ಎಸ್‌. ಗಿರೀಶ್‌ಬಾಬು, ಕನ್ನಡಪ್ರಭ

ಬೆಂಗಳೂರು[ಏ.10]: ಲೋಕಸಭಾ ಚುನಾವಣೆ ಪ್ರಚಾರದ ಕಾವೇರುತ್ತಿರುವಂತೆಯೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಕೂಟದ ಅತಿ ಪ್ರಮುಖ ಸ್ಟಾರ್‌ ಪ್ರಚಾರಕರಾಗಿ ಹೊರಹೊಮ್ಮಿರುವವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಕಾಂಗ್ರೆಸ್‌ ಸ್ಪರ್ಧಿಸುವ ಕ್ಷೇತ್ರಗಳು ಮಾತ್ರವಲ್ಲದೆ, ಜೆಡಿಎಸ್‌ನ ಪ್ರಮುಖ ಕ್ಷೇತ್ರಗಳಲ್ಲೂ ಅವರಿಗೆ ತೀವ್ರ ಬೇಡಿಕೆಯಿದೆ. ಅದರ ಜತೆಗೆ ಈ ಕ್ಷೇತ್ರಗಳಲ್ಲಿ ಉಂಟಾಗಿರುವ ಆಂತರಿಕ ತುಮುಲವನ್ನು ಬಗೆಹರಿಸಿ ಮೈತ್ರಿಕೂಟದ ದೋಣಿಯನ್ನು ದಡ ಸೇರಿಸುವ ಹೊಣೆಗಾರಿಕೆಯನ್ನೂ ಸಿದ್ದರಾಮಯ್ಯ ಅವರ ಹೆಗಲಿಗೇರಿಸಲಾಗಿದೆ. ಅತ್ತ ಮೋದಿ ಹಾಗೂ ಬಿಜೆಪಿಯ ಪ್ರಚಾರ ವೈಖರಿಗೆ ಮಾರುತ್ತರ ನೀಡುವ ಹಾಗೂ ಮೈತ್ರಿಕೂಟದ ಗೊಂದಲಗಳನ್ನು ಪರಿಹರಿಸುವ ಸವಾಲುಗಳನ್ನು ಎದುರಿಸುತ್ತಿರುವ ಸಿದ್ದರಾಮಯ್ಯ ಅವರು ಮೈತ್ರಿ ಗೊಂದಲಗಳು, ಸೀಟು ಹಂಚಿಕೆ ಹಿಂದಿನ ಚಿಂತನೆ, ಮೈತ್ರಿ ಸರ್ಕಾರದ ಸಾಧನೆ, ಲೋಕಸಭಾ ಚುನಾವಣೆ ನಂತರ ಈ ಸರ್ಕಾರದ ಬಾಳುವಿಕೆ ಹಾಗೂ ಮೋದಿ ಪ್ರೇರಿತ ಬಿಜೆಪಿ ಪ್ರಚಾರ ತಂತ್ರವನ್ನು ಎದುರಿಸಲು ತಾವು ನಡೆಸಿರುವ ಸಿದ್ಧತೆ ಬಗ್ಗೆ ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿಶಾದಪಡಿಸಿದ್ದಾರೆ.

*ನಾಡಿನಾದ್ಯಂತ ಪ್ರಚಾರದಲ್ಲಿ ತೊಡಗಿಕೊಂಡಿದ್ದೀರಿ. ಯಾವುದಾದರೂ ಹವಾ ಕಾಣುತ್ತಿದೆಯೇ?

ಇಲ್ಲ. ರಾಜ್ಯದಲ್ಲಿ ನರೇಂದ್ರ ಮೋದಿ ಅಲೆ ಇದೆ ಅನ್ನೋದು ಸುಳ್ಳು. ಆಮೇಲೆ ಕೆಲವರು ಮೋದಿ ಮೋದಿ ಅಂತ ಕೂಗೋದು ಕೂಡ ಬಿಜೆಪಿಯವರ ಯೋಜಿತ ಪ್ರಾಪಗ್ಯಾಂಡ. ನನ್ನ ಪ್ರಕಾರ ಕಳೆದ ಲೋಕಸಭೆ ಚುನಾವಣೆಯಲ್ಲಿ ಇದ್ದಂತೆ ಈ ಬಾರಿ ಬಿಜೆಪಿ ಪರ ಒಲವು ಇಲ್ಲ. ಜನರು ಬದಲಾವಣೆ ಬಯಸುತ್ತಿರುವುದು ಕಂಡುಬರುತ್ತಿದೆ. ನಾನು ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಪ್ರಚಾರ ನಡೆಸಿದ್ದೇನೆ. ಎಲ್ಲೆಡೆಯೂ ಉತ್ತಮ ಪ್ರತಿಕ್ರಿಯೆ ಇದೆ. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಮೈತ್ರಿಕೂಟಕ್ಕೆ ಉತ್ತಮ ಅವಕಾಶವಿದೆ.

