ದೆಹಲಿ(ಮೇ.23): ಲೋಕಸಭಾ ಚುನಾವಣಾ ಫಲಿತಾಂಶ ಬಿಜೆಪಿ ಒಕ್ಕೂಟದ NDAಗೆ ವರವಾಗಿದ್ದರೆ, ಕಾಂಗ್ರೆಸ್ ಒಕ್ಕೂಟದ UPA ನೆಕಚ್ಚಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಬಿಜೆಪಿ ಕ್ಲೀನ್ ಸ್ವೀಪ್‌ನತ್ತ ಮುಖಮಾಡಿದೆ. ದೆಹಲಿಯ 7 ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲಿಟ್ಟಿದೆ. ವಿಶೇಷ ಅಂದರೆ ದೆಹಲಿಯ ಇಬ್ಬರು ಬಿಜೆಪಿ ಮುಖಂಡರು ಬರೋಬ್ಬರಿ 3.40 ಲಕ್ಷ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ: ಪಟ್ನಾಯಕ್ ಕೋಟೆಯಲ್ಲಿ ಬಿರುಕು ಮೂಡಿಸಿದ ಮೋದಿ ಅಲೆ!

ದೆಹಲಿ 7 ಕ್ಷೇತ್ರಗಳ ಪೈಕಿ ಪಶ್ಚಿಮ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಗರಿಷ್ಠ ಅಂತರದ ಮುನ್ನಡೆ ಕಾಯ್ಡುಕೊಂಡಿದ್ದಾರೆ. ಪರ್ವೇಶ್ 3.49 ಲಕ್ಷ ಮತಗಳ ಅಂತರದ ಮುನ್ನಡೆಯಲ್ಲಿದ್ದಾರೆ. 2014ರಲ್ಲಿ ಪರ್ವೇಶ್ ವರ್ಮಾ 2.68 ಲಕ್ಷ ಮತಗಳ ಅಂತರದಲ್ಲಿ ಗೆದ್ದು ದಾಖಲೆ ಬರೆದಿದ್ದರು. ಇದೇ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ತಿ ಮಹಾಬಲ್ ಮಿಶ್ರಾ ಎರಡನೇ ಸ್ಥಾನದಲ್ಲಿದ್ದು ಸೋಲು ಬಹುತೇಕ ಖಚಿತಗೊಂಡಿದೆ.

ಇದನ್ನೂ ಓದಿ: ಮೋದಿ ಪ್ರಮಾಣ ವಚನಕ್ಕೆ ದಿನಾಂಕ ಫಿಕ್ಸ್: ವಿಶೇಷ ಅತಿಥಿ ಬರಲಿದ್ದಾರೆ!

ಇನ್ನು ನಾರ್ತ್‌ವೆಸ್ಟ್ ಡೆಲ್ಲಿ ಕ್ಷೇತ್ರದಿಂದ  ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ, ಗಾಯಕ ಹನ್ಸ್ ರಾಜ್ ಹನ್ಸ್ 3.40 ಲಕ್ಷ ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷದ ಗಗನ್ ಸಿಂಗ್ ಹಾಗೂ ಕಾಂಗ್ರೆಸ್ ಪಕ್ಷದ ರಾಜೇಶ್ ಲಿಲೋಥಿಯಾ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

ನಾರ್ಥ್ ಈಸ್ಟ್ ಡೆಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ 2.99 ಲಕ್ಷ ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದರೆ. ತಿವಾರಿ, ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ ಆಮ್ ಆದ್ಮಿ ಪಾರ್ಟಿ ದಿಲೀಪ್ ಪಾಂಡೆ ವಿರುದ್ಧ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈಸ್ಟ್ ಡೆಲ್ಲಿಯಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ, ಕ್ರಿಕೆಟಿಗ ಗೌತಮ್ ಗಂಭೀರ್ 2.38 ಲಕ್ಷ ಮತಗಳ ಅಂತರ ಕಾಯ್ದುಕೊಂಡಿದ್ದಾರೆ. AAP ಪಕ್ಷದ ಅತೀಶಿ ಹಾಗೂ ಕಾಂಗ್ರೆಸ್‌ನ ಅರ್ವಿಂದರ್ ಸಿಂಗ್ ಲವ್ಲಿ ಹಿಂದಿಕ್ಕಿದ್ದಾರೆ.

ಇದನ್ನೂ ಓದಿ: ಸೋಲಿನ ಹೊಣೆಹೊತ್ತು JDS ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ರಾಜೀನಾಮೆ..?

ನವದೆಹಲಿ ಕ್ಷೇತ್ರದ ಬಿಜೆಪಿ ಅಭ್ಯರ್ತಿ ಮೀನಾಕ್ಷಿ ಲೇಖಿ, ಕಾಂಗ್ರೆಸ್ ಅಜಯ್ ಮಾಕೆನ್ ವಿರುದ್ದ 1.98 ಲಕ್ಷ ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ದಕ್ಷಿಣ ದೆಹಲಿಯ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧೂರಿ 2.26 ಲಕ್ಷ ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. AAP ಪಕ್ಷದ ರಾಘವ್ ಚಡ್ಡ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಬಾಕ್ಸರ್ ವಿಜೇಂದರ್ ಸಿಂಗ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ದೆಹಲಿಯ 7 ಕ್ಷೇತ್ರಗಳಲ್ಲಿ ಚಾಂದಿನಿ ಚೌಕ್ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಕಡಿಮೆ ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷವಧನ್  64,659 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್‌ನ ಜೈ ಪ್ರಕಾಶ್ ಅಗರ್ವಾಲ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. ಶೀಘ್ರದಲ್ಲೇ ಅಧೀಕೃತ ಘೋಷಣೆ ಹೊರಬೀಳಲಿದೆ. ದೆಹಲಿ ಬಿಜೆಪಿ ಕಚೇರಿಯಲ್ಲಿ ಈಗಾಗಲೇ ಕಾರ್ಯಕರ್ತರ ಸಂಭ್ರಮ ಜೋರಾಗಿದೆ. ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮ ಆಚರಣೆಯಲ್ಲಿ ತೊಡಗಿದ್ದಾರೆ.