಭದ್ರವಾಗಿ ಬೇರೂರಿರುವ ನಳಿನ್ ಕುಮಾರ್ ಕಟೀಲ್ ಸತತ ಮೂರನೇ ಬಾರಿಗೆ ಬಿಜೆಪಿಯಿಂದ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿಯನ್ನು ಅದರ ಮೂಲದಲ್ಲೇ ಮಣಿಸಲು ಮೈತ್ರಿ ಪಕ್ಷಗಳಾದ ಕಾಂಗ್ರೆಸ್- ಜೆಡಿಎಸ್ ಈ ಬಾರಿ ಯುವ ಶಕ್ತಿಗೆ ಮೊರೆ ಹೋಗಿವೆ. ಪರಿಣಾಮವಾಗಿ ಮಿಥುನ್ ರೈ ಎಂಬ ಕಾಂಗ್ರೆಸ್‌ನ ಯುವ ನಾಯಕ ಪ್ರಬಲ ಬಿಜೆಪಿ ಅಲೆಯಿರುವ ಕ್ಷೇತ್ರದಲ್ಲಿ ಎದೆ ಸೆಟೆಸಿ ನಿಂತಿದ್ದಾರೆ. ವಿಶೇಷವೆಂದರೆ, ಬಿಜೆಪಿ ಹಾಗೂ ಮೈತ್ರಿ ಕೂಟದ ಅಭ್ಯರ್ಥಿಗಳು ಜಿಲ್ಲೆಯ ಪ್ರಬಲ ಸಮುದಾಯವೆನಿಸಿದ ಬಂಟ ಸಮುದಾಯಕ್ಕೆ ಸೇರಿದವರು.
ನಳಿನ್‌ಗೆ ಮೋದಿ + ಆರೆಸ್ಸೆಸ್ ಬಲ
ನಳಿನ್ ಕುಮಾರ್ ಗೆದ್ದರೆ ಅದು ಹ್ಯಾಟ್ರಿಕ್ ಗೆಲುವಿನ ಇತಿಹಾಸ ಬರೆದಂತಾಗಲಿದೆ. ಎಂದಿನಂತೆ ಈ ಬಾರಿಯೂ ಹಿಂದುತ್ವ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಇಮೇಜ್ ಆಧರಿಸಿಯೇ ಕಟೀಲ್ ಹ್ಯಾಟ್ರಿಕ್ ಬಾರಿಸುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಅಭಿವೃದ್ಧಿ ವಿಚಾರ ಅವರಿಗೆ ದುಸ್ವಪ್ನವಾಗಿ ಕಾಡಿದರೆ ಅಚ್ಚರಿ ಇಲ್ಲ. ದ.ಕ. ಕ್ಷೇತ್ರಕ್ಕೆ ಕೇಂದ್ರದಿಂದ 16 ಸಾವಿರ ಕೋಟಿ ರುಪಾಯಿಗೂ ಅಧಿಕ ಮೊತ್ತದ ಅನುದಾನ ತರಿಸಿದ್ದೇನೆ ಎಂದು ನಳಿನ್ ಕುಮಾರ್ ಹೇಳಿಕೊಂಡರೂ, ಜಿಲ್ಲೆಯ ಅಭಿವೃದ್ಧಿಯನ್ನು ಅವರು ನಿರ್ಲಕ್ಷಿಸಿದ ಬಗ್ಗೆ ಬಿಜೆಪಿಯಲ್ಲೇ ಸಿಟ್ಟಿದೆ. ಮಂಗಳೂರಿನ ಪಂಪ್‌ವೆಲ್ ಮತ್ತು ತೊಕ್ಕೊಟ್ಟಿನ ಮೇಲ್ಸೇತುವೆ ಕಾಮಗಾರಿ ಹಲವು ವರ್ಷಗಳಾಗಿದ್ದರೂ ಪೂರ್ಣಗೊಳ್ಳದಿರುವುದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಇನ್ನೂ ಟೇಕಾಫ್ ಆಗದಿರುವುದು ಸ್ವಪಕ್ಷೀಯರೇ ನಳಿನ್ ಕುಮಾರ್ ವಿರುದ್ಧ ಬಹಿರಂಗವಾಗಿ ಆಕ್ಷೇಪ ಎತ್ತುವಂತೆ ಮಾಡಿದೆ. ಇದನ್ನೇ ಕಾಂಗ್ರೆಸ್ಸಿಗರು ಚುನಾವಣಾ ಪ್ರಚಾರದ ಸರಕನ್ನಾಗಿ ಮಾಡುತ್ತಿದ್ದಾರೆ. ಇದು ಅಭ್ಯರ್ಥಿ ನಳಿನ್ ಕುಮಾರ್ ವರ್ಚಸ್ಸಿಗೆ ಹಿನ್ನಡೆಯುಂಟು ಮಾಡಿದರೆ ಅಚ್ಚರಿ ಇಲ್ಲ.