ಮೈತ್ರಿ ಕೂಟ ಈ ಬಾರಿ ಎಷ್ಟುಸ್ಥಾನ ಗಳಿಸಬಹುದು?

ನನ್ನ ಪ್ರಕಾರ ಮೈತ್ರಿಕೂಟ ರಾಜ್ಯದಲ್ಲಿ ಈ ಬಾರಿ 20 ಪ್ಲಸ್‌ ಸ್ಥಾನ ಗಳಿಸಲಿದೆ.

*ಆದರೆ ಮೈತ್ರಿಯಿಂದ ರಾಜ್ಯ ಕಾಂಗ್ರೆಸ್‌ಗೆ ಹೆಚ್ಚು ನಷ್ಟಉಂಟಾಗಿದೆ ಅಂತಾರಲ್ಲ?

ಇಲ್ಲಿ ಲಾಭ ನಷ್ಟದ ಪ್ರಶ್ನೆಯಿಲ್ಲ. ಕೋಮುವಾದಿ ಬಿಜೆಪಿ ಸೋಲಿಸಬೇಕು. ಜಾತ್ಯತೀತ ಮತಗಳು ವಿಭಜನೆಯಾಗಿ ಬಿಜೆಪಿಗೆ ಲಾಭವಾಗಬಾರದು ಎಂಬ ಕಾರಣಕ್ಕೆ ಮೈತ್ರಿ ಮಾಡಿಕೊಳ್ಳಲಾಗಿದೆ. ನಮ್ಮ ದೇಶ ಹಲವು ಜಾತಿ-ಧರ್ಮ ಹೊಂದಿರುವ ನಾಡು. ಇಲ್ಲಿ ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬಂದರೆ ಸಮಾಜದ ಸಾಮರಸ್ಯ ಕೆಡುತ್ತದೆ. ನಾಡಿನಲ್ಲಿ ಸಾಮರಸ್ಯ ಉಳಿಯಬೇಕು ಎಂದರೆ ಜಾತ್ಯತೀತ ಶಕ್ತಿಗಳು ಅಧಿಕಾರದಲ್ಲಿ ಇರಬೇಕು. ಆಗ ದೇಶದ ಸಾಮಾಜಿಕ ಸ್ವರೂಪ ಉಳಿಯುತ್ತದೆ. ಹೀಗಾಗಿ ಮೈತ್ರಿ ಮಾಡಿಕೊಂಡಿದ್ದೇವೆ.

*ಮೈತ್ರಿ ಬೇರು ಮಟ್ಟದಲ್ಲಿ ಸಮಸ್ಯೆ ಉಂಟುಮಾಡಿರುವಂತಿದೆ?

ಮೈತ್ರಿಯಲ್ಲಿ ಸಾಮರಸ್ಯ ಎಂಬುದು ಏಕ್‌ದಂ ಬಂದುಬಿಡುವುದಿಲ್ಲ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಾಂಪ್ರದಾಯಿಕ ವಿರೋಧಿಗಳು. ಈ ಭಾಗದಲ್ಲಿ ಬಿಜೆಪಿ ಇರಲೇ ಇಲ್ಲ. 2004ರ ನಂತರ ಈ ಭಾಗದಲ್ಲಿ ಬಿಜೆಪಿ ಕಾಣಿಸಿಕೊಂಡಿದೆ. ಅದಕ್ಕೂ ಮೊದಲಿನಿಂದಲೂ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಹೋರಾಟ ಇತ್ತು. ಹೀಗಾಗಿ ಸ್ವಲ್ಪ ಸಮಸ್ಯೆಯಿದೆ. ಅದು ಕ್ರಮೇಣ ಪರಿಹಾರವಾಗುತ್ತಾ ಇದೆ.

*ಮೈತ್ರಿಯಿಂದ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ‘ಬೇಸ್‌ ಕ್ರಿಯೇಟ್‌’ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಂತೆ ಆಗಲಿಲ್ಲವೇ?

