ಮಂಡ್ಯ :  ಹೈಕಮಾಂಡಿನ ಸೂಚನೆಯಂತೆ ಅಭಿಪ್ರಾಯ ಸಂಗ್ರಹ ಸಭೆ ನಡೆಸಿರುವ ಜಿಲ್ಲಾ ಬಿಜೆಪಿ ಘಟಕವು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಬೇಷರತ್ತಾಗಿ ಬೆಂಬಲಿಸುವ ಒಂದು ಸಾಲಿನ ನಿರ್ಣಯ ಮಾಡಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧೆಯ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಹೀಗಾಗಿ ಪಕ್ಷದ ಸ್ಥಳೀಯ ನಾಯಕರು, ಕಾರ್ಯಕರ್ತರಲ್ಲಿ ಗೊಂದಲ ಮುಂದುವರೆದಿದೆ.

ಈ ಮಧ್ಯೆ ಹೈಕಮಾಂಡ್‌ ಆದೇಶದಂತೆ ಸ್ಥಳೀಯ ನಾಯಕರ ಅಭಿಪ್ರಾಯ ಕ್ರೋಡೀಕರಣಕ್ಕೆ ಮುಂದಾದ ರಾಜ್ಯ ಬಿಜೆಪಿ, ಗುರುವಾರ ಜಿಲ್ಲಾ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ರವಾನಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ನಾಯಕರ ಸಭೆ ನಡೆಯಿತು. ಸುಮಲತಾ ಬೆಂಬಲ ಪರ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಬಿಜೆಪಿ ಸ್ಪರ್ಧೆಯ ಸಾಧಕ- ಬಾಧಕಗಳು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅವರಿಗೆ ಬೆಂಬಲಿಸಿದರೆ ಆಗುವ ಲಾಭಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಲಾಯಿತು. ಸುಮಲತಾ ಮತ್ತು ನಿಖಿಲ್ ನಡುವಿನ ಮುಖಾಮುಖಿ ಸ್ಪರ್ಧೆಯಲ್ಲಿ ಬಿಜೆಪಿಯ ಪಾತ್ರ ಏನು ಎಂಬುದರ ಬಗ್ಗೆಯೂ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಅಂತಿಮವಾಗಿ ಸುಮಲತಾ ಅವರನ್ನು ಬೆಂಬಲಿಸಲು ನಿರ್ಧರಿಸಿ ನಿರ್ಣಯಕೊಳ್ಳಲಾಯಿತು.

ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಗುರಿ ಮುಟ್ಟುವುದು ಕಷ್ಟವಿದೆ. ಶತ್ರುವಿನ ಶತ್ರು ಮಿತ್ರ. ಆದ್ದರಿಂದ ನಾವು ಸುಮಲತಾ ಪರವಾಗಿ ನಿಲ್ಲಲು ಸಿದ್ಧರಿದ್ದೇವೆ, ಇದರಲ್ಲಿ ತಪ್ಪೇನಿದೆ? ಜೆಡಿಎಸ್‌ನ ಕುಟುಂಬ ರಾಜಕಾರಣವನ್ನು ಮಟ್ಟಹಾಕಲು ಇದು ಸೂಕ್ತ ಸಮಯ. ನಮ್ಮ ಪಕ್ಷದ ನಾಯಕರು ಸೂಚನೆ ನೀಡಿದರೆ ಸುಮಲತಾ ಪರವಾಗಿ ತನು, ಮನ, ಧನ ಅರ್ಪಿಸಿ ಕೆಲಸ ಮಾಡಲು ಸಿದ್ಧರಿದ್ದೇವೆ. ಅವರಿಗೆ ಬೇಷರತ್‌ ಬೆಂಬಲ ನೀಡಲು ನಿರ್ಣಯ ಮಾಡಿ ಕಳುಹಿಸಲಾಗಿದ್ದು ಹೈಕಮಾಂಡ್‌ ಸೂಚನೆಗಾಗಿ ಕಾಯುತ್ತಿದ್ದೇವೆ.

ಅರವಿಂದ್‌, ಮಂಡ್ಯ ನಗರ ಘಟಕ ಅಧ್ಯಕ್ಷ

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