ಆದರೆ, ಕಳೆದ ಬಾರಿಯಂತೆ ಈ ಬಾರಿ ಗೆಲುವು ಸುಲಭವಲ್ಲ ಎನ್ನುವುದು ಬಿಜೆಪಿಗೂ ಗೊತ್ತಿದೆ. ಹಿಂದಿಗಿಂತ ತುಸು ಹೆಚ್ಚೇ ಎನ್ನುವಷ್ಟುಅಸಮಾಧಾನ ಪಕ್ಷದೊಳಗೆ ಹೊಗೆಯಾಡುತ್ತಿದೆ. ಆದರೂ ಆರೆಸ್ಸೆಸ್ ಮಾತ್ರ ಅಭ್ಯರ್ಥಿಯೊಂದಿಗೆ ಗಟ್ಟಿಯಾಗಿ ನಿಂತಿರುವುದು ಬಿಜೆಪಿ ಪಾಲಿಗೆ ನೆಮ್ಮದಿಯ ವಿಚಾರವಾಗಿದೆ. ಪ್ರಚಾರವನ್ನೇ ನೋಡುವುದಾದರೆ ಚುನಾವಣೆ ಘೋಷಣೆಗೂ ಮೊದಲೇ ಒಂದು ಸುತ್ತಿನ ಪ್ರಚಾರ ಕಾರ್ಯ ನಡೆಸಿದ ಬಿಜೆಪಿ, ನಂತರ ಸಂಘ ಪರಿವಾರ ಜೊತೆಗೆ ಎರಡನೇ ಸುತ್ತಿನ ಮನೆ ಮನೆ ಭೇಟಿ ನಡೆಸುತ್ತಿದೆ. ‘ದೇಶಕ್ಕೆ ಮೋದಿ ಮತ್ತೊಮ್ಮೆ’ ಎಂಬ ಸಂದೇಶದೊಂದಿಗೆ ಪ್ರಚಾರ ನಡೆಸುತ್ತಿದೆ.
8 ಅಸೆಂಬ್ಲಿ ಕ್ಷೇತ್ರ: 7 ಬಿಜೆಪಿ ವಶ
2018ರ ವಿಧಾನಸಭೆ ಚುನಾವಣೆಯಲ್ಲಿ ದ.ಕ.ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿರುವುದೂ ಬಿಜೆಪಿ ಪಾಲಿಗೆ ಪ್ಲಸ್ ಪಾಯಿಂಟ್. ಅಲ್ಲದೆ, ಬಿಜೆಪಿಯ ಈ ಎಲ್ಲ ಶಾಸಕರು ಈಗ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡೂ ಇದ್ದಾರೆ. ಪ್ರತಿ ಬೂತ್ ಮಟ್ಟಕ್ಕೆ ತೆರಳಿ ಪೇಜ್ ಪ್ರಮುಖರ ಸಮಾವೇಶ ನಡೆಸುತ್ತಿದ್ದಾರೆ. ಈಗಾಗಲೇ ಬಿಜೆಪಿ ನಾಯಕ ರಾಜ್‌ನಾಥ್ ಸಿಂಗ್ ಬಂದುಹೋಗಿದ್ದು, ಏ.10ರೊಳಗೆ ಪ್ರಧಾನಿ ಮೋದಿ ಕರಾವಳಿ ಭೇಟಿ ನಡೆಯಲಿದೆ. ಅಸೆಂಬ್ಲಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಸೃಷ್ಟಿಯಾದ ಬಿಜೆಪಿ ಹವಾ ಲೋಕಸಭಾ ಚುನಾವಣೆಯಲ್ಲೂ ಮುಂದುವರಿದಿದೆ ಎನ್ನುವುದು ಪಕ್ಷದ ನಾಯಕರ ವಿಶ್ವಾಸ.
