Asianet Suvarna News Asianet Suvarna News

ಚುನಾವಣಾ ರಾಜಕೀಯಕ್ಕೆ ಅಡ್ವಾಣಿ ಗುಡ್‌ಬೈ

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ವೇಳೆ ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರು ಟಿಕೆಟ್ ನಿರಾಕರಿಸಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. 

Lok Sabha Elections 2019 BJP Veteran Leader LK Advani Good By To Election Politics
Author
Bengaluru, First Published Mar 22, 2019, 10:23 AM IST

ನವದೆಹಲಿ :  ಬಿಜೆಪಿಯನ್ನು ಕೇವಲ 2 ಕ್ಷೇತ್ರದಿಂದ 200ರ ಗಡಿ ದಾಟಿಸಿದ್ದ ಹಿರಿಯ ಬಿಜೆಪಿ ನಾಯಕ, ಲೋಹಪುರುಷ ಎಲ್.ಕೆ. ಅಡ್ವಾಣಿ ಅವರು ಬಹುತೇಕ ಚುನಾವಣಾ ರಾಜಕೀಯದಿಂದ ನೇಪಥ್ಯಕ್ಕೆ ಸರಿದಿದ್ದಾರೆ. ಗುರುವಾರ ಘೋಷಣೆಯಾದ 184 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಅಡ್ವಾಣಿ ಹೆಸರು ಮಾಯವಾಗಿದ್ದು, ಅವರು ಸತತ 5 ಸಲ ಪ್ರತಿನಿಧಿಸಿದ್ದ ಗುಜರಾತ್‌ನ ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸ್ಪರ್ಧಿಸಲಿದ್ದಾರೆ. 

ಇದೇ ವೇಳೆ, ಮುಂಬರುವ ಪಟ್ಟಿಗಳಲ್ಲೂ ಅಡ್ವಾಣಿ ಅವರ ಹೆಸರು ಬೇರೆ ಕ್ಷೇತ್ರಗಳಲ್ಲಿ ಕಾಣಿಸುವ ಸಾಧ್ಯತೆ ಇಲ್ಲ ಎಂದು ತಿಳಿದುಬಂದಿದೆ. ಗಾಂಧಿನಗರದಿಂದ ಶಾ ಸ್ಪರ್ಧೆ ಮಾಡುವ ವಿಷಯವನ್ನು ಹಿರಿಯ ಬಿಜೆಪಿ ಮುಖಂಡ ಜಗತ್‌ಪ್ರಕಾಶ್ ನಡ್ಡಾ ಅವರು ಸುದ್ದಿಗೋಷ್ಠಿಯಲ್ಲಿ ಪ್ರಟಿಸಿದರು. ಈ ಬಾರಿ ಅಡ್ವಾಣಿ ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರಿಗೆ, ಚುನಾವಣೆಗೆ ಸ್ಪರ್ಧಿಸುವ ವಿಷಯವನ್ನು ಅವರ ವಿವೇಚನೆಗೆ  ಬಿಡಲಾಗಿತ್ತು. 

ಪಾಲಿಕೆಯಿಂದ ಉಪಪ್ರಧಾನಿವರೆಗೆ
1967 ರಲ್ಲಿ ದಿಲ್ಲಿ ಮಹಾನಗರಪಾಲಿಕೆ ಮುಖ್ಯಸ್ಥರಾದ ಅಡ್ವಾಣಿ, 1989 ರಲ್ಲಿ ಮೊದಲ ಬಾರಿ ಸಂಸದರಾದರು. ಬಳಿಕ 3 ಬಾರಿ ದಿಲ್ಲಿಯಿಂದ ಆಯ್ಕೆಯಾದರು. 1998 ರಲ್ಲಿ  ಕ್ಷೇತ್ರ ಬದಲಿಸಿದ ಅವರು, ಗುಜರಾತ್‌ನ ಗಾಂಧಿನಗರ ಕ್ಷೇತ್ರದಿಂದ ಸತತವಾಗಿ 5 ಬಾರಿ ಆಯ್ಕೆಯಾದರು. 2014 ರಲ್ಲಿ ಪ್ರಧಾನಿಯಾಗಿ ಮೋದಿ ಆಯ್ಕೆ ಬಳಿಕ ಹೆಚ್ಚಾಗಿ ರಾಜಕೀಯ ರಂಗದಲ್ಲಿ ಕಾಣಿಸಿಕೊಳ್ಳದೇ ಮೌನ ವಹಿಸಿದ್ದರು. ವಯೋ ಕಾರಣ ನೀಡಿ ಹಿಂದಕ್ಕೆ ಅಡ್ವಾಣಿ ಅವರಿಗೆ ಈಗ 91 ವರ್ಷ ವಯಸ್ಸು. ಇತ್ತೀಚೆಗೆ ಅವರನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿ ಮಾಡಿದಾಗ ಖುದ್ದು ಅಡ್ವಾಣಿ ಅವರು ಸ್ಪರ್ಧೆಗೆ ನಿರಾಸಕ್ತಿ ವ್ಯಕ್ತಪಡಿಸಿದರು. 