ಬಿಜೆಪಿಗೆ ಎಲ್ಲಿ ಬೇಸ್‌ ಕ್ರಿಯೇಟ್‌ ಆಗಿದೆ. ಅಷ್ಟುಶಕ್ತಿ ಇದ್ದಿದ್ದರೆ ಅವರು ಮಂಡ್ಯದಲ್ಲಿ ಅಭ್ಯರ್ಥಿ ಏಕೆ ಹಾಕಲಿಲ್ಲ? ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು ಮಂಡ್ಯದಲ್ಲಿ ಅಭ್ಯರ್ಥಿಯನ್ನೇ ಹಾಕಿರಲಿಲ್ಲ. ನೀವು ಹೇಳಿದ್ದೇ ನಿಜವಾಗಿದ್ದರೆ ಬಿಜೆಪಿಗೆ ಶಕ್ತಿ ಬಂದುಬಿಡಬೇಕಿತ್ತಲ್ಲ? ಶಕ್ತಿ ಬಂದಿದ್ದರೆ ಅಭ್ಯರ್ಥಿ ನಿಲ್ಲಿಸಬೇಕಿತ್ತಲ್ಲ. ಏಕೆ ನಿಲ್ಲಿಸಲಿಲ್ಲ? ಏಕೆಂದರೆ, ಶಕ್ತಿ ಇಲ್ಲ ಅಂತ ಅವರಿಗೆ ಗೊತ್ತು. ಹೀಗಾಗಿಯೇ ನಿಲ್ಲಿಸಲಿಲ್ಲ. ಹಾಸನದಲ್ಲಿ ಬಿಜೆಪಿಗೆ ಅಭ್ಯರ್ಥಿಯೇ ಇರಲಿಲ್ಲ. ನಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಸೆಳೆದುಕೊಂಡರು. ಕಲಬುರಗಿಯಲ್ಲಿ ಅವರಿಗೆ ಅಭ್ಯರ್ಥಿ ಇದ್ದರೇನು? ವಾಸ್ತವವಾಗಿ ಬಿಜೆಪಿಗೆ ಸೂಕ್ತ ಅಭ್ಯರ್ಥಿಗಳೇ ಇಲ್ಲದೆ ನಮ್ಮ ಪಕ್ಷದವರನ್ನು ಸೆಳೆದುಕೊಂಡರು.

*ನೀವು ಮಧ್ಯಸ್ಥಿಕೆ ವಹಿಸಿಕೊಂಡ ನಂತರವೂ ಮಂಡ್ಯ ಗೊಂದಲ ಬಗೆಹರಿಯುತ್ತಿಲ್ಲ?

ಈಗ ಸ್ವಲ್ಪ ಬದಲಾವಣೆಯಾಗುತ್ತಿದೆ. ನನ್ನ ಪ್ರಕಾರ ತಳ ಮಟ್ಟದಲ್ಲಿ ಕಾರ್ಯಕರ್ತರು ಬದಲಾಗುತ್ತಿದ್ದಾರೆ. ಆದರೆ, ನಾಯಕರಲ್ಲಿ ಸ್ವಲ್ಪ ಸಮಸ್ಯೆಯಿದೆ. ಅದು ಬಗೆಹರಿಯುತ್ತದೆ.

*ಲೋಕಸಭೆ ಚುನಾವಣೆಯಲ್ಲಿ ಫ್ರೆಂಡ್ಲಿ ಫೈಟ್‌ ನಡೀಲಿ ಅಂತ ನೀವು ಹೇಳಿದ್ರಂತೆ?

ಹೌದು, ಕಾರ್ಯಕರ್ತರ ನಡುವೆ ಸಮಸ್ಯೆ ಆಗುತ್ತದೆ ಅಂತ ಅಂತಹ ಸಲಹೆ ನೀಡಿದ್ದು ನಿಜ. ಹೇಗೂ ಮುನ್ಸಿಪಾಲಿಟಿ ಚುನಾವಣೆಯನ್ನು ಫ್ರೆಂಡ್ಲಿಯಾಗಿಯೇ ಎದುರಿಸಿದ್ದೇವಲ್ಲ.

*ಸಮ್ಮಿಶ್ರ ಸರ್ಕಾರದ ಸಾಧನೆ ಮತ ತರುವುದೇ?

