ಕಲಬುರಗಿ : ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆದಿರುವ ಉಮೇಶ್ ಜಾದವ್ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹೊಗಳುವ ಮೂಲಕ ಜಾಣ ನಡೆ ಪ್ರದರ್ಶಿಸಿದ್ದಾರೆ. 

ಕಲ್ಬುರ್ಗಿ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಮೇಶ್ ಜಾದವ್, ಶಾಸಕ ಸ್ಥಾನಕ್ಕೆ ತಮ್ಮ ರಾಜೀನಾಮೆ ಅಂಗೀಕಾರ ಆಗದಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 

ಸಿದ್ದರಾಮಯ್ಯ ಕುತಂತ್ರಿ ರಾಜಕಾರಣಿ ಅಲ್ಲ.‌ ಸಾಮಾಜಿಕ ನ್ಯಾಯ ಕೊಡುವ ನಾಯಕ. ಯಾರೆ ತಪ್ಪು ಮಾಡಿದರು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ತಮ್ಮ ಮಗ ತಪ್ಪು ಮಾಡಿದರೂ ಅವರು ಇದೇ ನಿಲುವು  ತೆಗೆದುಕೊಳ್ಳುತ್ತಿದ್ದರು.  ಅವರು ಕುತಂತ್ರಿಯಾಗಿದ್ದರೆ ನನಗೆ ಏಳು ಪುಟಗಳ ನೋಟಿಸ್ ನೀಡಿ ಉತ್ತರ ನಿರೀಕ್ಷಿಸುತ್ತಿರಲಿಲ್ಲ ಎಂದರು. 

ಈ ಮೂಲಕ ಸಿದ್ದರಾಮಯ್ಯ ಅವರನ್ನು ಬಲವಾಗಿ ಸಮರ್ಥಿಸಿಕೊಂಡು ಚುನಾವಣೆ ಹೊಸ್ತಿಲಲ್ಲಿ ಜಾದವ್ ಜಾಣ ನಡೆ ಪ್ರದರ್ಶಿಸಿದರು.

ಸ್ಪೀಕರ್ ಒಳ್ಳೆಯವರು

ಇನ್ನು ಇದೇ ವೇಳೆ  ಸ್ಪೀಕರ ರಮೇಶ್ ಕುಮಾರ್ ಅವರನ್ನೂ ಹೊಗಳಿದ್ದು, ಆದಷ್ಟು ಬೇಗ ನನ್ನ ರಾಜೀನಾಮೆ ಇತ್ಯರ್ಥ ಮಾಡುತ್ತಾರೆ ಎನ್ನುವ ಭರವಸೆ ಇದೆ. ಒಂದು ವೇಳೆ ರಾಜೀನಾಮೆ ಇತ್ಯರ್ಥವಾಗದೇ ಇದ್ದಲ್ಲಿಯೂ ಚುನಾವಣೆಗೆ ಸ್ಪರ್ಧೆ ಮಾಡುವ ಅವಕಾಶವಿದೆ ಎಂದು  ಹೇಳಿದರು. 

ಬಿಜೆಪಿಯಲ್ಲಿ ಮಾತುಕೊಟ್ಟಂತೆ ನಡೆಯುತ್ತೆ

ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ‌ ಮೊದಲ ಪಟ್ಟಿಯಲ್ಲಿಯೇ ತಮ್ಮ ಹೆಸರು ಘೋಷಣೆಯಾಗಿರುವ ಕುರಿತು ಸಂತಸ ವ್ಯಕ್ತಪಡಿಸಿದ ಉಮೇಶ್ ಜಾದವ್, ಬಿಜೆಪಿಯಲ್ಲಿ ಮಾತು ಕೊಟ್ಟರೆ ಅದರಂತೆ ನಡೆಯುತ್ತದೆ. ಇದರಿಂದ ಕಲ್ಬುರ್ಗಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದರು.

ಖರ್ಗೆ ಸಾಬ್ ಶಾಂತಿಯುತವಾಗಿ ಚುನಾವಣೆ ಮಾಡೋಣ

ಇದೇ ವೇಳೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾತನಾಡಿದ ಜಾದವ್,  ಸರ್ಕಾರಿ ಯಂತ್ರ ದುರುಪಯೋಗ ಮಾಡಿಕೊಂಡು ಚುನಾವಣೆ ನಡೆಸುತ್ತಾರೆ ಎಂಬ ಆತಂಕ ನನ್ನ ಕಾರ್ಯಕರ್ತರಲ್ಲಿ ಇದೆ. ಈ ಹಿಂದಿನ ಚುನಾವಣೆಗಳಲ್ಲಿ ಪೊಲೀಸರೇ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಹಣ ಹಂಚುತ್ತಾರೆ ಎನ್ನುವ ಮಾತೂ ಕೇಳಿ ಬಂದಿವೆ. ಅದೇನೇ ಇರಲಿ ಈ ಬಾರಿ ಯಾವುದೇ ಗದ್ದಲ ಗೊಂದಲಕ್ಕೆ ಅವಕಾಶ ಕೊಡದೆ. ಪ್ರಾಮಾಣಿಕ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಿ ಜನರ ತೀರ್ಪನ್ನ ಸ್ವಾಗತಿಸೋಣ ಎಂದು ಉಮೇಶ್ ಜಾದವ್ ಅವರು ಎದುರಾಳಿ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಮನವಿ ಮಾಡಿಕೊಂಡರು..

ಸಂಭ್ರಮಾಚರಣೆ :  ಇನ್ನು ಉಮೇಶ್ ಜಾಧವ್ ಗೆ ಬಿಜೆಪಿ ಟಿಕೆಟ್ ದೊರೆತಿರುವ ಬಗ್ಗೆ ಕಲಬುರಗಿಯಲ್ಲಿ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಜಾದವ್ ಮನೆ ಎದುರು ಜಮಾಯಿಸಿದ ಹತ್ತಾರು ಲಂಬಾಣಿ ಮಹಿಳೆಯರು, ಸಾಂಪ್ರದಾಯಿಕ ಹಾಡು ನೃತ್ಯದ ಮೂಲಕ ಉಮೇಶ ಜಾಧವ ರನ್ನ ಸುತ್ತುವರೆದು ಸಂಭ್ರಮ ಆಚರಿಸಿದರು. 

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