ಕೋಟೆ ನಾಡು ಚಿತ್ರದುರ್ಗಕ್ಕಾಗಿ ಹೊರಗಿನವರ ಕಾದಾಟ!
ಕಾಂಗ್ರೆಸ್ಸಿನ ಚಂದ್ರಪ್ಪ, ಬಿಜೆಪಿ ನಾರಾಯಣ ಸ್ವಾಮಿ ಜಿದ್ದಾಜಿದ್ದಿನ ಕದನ | ಇಬ್ಬರೂ ಮಾದಿಗರು, ಮತ ವಿಭಜನೆ ಸಂಭವ ದೋಸ್ತಿ ಮತಗಳು ಒಗ್ಗೂಡಿದರೆ ಚಂದ್ರಪ್ಪ ಹಾದಿ ಸಲೀಸು | ಅದಾಗದಿದ್ದರೆ ನಾರಾಯಣಸ್ವಾಮಿಗೆ ಭಾರಿ ಅನುಕೂಲ
ಚಿಕ್ಕಪ್ಪನಹಳ್ಳಿ ಷಣ್ಮುಖ, ಕನ್ನಡಪ್ರಭ
ಕ್ಷೇತ್ರ ಸಮೀಕ್ಷೆ: ಚಿತ್ರದುರ್ಗ ಲೋಕಸಭಾ ಕ್ಷೇತ್ರ
ಚಿತ್ರದುರ್ಗ[ಏ.11]: ಲಾಗಾಯ್ತಿನಿಂದಲೂ ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ಸ್ವಾತಂತ್ರ್ಯಾ ನಂತರ ನಡೆದ ಚುನಾವಣೆಗಳಲ್ಲಿ ೧೦ಕ್ಕೂ ಹೆಚ್ಚು ಸಲ ಕಾಂಗ್ರೆಸ್ ಪ್ರಭುತ್ವ ಸಾಧಿಸಿದೆ. ಹಾಗಂತ ಕಾಂಗ್ರೆಸ್ ಕೋಟೆ ಸದಾ ಭದ್ರವಾಗಿತ್ತು ಅಂತೇನೂ ಇಲ್ಲ. ಜನತಾ ಪರಿವಾರದವರು ಕೋಟೆ ಕಲ್ಲುಗಳ ಸಡಿಲಗೊಳಿಸಿ ಆಗಿಂದಾಗ್ಗೆ ಬಥೇರಿಗಳ ಮೇಲೆ ಬಾವುಟ ಹಾರಿಸಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಪಿ. ಕೋದಂಡ ರಾಮಯ್ಯ, ಚಿತ್ರನಟ ಶಶಿಕುಮಾರ್ ಜನತಾ ಪರಿವಾರದ ಪ್ರತಿನಿಧಿಯಾಗಿ ಇಲ್ಲಿ ಒಮ್ಮೆ ಆಯ್ಕೆಯಾಗಿದ್ದರೆ, ಅಮೆರಿಕದಿಂದ ಬಂದು ಬಿಜೆಪಿ ಅಭ್ಯರ್ಥಿಯಾಗಿ ಜನಾರ್ದನ ಸ್ವಾಮಿ ಕೂಡಾ ಗೆಲವಿನ ನಗೆ ಬೀರಿದ್ದರು. ಹೊರಗಿನವರಿಗೆ ರತ್ನಗಂಬಳಿ ಹಾಸಿ ರೇಷ್ಮೆ ಬಟ್ಟೆಯಲ್ಲಿ ಕ್ಷೇತ್ರವನ್ನು ಸುತ್ತಿ ಬಳುವಳಿಯಾಗಿ ನೀಡುವುದು ಇಲ್ಲಿನ ಜನರ ಖಯಾಲಿ. ಪ್ರಸ್ತುತದ ಚುನಾವಣೆ ಕೂಡಾ ಹೊರಗಿನವರಿಗೆ ಚಿತ್ರದುರ್ಗವನ್ನು ಪ್ರತಿಷ್ಠೆಯ ಕಣವನ್ನಾಗಿಸಿದೆ. ಕಳೆದ ಬಾರಿ ಮೋದಿ ಹವಾದ ನಡುವೆಯೂ ಗೆದ್ದಿದ್ದ ಬಿ.ಎನ್.ಚಂದ್ರಪ್ಪ ಈ ಸಲವೂ ಕಾಂಗ್ರೆಸ್‌ನಿಂದ ಕಣಕ್ಕಿಳಿದಿ ದ್ದಾರೆ. ಬಿಜೆಪಿಯಿಂದ ಆನೇಕಲ್ ನಾರಾಯಣಸ್ವಾಮಿಗೆ ಟಿಕೆಟ್ ನೀಡಲಾಗಿದೆ.
ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಪಾರುಪತ್ಯ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಚಿತ್ರದುರ್ಗ ಜಿಲ್ಲೆಯ ಆರು ಹಾಗೂ ತುಮಕೂರು ಜಿಲ್ಲೆಯ ಪಾವಗಡ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳು ಒಳಗೊಳ್ಳುತ್ತವೆ. ಚಿತ್ರದುರ್ಗದ ಐದು ಕಡೆ ಬಿಜೆಪಿ ಹಾಗೂ ಚಳ್ಳಕೆರೆಯಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಶಿರಾವನ್ನು ಜೆಡಿಎಸ್ ಮತ್ತು ಪಾವಗಡವನ್ನು ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿದ್ದಾರೆ. ಈ ಸಂಖ್ಯೆ ಆಧರಿಸಿ ಬಿಜೆಪಿ ಮೇಲುಗೈ ಎಂದು ಲೆಕ್ಕ ಹಾಕುವಂತಿಲ್ಲ. ಏಕೆಂದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ೪ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷವು ಕಾಂಗ್ರೆಸ್ ಹಾಗೂ ಬಿಜೆಪಿಗೆ ಪೈಪೋಟಿ ನೀಡಿತ್ತು. ಮೈತ್ರಿ ಅಭ್ಯರ್ಥಿ ಕಣದಲ್ಲಿರುವುದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಮತಗಳ ಒಗ್ಗೂಡಿಸಿಯೇ ಫಲಿತಾಂಶದ ಮೇಲೆ ಬೀರಬಹುದಾದ ಪರಿಣಾಮಗಳ ವ್ಯಾಖ್ಯಾನಿಸಬೇಕಾಗಿದೆ.
ಪರಿಶಿಷ್ಟರಲ್ಲಿಯೇ ಮುಸುಕಿನ ಗುದ್ದಾಟ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಪರಿಶಿಷ್ಟರಲ್ಲಿನ ಮಾದಿಗ ಸಮುದಾಯ ಇಲ್ಲಿ ಬಹುಸಂಖ್ಯಾತ ಎನಿಸಿಕೊಂಡಿದೆ. ಪರಿಶಿಷ್ಟರಲ್ಲಿನ ಒಳ ಜಾತಿಗಳು ಗದ್ದುಗೆ ಏರಲು ಪೈಪೋಟಿ ಇಲ್ಲಿ ಸಹಜವಾಗಿದೆ. ಕ್ಷೇತ್ರ ಮೀಸಲಾಗಿ ರೂಪಾಂ ತರಗೊಂಡಾಗ ಕಾಂಗ್ರೆಸ್‌ನಿಂದ ಮಾದಿಗ ಸಮುದಾಯದ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಹಾಗೂ ಭೋವಿ ಸಮುದಾಯದ ಬಿಜೆಪಿಯ ಜನಾರ್ದನ ಸ್ವಾಮಿ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಜನಾರ್ದನ ಸ್ವಾಮಿ ಗೆಲವು ಸಾಧಿಸಿದ್ದರು. ನಂತರದ ಚುನಾವಣೆಯಲ್ಲಿ ಜನಾರ್ದನ ಸ್ವಾಮಿ ಹಾಗೂ ಮಾದಿಗ ಸಮುದಾಯದ ಬಿ.