ಕ್ಷೇತ್ರ ‘ಕೈ’ ಜಾರಿ 27 ವರ್ಷ!
ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್, ತನ್ನದೇ ಪಕ್ಷದ ಸಂಸದರನ್ನು ನೋಡದೆ 27 ವರ್ಷ ಕಳೆದಿದೆ. ಪ್ರತಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ಮಣೆ ಹಾಕುತ್ತಿತ್ತು. ಈ ಬಾರಿಯೂ ಹಿರಿಯ ನಾಯಕರು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅಚ್ಚರಿ ಎಂಬಂತೆ ಯುವಕ ಮಿಥುನ್ ರೈ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ರಮಾನಾಥ ರೈ, ರಾಜೇಂದ್ರ ಕುಮಾರ್, ವಿನಯ ಕುಮಾರ್ ಸೊರಕೆ, ಜನಾರ್ದನ ಪೂಜಾರಿ ಅವರಂಥ ಹಿರಿಯರ ಬದಲು ಯುವ ಮುಖವನ್ನು ಕಣಕ್ಕಿಳಿಸಿರುವುದು ಕಾಂಗ್ರೆಸ್ ಪಾಳಯದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.
ಹೀಗೆ ಘಟಾನುಘಟಿ ನಾಯಕರ ಪೈಪೋಟಿಯಿದ್ದರೂ ಅವರೆಲ್ಲರನ್ನು ಕಡೆಗಣಿಸಿ ಮಿಥುನ್ ರೈ ಅವರಿಗೆ ಟಿಕೆಟ್ ನೀಡುವಲ್ಲಿ ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆಯಿದೆ. ಅದು ಹೊಸ ಹುಮ್ಮಸ್ಸಿನೊಂದಿಗೆ ಹಾಗೂ ಅಬ್ಬರದೊಂದಿಗೆ ಚುನಾವಣಾ ಕಣ ಪ್ರವೇಶಿಸುವ ಯುವ ಕಲಿಯೊಬ್ಬರನ್ನು ಕಣಕ್ಕೆ ಇಳಿಸುವುದು. ಗೆದ್ದರೆ ಓಕೆ. ಇಲ್ಲವೋ ಮುಂದಿನ ಬಾರಿಗಾದರೂ ಕ್ಷೇತ್ರದಲ್ಲಿ ತನ್ನ ಹಿಡಿತ ಬಿಗಿಪಡಿಸಲು ಈ ಯುವ ನಾಯಕನಿಗೆ ಒಂದು ಅವಕಾಶ ನೀಡುವುದು.