ಸಮ್ಮಿಶ್ರ ಸರ್ಕಾರವು ಈ ಹಿಂದಿನ ಕಾಂಗ್ರೆಸ್‌ ಸರ್ಕಾರದ ಎಲ್ಲ ಕಾರ್ಯಕ್ರಮ ಮುಂದುವರೆಸುತ್ತಿದೆ. ಜತೆಗೆ ಇನ್ನಷ್ಟುಕಾರ್ಯಕ್ರಮ ನೀಡಿದೆ. ಬ್ಯಾಂಕ್‌ ಸಾಲ ಮನ್ನಾ ಮಾಡಲು ತೀರ್ಮಾನ ಮಾಡಿದೆ. 12-13 ಸಾವಿರ ಕೋಟಿ ರು. ಈಗಾಗಲೇ ಸಾಲ ಮನ್ನಾಗಾಗಿ ನೀಡಿದ್ದಾರೆ. ಒಟ್ಟಾರೆ 45 ಸಾವಿರ ಕೋಟಿ ಸಾಲ ಮನ್ನಾ ಮಾಡುತ್ತಿದ್ದಾರೆ. ಅದರ ಜತೆಗೆ ಬೀದಿ ವ್ಯಾಪಾರಿಗಳಿಗೆ, ಮಹಿಳೆಯರಿಗೆ, ವಯಸ್ಸಾದವರಿಗೆ ಕಾರ್ಯಕ್ರಮ ಮಾಡಿದ್ದಾರೆ. ಹೀಗೆ ಹಿಂದಿನ ಸರ್ಕಾರ ಹಾಗೂ ಇಂದಿನ ಸರ್ಕಾರದ ಕಾರ್ಯಕ್ರಮಗಳು ಈ ಚುನಾವಣೆಯಲ್ಲಿ ಒಳ್ಳೆಯ ಪರಿಣಾಮ ಬೀರಲಿವೆ.

*ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬೇಕಿತ್ತು ಎಂದು ಕೆಲ ಶಾಸಕರು ಈಗಲೂ ಹೇಳುತ್ತಾರಲ್ಲ?

ಆ ರೀತಿ ಇಲ್ಲ. ಜನರಲ್ಲಿ ಮತ್ತೆ ಕಾಂಗ್ರೆಸ್‌ಗೆ ಅಧಿಕಾರ ಕೊಡಬೇಕಾಗಿತ್ತು ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಅಂತ ಅಭಿಪ್ರಾಯ ಇದೆ. ಅದು ಇದ್ದರೂ ಕೂಡ, ಹಿಂದಿನ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಸಮ್ಮಿಶ್ರ ಸರ್ಕಾರ ಮುಂದುವರೆಸುತ್ತಿದೆ. ಹೀಗಾಗಿ ಈ ಸರ್ಕಾರದ ಬಗ್ಗೆ ಅಸಂತೋಷವಿದೆ ಎಂಬುದು ಸರಿಯಲ್ಲ. ಅದೇನೇ ಇದ್ದರೂ ಮುಖ್ಯಮಂತ್ರಿ ವಿಚಾರ ಈಗಿಲ್ಲ. ಮತ್ತೊಂದು ವಿಧಾನಸಭಾ ಚುನಾವಣೆ ನಡೆದ ಬಳಿಕ ನೋಡೋಣ. ಅಲ್ಲಿಯವರೆಗೂ ರಾಜಕೀಯದಲ್ಲಿ ಏನೇನು ಆಗುತ್ತೋ... ನೋಡಿ, ನನಗೆ ವಯಸ್ಸಿನ ಕಾರಣಕ್ಕೆ ಚುನಾವಣಾ ರಾಜಕಾರಣ ಸಾಕು ಎನಿಸಿದೆ. ಸಕ್ರಿಯ ರಾಜಕೀಯದಲ್ಲಿ ಇರುತ್ತೇನೆ. ಆದರೆ, ಚುನಾವಣಾ ರಾಜಕಾರಣ ಸಾಕು ಎನಿಸಿದೆ. ಜನರು ಬಯಸಿದರೆ ಯೋಚಿಸುತ್ತೇನೆ. ಇಲ್ಲದಿದ್ದರೆ ಮುಂದಿನ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಅಂತ ಇದ್ದೇನೆ.

*ಕಳೆದ ಬಾರಿಯೂ ನೀವು ಸ್ಪರ್ಧಿಸಲು ಬಯಸಿರಲಿಲ್ಲ. ಆದರೆ, ಒತ್ತಡ ನಿರ್ಮಾಣವಾಯ್ತು?

ಇಲ್ಲ. ಆಗ ನನಗೆ ಒಂದು ಹೊಣೆಗಾರಿಕೆಯಿತ್ತು. ಐದು ವರ್ಷ ಮುಖ್ಯಮಂತ್ರಿಯಾಗಿ ಚುನಾವಣೆಗೆ ನಿಲ್ಲದಿದ್ದರೆ ತಪ್ಪು ಸಂದೇಶ ರವಾನೆಯಾಗುತ್ತಿತ್ತು. ಹೀಗಾಗಿ ಸ್ಪರ್ಧಿಸಿದ್ದೆ.

*ಒಟ್ಟಿನಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಅನ್ನೋ ಭಾವನೆಯಿದೆಯಲ್ಲವೇ?

ಅದು ಇದೆ. ನೋಡೋಣ. ಮುಂದಿನ ವಿಧಾನಸಭಾ ಚುನಾವಣೆ ನಂತರ.