ಎನ್. ಚಂದ್ರಪ್ಪ ಅವರ ನಡುವೆ ಪೈಪೋಟಿ ಏರ್ಪಟ್ಟು ಕಾಂಗ್ರೆಸ್‌ನ ಚಂದ್ರಪ್ಪ ಜಯ ಸಾಧಿಸಿದ್ದರು. ಆದರೆ ಈ ಬಾರಿ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ಮಾದಿಗ ಸಮುದಾಯಕ್ಕೆ ಟಿಕೆಟ್ ನೀಡಿವೆ. ಮಾದಿಗ ಸಮುದಾಯದ ಮತಗಳು ವಿಭಜನೆಯಾಗುವ ಸಾಧ್ಯತೆಯಿರುವುದರಿಂದ ಸೋಲು- ಗೆಲುವಿನ ಲೆಕ್ಕಾಚಾರ ಅಷ್ಟು ಸುಲಭವಾಗಿ ಕೈಗೆ ಎಟಕುತ್ತಿಲ
ಭೋವಿ ಸಮುದಾಯದ ಮುನಿಸು ಕಳೆದ ಎರಡು ಬಾರಿ ಬಿಜೆಪಿ ಭೋವಿ ಸಮುದಾಯಕ್ಕೆ ಟಿಕೆಟ್ ನೀಡಿತ್ತು. ಈ ಬಾರಿಯೂ ಟಿಕೆಟ್ ಬೇಕು ಎಂಬ ಪಟ್ಟನ್ನು ಭೋವಿ ಸಮುದಾಯ ಬಿಜೆಪಿ ಹೈಕಮಾಂಡ್ ಮುಂದೆ ಮಂಡಿಸಿತ್ತು. ಸ್ವತಃ ಸಮುದಾಯದ ಪೀಠಾಧಿಪತಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಈ ಸಂಬಂಧ ಬೀದಿ ಗಿಳಿದು ಹಕ್ಕೊತ್ತಾಯ ಮಂಡಿಸಿದ್ದರು. ನಂತರದ ಬೆಳವಣಿಗೆ ಯಲ್ಲಿ ಬಿಜೆಪಿ ಮಾದಿಗ ಸಮುದಾಯದ ಆನೇಕಲ್ ನಾರಾಯಣ ಸ್ವಾಮಿ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದಾಗಿ ಭೋವಿ ಶ್ರೀಗಳ ಮುನಿಸು ಇನ್ನೂ ಮರೆಯಾಗಿಲ್ಲ. ಅಂದಾಜು ಒಂದು ಲಕ್ಷದಷ್ಟು ಭೋವಿ ಸಮುದಾಯದ ಮತಗಳು ಬಿಜೆಪಿ ಓಟಕ್ಕೆ ತೊಡರುಗಾಲು ಹಾಕುವ ಸಾಧ್ಯತೆಗಳಿವೆ
ಮಾದಿಗ ಮತ ವಿಭಜನೆ ಮಾದಿಗ ಸಮುದಾಯದ ಸುಮಾರು ೩ ಲಕ್ಷದಷ್ಟು ಮತಗಳಿವೆ ಎಂದು ಅಂದಾಜಿಸಲಾಗಿದೆ. ಕಳೆದ ಬಾರಿ ಮಾದಿಗ ಮತಗಳು ಇಡಿಯಾಗಿ ಕಾಂಗ್ರೆಸ್ ಪಾಲಾಗಿದ್ದವು. ಕಾಂಗ್ರೆಸ್ ಹಾಗೂ ಬಿಜೆಪಿ ಇಬ್ಬರೂ ಅಭ್ಯರ್ಥಿಗಳು ಮಾದಿಗ ಸಮುದಾಯಕ್ಕೆ ಸೇರಿರುವುದರಿಂದ ಮತ ವಿಭಜನೆಯಾಗುವ ನಿರೀಕ್ಷೆಯಿದೆ. ಎಷ್ಟರ ಪ್ರಮಾಣದಲ್ಲಿ ಮಾದಿಗ ಮತಗಳನ್ನು ಅಭ್ಯರ್ಥಿಗಳು ಸೆಳೆಯುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಣಯವಾಗುತ್ತದೆ
