ಸಕ್ಕರೆ ನಾಡು ಮಂಡ್ಯ ಲೋಕಸಭಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತ್ತೊಂದೆಡೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಈ ನಡುವೆ ಜಿಲ್ಲಾಡಳಿ ಸಿಎಂ ಕುಮಾರಸ್ವಾಮಿ ಆಣತಿಯಂತೆ ನಡೆದುಕೊಳ್ಳುತ್ತಿದೆ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇದರ ಮಧ್ಯೆ ಮಂಡ್ಯ ಜಿಲ್ಲೆ ಸಿಇಓ ಎತ್ತಂಗಡಿಯಾಗಿದೆ.
ಮಂಡ್ಯ, [ಏ.01]: ಮಂಡ್ಯ ಜಿಲ್ಲೆಯ ಕಾರ್ಯನಿರ್ವಾಹಕ ಅಧಿಕಾರಿ [ಸಿಇಓ] ಯಾಲಕ್ಕಿ ಗೌಡ ಅವರನ್ನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಇಂದು [ಸೋಮವಾರ] ಆದೇಶ ಹೊರಡಿಸಿದೆ.
ಮಂಡ್ಯ ಜಿಲ್ಲಾ ಪಂಚಾಯತ್ ನೂತನ ಸಿಇಓ ಆಗಿ ಹಿರಿಯ ಐಎಎಸ್ ಅಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರನ್ನು ನೇಮಿಸಲಾಗಿದೆ.
ಆರೋಪಗಳ ಸುರಿಮಳೆ, ಮಂಡ್ಯ ಡಿಸಿ ಮಂಜುಶ್ರೀ ಟ್ರಾನ್ಸ್‌ಫರ್ ಆಗ್ತಾರಾ..?
ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ರನ್ನು ಗೆಲ್ಲಿಸಲು ಇಡೀ ಜಿಲ್ಲಾಡಳಿತ ಟೊಂಕಕಟ್ಟಿ ನಿಂತಿದೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗಂಭೀರ ಆರೋಪ ಮಾಡಿದ್ದರು. ಈ ಬೆಳವಣಿಗೆಗಳ ನಡುವೆ ಮಂಡ್ಯ ಸಿಇಓ ಯಾಲಕ್ಕಿ ಗೌಡರನ್ನ ವರ್ಗಾವಣೆ ಮಾಡಿರುವುದು ಕುತೂಹಲ ಮೂಡಿಸಿದೆ.
ಮತ್ತೊಂದೆಡೆ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಅವರನ್ನು ವರ್ಗಾವಣೆ ಮಾಡಬೇಕೆಂದು ಈಗಾಗಲೇ ಸುಮಲತಾ ಚುನಾವಣಾ ಏಜೆಂಟ್ ಮದನ್ ಅವರು ಪ್ರಾದೇಶಿಕ ಚುನಾವಣೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ನಮಗೆ 99 % ನ್ಯಾಯ ಸಿಗಲ್ಲ: ಸಿಎಂ ಮೇಲೆ ಸುಮಲತಾ ಆಕ್ರೋಶ
ಮಾರ್ಚ್ 30ರಂದು ಹಾಸನ ಜಿಲ್ಲಾಧಿಕಾರಿ ಸೇರಿದಂತೆ ಬೆಳಗಾವಿ ಹಾಗೂ ವಿಜಯಪುರ ಜಿಲ್ಲಾಧಿಕಾರಿಗಳನ್ನ ವರ್ಗಾವಣೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.