*ವಿಧಾನಸಭೆ ಚುನಾವಣೆ ನಂತರವೇ ಅಥವಾ ಲೋಕಸಭೆ ಚುನಾವಣೆ ನಂತರವೇ?

ಈ ಲೋಕಸಭಾ ಚುನಾವಣೆಗೂ, ಮುಖ್ಯಮಂತ್ರಿ ವಿಚಾರಕ್ಕೂ ಸಂಬಂಧವಿಲ್ಲ. ಲೋಕಸಭಾ ಚುನಾವಣೆ ಮುಗಿದ ನಂತರವೂ ಸಮ್ಮಿಶ್ರ ಸರ್ಕಾರ ಮುಂದುವರೆಯುತ್ತದೆ.

*ಸೀಟು ಹಂಚಿಕೆ ವೇಳೆ ಕಾಂಗ್ರೆಸ್‌ ಗೆಲ್ಲಬಹುದಾಗಿದ್ದ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರಲ್ಲ?

ಹಾಗೇನೂ ಆಗಿಲ್ಲ. ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ನಮಗೆ ಪ್ರಬಲ ಅಭ್ಯರ್ಥಿ ಇರಲಿಲ್ಲ. ಮೈತ್ರಿಯಿಂದ ಅಲ್ಲಿ ಈಗ ಅನುಕೂಲವಾಗುತ್ತದೆ. ಅಲ್ಲಿನ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ನಮ್ಮಿಂದಲೂ ಸೀಟು ಕೇಳಿದ್ದ. ಯಾವಾಗ ಹೊಂದಾಣಿಕೆ ಆಗಿದೆ ಅಂತ ಗೊತ್ತಾಯ್ತೋ ಆಗ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾನೆæ. ಇನ್ನು ಮಂಡ್ಯ ಜೆಡಿಎಸ್‌ಗೆ ಬಿಟ್ಟುಕೊಡಬೇಕಾದ ಕ್ಷೇತ್ರವಾಗಿತ್ತು. ಹಾಸನದಲ್ಲಿ ಹಾಲಿ ಸಂಸದರಿದ್ದರು. ತುಮಕೂರಿನಲ್ಲಿ ಕಾಂಗ್ರೆಸ್‌ನ ಹಾಲಿ ಸಂಸದರಿದ್ದರೂ ಅಲ್ಲಿನ ಜನರು ದೇವೇಗೌಡರು ಸ್ಪರ್ಧಿಸಬೇಕು ಎಂದು ಬಯಸಿದರು. ಹೀಗಾಗಿ, ಅಲ್ಲಿ ಕಾಂಗ್ರೆಸ್‌ ಹಾಲಿ ಸಂಸದರನ್ನು ಹೊಂದಿದ್ದರೂ ಸೀಟು ಜೆಡಿಎಸ್‌ಗೆ ಬಿಟ್ಟುಕೊಡಬೇಕಾಯ್ತು.

*ಮೈಸೂರಿಗಾಗಿ ತುಮಕೂರು ಬಿಟ್ಟುಕೊಟ್ಟರು ಎಂಬ ಮಾತಿದೆ?

ನಾನು ಮೈಸೂರು ಹಾಗೂ ತುಮಕೂರು ಎರಡೂ ಉಳಿಸಿಕೊಳ್ಳಬೇಕು ಎಂದು ಹೇಳಿದ್ದೆ. ಆದರೆ, ಅಂತಿಮವಾಗಿ ರಾಹುಲ್‌ ಗಾಂಧಿ ಅವರು ನಿರ್ಧಾರ ತೆಗೆದುಕೊಂಡು ತುಮಕೂರನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರು.

*ನಿಮ್ಮ ಪ್ರಕಾರ ಈ ಬಾರಿಯ ಚುನಾವಣಾ ವಿಚಾರಗಳು ಯಾವುವು?