ನಾರಾಯಣಸ್ವಾಮಿ ಮಾದಿಗರಿಗೆ ಒಳ ಮೀಸಲಾತಿ ಕಲ್ಪಿಸುವ ಸದಾಶಿವ ಆಯೋಗದ ವರದಿ ಪರವಾಗಿದ್ದಾರೆಂಬ ಅಂಶವನ್ನು ಮುಂದಿಟ್ಟುಕೊಂಡು ಭೋವಿ ಸಮಾಜ ತೀವ್ರ ಪ್ರತಿಭಟನೆ ನಡೆಸಿತ್ತು. ಈ ಸಂಗತಿಯನ್ನು ಮಾದಿಗ ಸಮುದಾಯ ಸೂಕ್ಷ್ಮವಾಗಿ ಗಮನಿಸಿದೆ. ಹಾಗೊಂದು ವೇಳೆ ಮಾದಿಗರು ಬಿಜೆಪಿ ಪರವಾಗಿ ಕೈ ಜೋಡಿಸಿದರೆ ಭೋವಿ ಮತ್ತು ಲಂಬಾಣಿ ಸಮುದಾಯ ಕಾಂಗ್ರೆಸ್ ಪರವಾಗಿ ನಿಲ್ಲಬಹುದು ಎಂದು ಹೇಳಲಾಗುತ್ತಿದೆ. ಕ್ಷೇತ್ರದಲ್ಲಿ ಎರಡೂವರೆ ಲಕ್ಷದಷ್ಟು ಮುಸ್ಲಿಂ ಹಾಗೂ ಒಂದು ಲಕ್ಷದಷ್ಟು ಕುರುಬರ ಮತಗಳಿವೆ. ಬಿಜೆಪಿ ಈ ಮತಗಳನ್ನು ನೆಚ್ಚಿ ಕುಳಿತುಕೊಳ್ಳುವಂತಿಲ್ಲ. ಮೊಳಕಾಲ್ಮುರಿನಲ್ಲಿ ಶ್ರೀರಾಮುಲು ಇದ್ದಾರೆ. ನಾಯಕ ಸಮಾಜದ ಮತಗಳ ಮೇಲೆ ಅವರು ಕಣ್ಣಿಟ್ಟಿದ್ದಾರೆ. ಕ್ಷೇತ್ರದಲ್ಲಿ ಒಂದೂವರೆ ಲಕ್ಷದಷ್ಟು ಗೊಲ್ಲ ಜನಾಂಗದ ಮತಗಳಿದ್ದು ಹಿರಿಯೂರಿನಲ್ಲಿ ಇದೇ ಸಮುದಾಯದ ಪೂರ್ಣಿಮಾ ಬಿಜೆಪಿ ಶಾಸಕಿಯಾಗಿದ್ದಾರೆ. ಗೊಲ್ಲ, ನಾಯಕ, ಮಾದಿಗರ ಮತಗಳನ್ನು ಹೆಚ್ಚು ಪಡೆಯುವರ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ.
ಶಿರಾ, ಪಾವಗಡ ನಿರ್ಣಾಯಕ ತುಮಕೂರು ಜಿಲ್ಲೆಯ ಶಿರಾ ಹಾಗೂ ಪಾವಗಡ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯಿಲ್ಲ. ಅಲ್ಲೇನಿದ್ದರೂ ಜೆಡಿಎಸ್ ಹಾಗೂ ಕಾಂಗ್ರೆಸ್ ಹವಾ. ಮೈತ್ರಿ ಅಭ್ಯರ್ಥಿ ಕಣದಲ್ಲಿರುವುದರಿಂದ ಕಾಂಗ್ರೆಸ್ ಈ ಕ್ಷೇತ್ರಗಳನ್ನೇ ಹೆಚ್ಚು ನೆಚ್ಚಿಕೊಂಡಿದೆ. ಪಾವಗಡದಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಜೆಡಿಎಸ್‌ನ ತಿಮ್ಮರಾಯಪ್ಪ ಕಳೆದ ವಿಧಾಸಭೆ ಚುನಾವಣೆಯಲ್ಲಿ ಕೇವಲ ೪೫೦ ಮತಗಳ ಅಂತರದಿಂದ ಭೋವಿ ಸಮುದಾಯದ ವೆಂಕಟರಮಣಪ್ಪ ಅವರ ಕೈಲಿ ಸೋತಿದ್ದರು. ವೆಂಕರಮಣಪ್ಪ ಕೈಯಿಂದ ಬಿಜೆಪಿ ಎಷ್ಟರಮಟ್ಟಿಗೆ ಮಾದಿಗರ ವೋಟು ಕೀಳಲಿದೆ ಎಂಬುದು ಕೂಡಾ ಫಲಿತಾಂಶವನ್ನು ನಿರ್ಣಾಯಕವನ್ನಾಗಿಸಲಿದೆ. ಶಿರಾದಲ್ಲಿ ಜೆಡಿಎಸ್‌ನ ಸತ್ಯನಾರಾಯಣ ಶಾಸಕರಾಗಿದ್ದು ತಡವಾಗಿ ಅವರು ಕಾಂಗ್ರೆಸ್ ಪರ ಫೀಲ್ಡಿಗಿಳಿದಿದ್ದಾರೆ.