ಆಗ ಶಾ  ಅವರು, ‘ನಿಮ್ಮ ಪುತ್ರ ಅಥವಾ ಪುತ್ರಿಯನ್ನು ನಿಲ್ಲಿಸಿ’ ಎಂದು ಕೇಳಿದಾಗ ಅಡ್ವಾಣಿ ಅದಕ್ಕೂ ನಿರಾಕರಿಸಿದರು ಎಂದು ಮೂಲಗಳು ಹೇಳಿವೆ. ವಿಶೇಷವೆಂದರೆ ೯೮ರಲ್ಲಿ ಅಡ್ವಾಣಿ ಗಾಂಧಿನಗರದಿಂದ ಆಯ್ಕೆಯಾದಾಗ ಶಾ ಅವರು, ಅಡ್ವಾಣಿಯ ಚುನಾವಣಾ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. 

ಗುಜರಾತ್ ನಾಯಕರದ್ದೂ ನಿರಾಸಕ್ತಿ 91 ವರ್ಷಕ್ಕೆ ಕಾಲಿಟ್ಟಿರುವ ಅಡ್ವಾಣಿ ಅವರನ್ನು ಮತ್ತೆ ಗಾಂಧೀನಗರದಿಂದ ಕಣಕ್ಕೆ ಇಳಿಸಲು ಗುಜರಾತ್ ಬಿಜೆಪಿ ನಾಯಕರಿಗೂ ಒಲವಿರಲಿಲ್ಲ. ಇತ್ತೀಚೆಗೆ ಕೇಂದ್ರದ ವೀಕ್ಷಕರು ಗಾಂಧೀನಗರಕ್ಕೆ ಭೇಟಿ ನೀಡಿದಾಗ ಈ ಅಭಿಪ್ರಾಯ ವ್ಯಕ್ತವಾಗಿತ್ತು. ಜೊತೆಗೆ ಅಮಿತ್ ಶಾ ಕಣಕ್ಕೆ ಇಳಿದರೆ ಒಳಿತು. ಇದು ರಾಜ್ಯದಲ್ಲಿ ಕುಂದಿರುವ ಬಿಜೆಪಿ ಚೇತರಿಸಿಕೊಳ್ಳಲು ನೆರವಾಗಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಈ ಎಲ್ಲಾ ಅಂಶಗಳು ಅಡ್ವಾಣಿ ಬದಲಿಗೆ ಶಾಗೆ ಟಿಕೆಟ್ ದೊರಕಿಸಿಕೊಟ್ಟಿತು.


5 ಸಲ ಅಡ್ವಾಣಿ ಗೆದ್ದಿದ್ದ ಗಾಂಧಿನಗರ ಟಿಕೆಟ್ ಅಮಿತ್ ಶಾ ಪಾಲು

ವಯಸ್ಸಿನ ಕಾರಣ ನೀಡಿ ಸ್ಪರ್ಧಿಸಲು ನಿರುತ್ಸಾಹ 

ಪುತ್ರ, ಪುತ್ರಿಗೂ ಟಿಕೆಟ್ ಬೇಡವೆಂದ ಹಿರಿಯ ನಾಯಕ

ರಥಯಾತ್ರೆ ಮಾಡಿ ಬಿಜೆಪಿ ಗೆಲ್ಲಿಸಿದ್ದರು 

1984 ರಲ್ಲಿ ಕೇವಲ 2 ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿ, 90 ರ ದಶಕದ ಅಂತ್ಯಭಾಗದಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸಾಥಿಯಾಗಿ ಪ್ರಮುಖ ಪಾತ್ರ ವಹಿಸಿದ್ದರು. ಅಡ್ವಾಣಿ ಕೈಗೊಂಡ ರಾಮರಥ ಯಾತ್ರೆಯು ಬಿಜೆಪಿಯನ್ನು ಜನಪ್ರಿಯಗೊಳಿಸಿತು. 

1964 ದಿಲ್ಲಿ ಪಾಲಿಕೆ ಮುಖ್ಯ ಸ್ಥರಾಗಿ ಚುನಾವಣಾ ರಾಜಕೀಯ ಆರಂಭ 1989 ಅಡ್ವಾಣಿ ಲೋಕಸಭೆಗೆ ಮೊದಲ ಸಲ ಆಯ್ಕೆ ಆಗಿದ್ದು 1989ರಲ್ಲಿ
3/5 ದಿಲ್ಲಿಯಿಂದ 3 ಬಾರಿ, ಗಾಂಧಿನಗರದಿಂದ 5 ಬಾರಿ ಲೋಕಸಭೆಗೆ 2002 ರಿಂದ 2004 ರ ವರೆಗೆ ಎರಡು ವರ್ಷ ಉಪ ಪ್ರಧಾನಿ 51 ಅಡ್ವಾಣಿ
ಅವರು ಚುನಾವಣಾ ರಾಜಕೀಯದಲ್ಲಿದ್ದುದು 51 ವರ್ಷ

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ

Follow Us:
Download App:
  • android
  • ios