ಪ್ರಧಾನಮಂತ್ರಿ ನರೇಂದ್ರ ಮೋದಿ ವೈಫಲ್ಯ ಈ ಬಾರಿಯ ಮುಖ್ಯ ಚುನಾವಣಾ ವಿಚಾರ. ಮೋದಿ ಕಳೆದ ಐದು ವರ್ಷದಿಂದ ಏನೂ ಮಾಡಿಲ್ಲ. ಜನತೆಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸದೆ ಜನದ್ರೋಹ ಮಾಡಿದ್ದಾರೆ. ಈಗ ಸುಳ್ಳಿನ ಸರಮಾಲೆ ಹೊಂದಿರುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಆರ್ಟಿಕಲ್‌ 370 ರದ್ದು ಮಾಡುತ್ತೇವೆ ಅನ್ನುತ್ತಾರಲ್ಲ, ಅದೇನು ಹೊಸ ವಿಚಾರವೇ? ಜನಸಂಘ ಹುಟ್ಟಿದಂದಿನಿಂದ ಈ ವಿಚಾರವಿದೆ. ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು 1992ರಿಂದ ಹೇಳುತ್ತಲೇ ಬಂದಿದ್ದಾರೆ. ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂಬುದನ್ನು ಕಳೆದ ಬಾರಿಯೂ ಹೇಳಿದ್ದರು. ಐದು ವರ್ಷ ಅಧಿಕಾರದಲ್ಲಿ ಇದ್ದರಲ್ಲ ಆಗ ಏಕೆ ಮಾಡಲಿಲ್ಲ. ಅಧಿಕಾರ ಇದ್ದಾಗ ರೈತರಿಗೆ ಯಾವ ಸಹಾಯವನ್ನೂ ಮಾಡಿಲ್ಲ. ರೈತರ ಸಮಸ್ಯೆ ಪರಿಹರಿಸುವ ಕನಿಷ್ಠ ಪ್ರಯತ್ನವನ್ನೂ ಮಾಡಿಲ್ಲ. ಸಾಲಮನ್ನಾ ಮಾಡಲಿಲ್ಲ. ಬರಗಾಲ ಬಂದಾಗ ಸ್ಪಂದಿಸಲಿಲ್ಲ. ಇದೆಲ್ಲದರಿಂದಾಗಿ ಬಿಜೆಪಿ ರೈತರ ಪರ ಮಾತನಾಡುವ ನೈತಿಕತೆಯನ್ನೇ ಕಳೆದುಕೊಂಡಿದೆ. ಇನ್ನು ಕಾಂಗ್ರೆಸ್‌ ತಾನು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂಬುದನ್ನು ಹೇಳುತ್ತಿದೆ. ಇದನ್ನು ಜನರ ಮುಂದಿಟ್ಟುಕೊಂಡು ಪ್ರಚಾರಕ್ಕೆ ಹೋಗುತ್ತಿದ್ದೇವೆ.

*ಬಿಜೆಪಿ ರಾಷ್ಟ್ರೀಯತೆ, ಹಿಂದುತ್ವದ ವಿಚಾರಗಳನ್ನು ಪ್ರಧಾನವಾಗಿ ಪ್ರಸ್ತಾಪಿಸುತ್ತಿದೆ?