ಕಾಂಗ್ರೆಸ್ಸಿಗೆ ಮೋದಿ ಹವಾ ನಡುಕ ಮತದಾನ ಹತ್ತಿರ ಬಂದರೂ ಮುಗುಮ್ಮಾಗಿದ್ದ ಕ್ಷೇತ್ರ ಮೋದಿ ಬಂದು ಹೋದ ನಂತರ ಹೆಚ್ಚು ಚುರುಕಾಗಿದೆ. ಸಮಾವೇಶಕ್ಕೆ ಮಾದಿಗ ಸಮುದಾಯದ ಹೆಚ್ಚು ಯುವಕರನ್ನು ಬಿಜೆಪಿ ಕರೆ ತಂದಿದ್ದು ಸಹಜವಾಗಿಯೇ ಕಾಂಗ್ರೆಸ್‌ನಲ್ಲಿ ನಡುಕ ಹುಟ್ಟಿಸಿದೆ. ಮೋದಿ ಕೂಡಾ ತಮ್ಮ ಭಾಷಣದಲ್ಲಿ ಯುವ ಜನಾಂಗವನ್ನು ಪ್ರೇರೇಪಿಸಿ ಹೋಗಿದ್ದಾರೆ.
ಕಾಂಗ್ರೆಸ್-ಬಿಜೆಪಿ ಹಣಾಹಣಿ
ಒಟ್ಟು 19 ಮಂದಿ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಬಿ.ಎನ್. ಚಂದ್ರಪ್ಪ, ಬಿಜೆಪಿಯಿಂದ ನಾರಾಯಣಸ್ವಾಮಿ ಸ್ಪರ್ಧಿಸಿದ್ದಾರೆ. ಉಳಿದಂತೆ ಮಹಂತೇಶ (ಬಿಎಸ್ಪಿ), ಅರುಣಾಚಲಂ ವೈ. (ಪಿರಮಿಡ್ ಪಾರ್ಟಿ ಆಫ್ ಇಂಡಿಯಾ), ದೇವೇಂದ್ರಪ್ಪ (ಉತ್ತಮ ಪ್ರಜಾಕೀಯ ಪಾರ್ಟಿ), ನಿರಂಜನ ಎ.ಡಿ. (ಅಂಬೇ ಡ್ಕರ್ ಸಮಾಜ ಪಾರ್ಟಿ), ಎಸ್. ಮೀಠ್ಯನಾಯ್ಕ(ಪ್ರಗತಿಶೀಲ ಸಮಾಜವಾದಿ ಪಾರ್ಟಿ), ವೈ. ಕುಮಾರ್, ಗಣೇಶ್, ತಿಪ್ಪೇ ಸ್ವಾಮಿ ಟಿ, ಸಿ.ಹೆಚ್. ನಾರಾಯಣಸ್ವಾಮಿ, ಡಿ. ಪೆನ್ನಪ್ಪ, ವಿ. ಎಸ್. ಭೂತರಾಜ್, ರಮೇಶ್ ವಿ, ಎಲ್ .ರಂಗಪ್ಪ, ಲೋಕೇಶ್ ಎಂ.ಕೆ., ಎನ್.ಟಿ.ವಿಜಯಕುಮಾರ್, ಎಲ್. ವೇಣು ಗೋಪಾಲ, ಆರ್.ಹನುಮಂತಪ್ಪ (ಪಕ್ಷೇತರ) ಕಣದಲ್ಲಿದ್ದಾರೆ.
ಕಳೆದ ಬಾರಿಯ ಫಲಿತಾಂಶ
ಬಿ.ಎನ್ ಚಂದ್ರಪ್ಪ(ಕಾಂಗ್ರೆಸ್)- 4,67,511
ಜನಾರ್ದನ ಸ್ವಾಮಿ(ಬಿಜೆಪಿ)- 3,66,220
ಗೂಳಿಹಟ್ಟಿ ಶೇಖರ್- (ಜೆಡಿಎಸ್) 2,02,108
ಅಂತರ- 1,01,291
ಮತದಾರರು: :17,60,387| ಪುರುಷರು: 889274| ಮಹಿಳೆಯರು: 871009| ಇತರೆ: 104