ಮೋದಿ ಅಲ್ಲ, ಕಾಂಗ್ರೆಸ್ಸಿಗೆ ನಳಿನ್ ಟಾರ್ಗೆಟ್
ಕೇಂದ್ರ ಸರ್ಕಾರವನ್ನು ಟೀಕಿಸುವ ಬದಲು ಇಲ್ಲಿ ಹಾಲಿ ಸಂಸದ ನಳಿನ್ ಕುಮಾರ್‌ರ ಅಭಿವೃದ್ಧಿ ವೈಫಲ್ಯವನ್ನೇ ಪ್ರಚಾರದ ಪ್ರಮುಖ ಅಜೆಂಡಾವನ್ನಾಗಿ ಕಾಂಗ್ರೆಸ್ ಮಾಡಿಕೊಂಡಿದೆ. ಮೇಲ್ಸೇತುವೆ ಕಾಮಗಾರಿ ವಿಳಂಬ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಗಿತ ಹಾಗೂ ದಕ್ಷಿಣ ಕನ್ನಡದ ಹೆಮ್ಮೆಯ ಬ್ಯಾಂಕ್‌ಗಳಲ್ಲೊಂದಾದ ವಿಜಯಾ ಬ್ಯಾಂಕ್ ಉಳಿಸಿಕೊಳ್ಳಲಿಲ್ಲ ಎಂಬ ವಿಚಾರ ಮುಂದಿಟ್ಟುಕೊಂಡು ನಳಿನ್ ಹಣಿಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಇದಲ್ಲದೆ ಮಿಥುನ್ ರೈ ಅವರ ರಾಜಕೀಯ ಗುರು ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಕರೆಸಿಕೊಂಡು ಕಾಂಗ್ರೆಸ್ ಭರ್ಜರಿ ಪ್ರಚಾರಕ್ಕೆ ಮುಂದಾಗಿದೆ. ಸದ್ಯದಲ್ಲೇ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಅವರನ್ನು ಕರೆಸಿಕೊಳ್ಳುವ ಲೆಕ್ಕಾಚಾರವೂ ಸ್ಥಳೀಯ ಕಾಂಗ್ರೆಸ್ ಮುಖಂಡರಿಗಿದೆ.
ಕಾಂಗ್ರೆಸ್ಸಿನ ಮತ ಬ್ಯಾಂಕಿಗೆ ಕನ್ನ?
ದ.ಕ. ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವಿನ ಲೆಕ್ಕಾಚಾರವನ್ನು ನಿರ್ಧರಿಸುವುದು ಎಸ್‌ಡಿಪಿಐ ಎಂಬ ಮಾತು ಕೇಳಿಬರುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ 27,254 ಮತಗಳನ್ನು ಪಡೆದು ತೃತೀಯ ಸ್ಥಾನ ಪಡೆದಿತ್ತು. ಈ ಬಾರಿ ಇಲ್ಲಿನ ಎಲ್ಲ ಅಸೆಂಬ್ಲಿ ಕ್ಷೇತ್ರದಲ್ಲಿ ಆ ಪಕ್ಷ ಪ್ರಚಾರಕ್ಕೆ ತೊಡಗಿದ್ದು, ಪ್ರಗತಿಪರರನ್ನು ಕರೆಸಿ ಮತಯಾಚನೆಗೆ ನಿರ್ಧರಿಸಿದೆ. ಆದಷ್ಟುಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ತಂತ್ರಗಾರಿಕೆ ನಡೆಸುವ ಮೂಲಕ ತನ್ನ ಅಸ್ತಿತ್ವವನ್ನು ಸಾಬೀತುಪಡಿಸುವ ಪ್ರಯತ್ನ ನಡೆಸುತ್ತಿದೆ. ಇದರಲ್ಲಿ ಎಸ್‌ಡಿಪಿಐ ಯಶಸ್ವಿಯಾದರೆ, ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಿಗೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಲಿದೆ.
ಯಾರೇ ಗೆದ್ದರೂ ಬಂಟರೇ!
ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಹಾಗೂ ಕಾಂಗ್ರೆಸ್‌ನ ಮಿಥುನ್ ರೈ ಇವರಿಬ್ಬರಲ್ಲಿ ಯಾರು ಗೆದ್ದರೂ ಗೆಲ್ಲುವುದು ಬಂಟ ಸಮುದಾಯದವರೇ ಎಂಬುದು ಈ ಚುನಾವಣೆಯ ವಿಶೇಷ. ಜಿಲ್ಲೆಯಲ್ಲಿ ಬಿಲ್ಲವರ ಪ್ರಾಬಲ್ಯ ತುಸು ಹೆಚ್ಚೇ ಇದೆ. ನಂತರದ ಸ್ಥಾನ ಬಂಟರು, ಒಕ್ಕಲಿಗ, ಅಲ್ಪಸಂಖ್ಯಾತರು, ಬ್ರಾಹ್ಮಣರು, ಹಿಂದುಳಿದ ವರ್ಗಗಳದ್ದು. ಎರಡೂ ಪಕ್ಷಗಳಲ್ಲಿ ಬಿಲ್ಲವ ಅಭ್ಯರ್ಥಿಗಳಿಲ್ಲ. ಇಬ್ಬರು ಬಂಟ ಸಮುದಾಯದವರು ಇರುವುದರಿಂದ ಬಂಟರ ಮತ ವಿಭಜನೆಯಾಗಬಹುದು. ಹಾಗಾಗಿ ಬಿಲ್ಲವರ ಮತಗಳೇ ಇಲ್ಲಿ ನಿರ್ಣಾಯಕವಾಗಲಿದೆ.
2014ರ ಫಲಿತಾಂಶ
ನಳಿನ್ ಕುಮಾರ್ ಕಟೀಲು| ಬಿಜೆಪಿ: 6,42,739
ಜನಾರ್ದನ ಪೂಜಾರಿ| ಕಾಂಗ್ರೆಸ್: 4,99,030
ಹನೀಫ್ ಖಾನ್ ಕೊಡಾಜೆ| ಎಸ್‌ಡಿಪಿಐ: 27,254
ಯಾದವ ಶೆಟ್ಟಿ| ಸಿಪಿಎಂ: 9,394
ನೋಟಾ: 7,109
ಗೆಲುವಿನ ಅಂತರ: 1,43,709
13 ಮಂದಿ ಅಖಾಡದಲ್ಲಿ
ಈ ಬಾರಿ 13 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ನಳಿನ್ ಕುಮಾರ್ ಕಟೀಲ್ (ಬಿಜೆಪಿ), ಮಿಥುನ್ ಎಂ. ರೈ (ಕಾಂಗ್ರೆಸ್), ಎಸ್.ಸತೀಶ್ ಸಾಲಿಯಾನ್ (ಬಿಎಸ್‌ಪಿ), ಮಹಮ್ಮದ್ ಇಲಿಯಾಸ್ (ಎಸ್‌ಡಿಪಿಐ), ವಿಜಯ್ ಶ್ರೀನಿವಾಸ್ ಸಿ. (ಉತ್ತಮ ಪ್ರಜಾಕೀಯ ಪಾರ್ಟಿ), ಸುಪ್ರೀತ್ ಕುಮಾರ್ ಪೂಜಾರಿ (ಹಿಂದೂಸ್ತಾನ್ ಜನತಾ ಪಾರ್ಟಿ), ಅಬ್ದುಲ್ ಹಮೀದ್, ಅಲೆಕ್ಸಾಂಡರ್, ದೀಪಕ್ ರಾಜೇಶ್ ಕುವೆಲ್ಲೊ, ಮಹಮ್ಮದ್ ಖಾಲೀದ್, ಮ್ಯಾಕ್ಸಿಂ ಪಿಂಟೋ, ವೆಂಕಟೇಶ್ ಬೆಂಡೆ ಹಾಗೂ ಎಚ್.ಸುರೇಶ್ ಪೂಜಾರಿ ಪಕ್ಷೇತರರಾಗಿ ಕಣದಲ್ಲಿದ್ದಾರೆ.
ಮತದಾರರು: 17,24,566 | ಪುರುಷ: 8,45,283 | ಮಹಿಳೆ: 8,79,186
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 31, 2019, 4:56 PM IST