ರಾಷ್ಟ್ರೀಯತೆ ಬಗ್ಗೆ ಬಿಜೆಪಿಯವರಿಂದ ನಾವು ಪಾಠ ಕಲಿಯಬೇಕಿಲ್ಲ. ರಾಷ್ಟ್ರೀಯತೆ ಹಾಗೂ ದೇಶದ ಭದ್ರತೆ ಬಗ್ಗೆ ಕಾಂಗ್ರೆಸ್‌ ಪಕ್ಷದ ಬದ್ಧತೆ ಬಿಜೆಪಿಗಿಂತ ಎರಡು-ಮೂರು ಪಟ್ಟು ಹೆಚ್ಚಿದೆ. ಈ ಹಿಂದೆ ಪಾಕಿಸ್ತಾನದ ಮೇಲೆ 12 ಸರ್ಜಿಕಲ್‌ ಸ್ಟೆ್ರೖಕ್‌ ಆಗಿರಲಿಲ್ಲವೆ? ನಾಲ್ಕು ಯುದ್ಧ ಆಗಿರಲಿಲ್ಲವೆ? ಆ ಎಲ್ಲ ಯುದ್ಧಗಳಲ್ಲೂ ಭಾರತವು ಪಾಕಿಸ್ತಾನದ ಮೇಲೆ ಗೆದ್ದಿಲ್ಲವೆ? ಆಗ ಏನು ನರೇಂದ್ರ ಮೋದಿ ಇದ್ರಾ? ಕಳೆದ ಎಪ್ಪತ್ತು ವರ್ಷಗಳಿಂದ ಏನೂ ಆಗಿಲ್ಲ ಅಂತಾರಲ್ಲ, ಇವತ್ತು ದೇಶ ವಿಜ್ಞಾನ, ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಿರುವುದು, ಮೊಬೈಲ್‌ ಕ್ರಾಂತಿ ಸಂಭವಿಸಿರುವುದು, ರೈಲ್ವೆ ಕ್ಷೇತ್ರದ ಅಭಿವೃದ್ಧಿ, ಅಣೆಕಟ್ಟುಗಳ ನಿರ್ಮಾಣ, ಉದ್ಯೋಗ ಸೃಷ್ಟಿ, ನಮ್ಮ ರಾಜ್ಯ ಐಟಿ-ಬಿಟಿಯಲ್ಲಿ ವಿಶ್ವದಲ್ಲೇ ಮುಂದಿರುವುದು ಇವೆಲ್ಲ ಸುಳ್ಳಾ? ಹೋಗಲಿ, ಈ ಬಿಜೆಪಿಯವರು ತಾವು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದ್ದಾರೆ ಅದನ್ನು ಹೇಳಲಿ. ಮೋದಿ ಮತ್ತು ವಾಜಪೇಯಿ ಅಧಿಕಾರದಲ್ಲಿ ಇದ್ದರಲ್ಲ ಏನು ಮಾಡಿದ್ದಾರೆ? 11 ವರ್ಷ ಅಧಿಕಾರದಲ್ಲಿ ಇದ್ದರೂ ಏಕೆ ಇವರು ರಾಮಮಂದಿರ ಕಟ್ಟಲಿಲ್ಲ ಎನ್ನುವುದನ್ನು ಹೇಳಲಿ. ಇನ್ನು ಹಿಂದುತ್ವವನ್ನಂತೂ ಜನರ ದಾರಿ ತಪ್ಪಿಸುವ ತಂತ್ರವಾಗಿ ಬಳಸುತ್ತಾರೆ. ಇವರು ಮಾತ್ರ ಹಿಂದುಗಳಾ, ನಾವೆಲ್ಲ ಹಿಂದುಗಳಲ್ಲವಾ? ನೋಡಿ, ಹಿಂದು ಧರ್ಮ ಎಂದರೆ ಮನುಷ್ಯತ್ವವಿರುವ ಧರ್ಮ. ಈ ಬಿಜೆಪಿಯವರಿಗೆ ಮನುಷ್ಯತ್ವವೇ ಇಲ್ಲ. ಇಂತಹವರು ಹಿಂದು ಧರ್ಮದ ಬಗ್ಗೆ ಮಾತನಾಡುತ್ತಾರೆ. ಇಷ್ಟಕ್ಕೂ ಇವರೇನು ಹಿಂದು ಧರ್ಮದ ವಾರುಸುದಾರರಾ? ಯಾರು ಈ ವಾರಸುದಾರಿಕೆಯನ್ನು ಇವರಿಗೆ ನೀಡಿದ್ದಾರೆ? ಜನರನ್ನು ಭಾವನಾತ್ಮಕವಾಗಿ ಕೆರಳಿಸಲು ಹಿಂದುತ್ವವನ್ನು ಬಳಸುತ್ತಾರಷ್ಟೆ.

*ಬಿಜೆಪಿ ಎರಡು ಪಾಲಿಸಿ ಮಾಡಿಕೊಂಡಿದೆ. 75 ವರ್ಷ ದಾಟಿದವರಿಗೆ ಟಿಕೆಟ್‌ ನೀಡಬಾರದು ಮತ್ತು ಕುಟುಂಬ ರಾಜಕಾರಣಕ್ಕೆ ಪ್ರೋತ್ಸಾಹ ನೀಡುವುದಿಲ್ಲ ಅಂತ. ಕಾಂಗ್ರೆಸ್‌ನಲ್ಲಿ ಇಂತಹ ಪಾಲಿಸಿಗಳೇಕಿಲ್ಲ?

ಬಿಜೆಪಿಯವರು ಈ ಹಿಂದೆ 70 ವರ್ಷ ದಾಟಿದವರಿಗೆ ಸೀಟು ಕೊಡುವುದಿಲ್ಲ ಅಂತಿದ್ದರು. ಈಗ 75 ಅಂತಿದ್ದಾರೆ. ನೋಡಿ, ನಾನು ಸಹ ಯುವಕರಿಗೆ ಅವಕಾಶ ನೀಡಬೇಕು ಎಂಬ ವಾದವನ್ನು ಒಪ್ಪುತ್ತೇನೆ. ಆದರೆ, ಆರೋಗ್ಯ ಉತ್ತಮವಾಗಿದ್ದು, ಜನರ ಸೇವೆ ಮಾಡುವ ಸಾಮರ್ಥ್ಯವಿದ್ದರೆ ಏಕೆ ರಾಜಕಾರಣ ಮಾಡಬಾರದು? ಆರೋಗ್ಯವಿದ್ದರೆ ವಯಸ್ಸು ಅಡ್ಡಿಯಾಗಬಾರದು.

*ಕುಟುಂಬ ರಾಜಕಾರಣ?

