ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಡ್ರಾಮಾ ಕಂಪನಿಯವರು, ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನ ಪಡೆದಿದ್ದರೂ ಗಬರಿಕೊಂಡು ತಿನ್ನಲು ಒಂದಾಗಿ ರಾಜ್ಯದಲ್ಲಿ ಸರ್ಕಾರ ರಚಿಸಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ನಟ ಜಗ್ಗೇಶ್ ಲೇವಡಿ ಮಾಡಿದ್ದಾರೆ. ಗುರುವಾರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರ ಚುನಾವಣಾ ಪ್ರಚಾರ ನಡೆಸಿದ ಅವರು, ಗಂಡ-ಹೆಂಡತಿ, ಲವ್ವರ್ಸ್ ಸಹ ನಾಚುವಂತೆ ತಬ್ಬಿಕೊಂಡಿದ್ದಾರೆ. ಭ್ರಷ್ಟಾಚಾರ ನಡೆಸಲು ಗ್ರೇಟ್ ಲವ್ವರ್ಸ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಈಗ ರಾಜ್ಯದಲ್ಲಿ ಚೆನ್ನಾಗಿ ತಿನ್ನುತ್ತಿರುವ ಈ ಕಾಂಗ್ರೆಸ್-ಜೆಡಿಎಸ್ ಜೋಡಿ ದೇಶದಲ್ಲೆಲ್ಲಾ ಮಹಾಗಠಬಂಧನ್ ಹೆಸರಿನಲ್ಲಿ ಕೆಲಸವಿಲ್ಲದ  ನಾಯಕರಿಗೆಲ್ಲ ತರಬೇತಿ ಕೊಡುತ್ತಿದೆ. ಕರ್ನಾಟಕದಲ್ಲಿ ನಾವು ತಿನ್ನುತ್ತಿ ದ್ದೇವೆ. ನೀವು ದೇಶದಲ್ಲೆಲ್ಲಾ ತಿನ್ನಿ ಎಂದು ಇವರಿಬ್ಬರೂ ಪಾಠ ಹೇಳಿಕೊಡುತ್ತಿದ್ದಾರೆ ಎಂದು ಛೇಡಿಸಿದರು. 

ಕ್ಷೇತ್ರದ ಅಭ್ಯರ್ಥಿ ಸದಾನಂದಗೌಡ ಅವರು ಮಾತನಾಡಿ, ಮೊದಲೆಲ್ಲಾ ಭರವಸೆ, ಪ್ರಣಾಳಿಕೆ ಆಧಾರದಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಅಭಿವೃದ್ಧಿ ವಿಚಾರದಲ್ಲಿ ಚುನಾವಣೆ ನಡೆ ಯುತ್ತಿದೆ. ಇದು ಬದಲಾವಣೆಯ ಮುನ್ಸೂಚನೆ.

ಸಶಕ್ತ ಭಾರತಕ್ಕಾಗಿ ಮೋದಿ ಅವರು ಶ್ರಮಿಸುತ್ತಿದ್ದಾರೆ. ಇದಕ್ಕೆ ನೀವೆಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಸದಾನಂದ ಗೌಡ ಅವರು ಕ್ಷೇತ್ರದ ಸುಂಕದ ಕಟ್ಟೆ ಪೈಪ್‌ಲೈನ್ ರಸ್ತೆಯ ಹೊಯ್ಸಳ ನಗರದಿಂದ ತೆರೆದ ಜೀಪ್‌ನಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮತ ಯಾಚಿಸಿದರು. ನಂತರ ಹೆಗ್ಗನಹಳ್ಳಿ, ರಾಜಗೋಪಾಲನಗರ, ಪೀಣ್ಯಾ ಕೈಗಾರಿಕಾ ಪ್ರದೇಶ, ಚೊಕ್ಕಸಂದ್ರ, ದಾಸರಹಳ್ಳಿ, ಮಲ್ಲಸಂದ್ರ, ಶೆಟ್ಟಿಹಳ್ಳಿ, ಸೋಮಶೆಟ್ಟಿಹಳ್ಳಿ, ಚಿಕ್ಕಬಾಣಾವರ ಮತ್ತಿತರ ಕಡೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪ್ರಚಾರ ಕೈಗೊಂಡರು. ಈ ವೇಳೆ ಮಾಜಿ ಶಾಸಕರಾದ ಎಸ್.ಮುನಿರಾಜು, ಡಿ.ಎಸ್.ವೀರಯ್ಯ, ಸುರೇಶ್, ಸರ್ವಮಂಗಳಾ ನಾಗರಾಜ್, ನರಸಿಂಹ ನಾಯಕ್, ಲೋಕೇಶ್
ಇನ್ನಿತರರಿದ್ದರು. 

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.