ಈ ಕುಟುಂಬ ರಾಜಕಾರಣ ಎಲ್ಲಿ ಇಲ್ಲ? ಯಡಿಯೂರಪ್ಪ ಮನೆಯಲ್ಲಿ ಕುಟುಂಬ ರಾಜಕಾರಣವಿಲ್ಲವೇ? ರಾಜನಾಥ ಸಿಂಗ್‌ ಹಾಗೂ ಅವರ ಮಗ ಮಾಡುತ್ತಿರುವುದು ಕುಟುಂಬ ರಾಜಕಾರಣವಲ್ಲವೆ? ಬಿಜೆಪಿಯಲ್ಲಿ ಗಂಡ-ಹೆಂಡ್ತಿ ಎಂಪಿ ಆಗಿಲ್ಲವೇ? ಸುಮ್ಮನೇ ಹೇಳ್ತಾರೆ.

*ಪ್ರಧಾನಿ ಮೋದಿ ಮಹಾಗಠಬಂಧನ ಬಗ್ಗೆ ಲೇವಡಿ ಮಾಡುತ್ತಾರೆ?

ಅಲ್ಲ, ಎನ್‌ಡಿಎ ಅಂತ ಇದೆಯಲ್ಲ, ಹಾಗಂದರೆ ಏನು? ನ್ಯಾಷನಲ್‌ ಡೆಮಾಕ್ರೆಟಿಕ್‌ ಅಲೆಯನ್ಸ್‌ ಅಂತ ತಾನೆ? ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರೋದಿಲ್ಲ ಎಂದು ಬೇರೆ ಬೇರೆ ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಎನ್‌ಡಿಎ ರಚಿಸಿದ ಮೇಲೆ ಗಠಬಂಧನವನ್ನು ಟೀಕಿಸಲು ಯಾವ ನೈತಿಕತೆ ಮೋದಿಗಿದೆ?

*ಮೋದಿಗೆ ಸರಿಸಮ ನಾಯಕತ್ವ ಕಾಂಗ್ರೆಸ್‌ನಲ್ಲಿ ಇಲ್ಲ. ಅದು ದುರ್ಬಲ ನಾಯಕತ್ವ ಹೊಂದಿದೆ ಎಂದು ಬಿಜೆಪಿ ಲೇವಡಿ ಮಾಡುತ್ತದೆ?

ಮೋದಿಯೇನು ದೇವಲೋಕದಿಂದ ಇಳಿದು ಬಂದಿದ್ದಾರಾ? ಮೋದಿಯ ಬೆಳವಣಿಗೆ ಹಿಂದೆ ಯಾವ ಹೋರಾಟದ ಹಾದಿಯಿದೆ? ಇಷ್ಟಕ್ಕೂ ಮೋದಿ ಮುಖ್ಯಮಂತ್ರಿಯಾಗುವುದಕ್ಕೂ ಮೊದಲು ಏನಾಗಿದ್ದರು? ಏನೋ ಮುಖ್ಯಮಂತ್ರಿಯಾದರು. ಅನಂತರ ಕಾರ್ಪೊರೇಟ್‌ ಸಂಸ್ಥೆಗಳ ಸಹಾಯ ದೊರೆಯಿತು. ಒಳ್ಳೆಯ ಮಾರ್ಕೆಟಿಂಗ್‌ ಮಾಡಿಕೊಂಡರು. ಹೀಗಾಗಿ ಪ್ರಧಾನಿಯಾದರು. ಕಾಂಗ್ರೆಸ್‌ನಲ್ಲಿ ಮೋದಿಗಿಂತ ಸಾಮರ್ಥ್ಯವಿರುವ ನೂರಾರು ನಾಯಕರು ಇದ್ದಾರೆ.

*ರಾಹುಲ್‌ ಗಾಂಧಿ ಅವರನ್ನು ಮೋದಿ ಜತೆ ಹೋಲಿಕೆ ಮಾಡುತ್ತಾರೆ?

ರಾಹುಲ್‌ ಗಾಂಧಿ ವಯಸ್ಸಿನಲ್ಲಿ ಚಿಕ್ಕವರಿರಬಹುದು. ಆದರೆ, ರಾಹುಲ್‌ ಅವರಿಗೆ ಪ್ರಾಮಾಣಿಕತೆಯಿದೆ. ನುಡಿದಂತೆ ನಡೆಯಬೇಕು ಎಂಬ ಕಳಕಳಿಯಿದೆ. ಆದರೆ, ಆ ಮೋದಿಗೆ ಇಂತಹದ್ದು ಏನೂ ಇಲ್ಲ. ಬರೀ ಸುಳ್ಳು ಹೇಳುವುದು ಮಾತ್ರ ಅವರಿಗೆ ಗೊತ್ತು. ಕಳೆದ ಐದು ವರ್ಷದಲ್ಲಿ ಸುಳ್ಳು ಹೇಳುವುದು ಬಿಟ್ಟು ಅವರೇನೂ ಮಾಡಿಲ್ಲ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.