ನಾಗ್ಪುರ್(ಏ.11): ಮತದಾನದ ಮಹತ್ವ ಸಾರಲು ಚುನಾವಣಾ ಆಯೋಗ ದೇಶದ ಗಣ್ಯ ವ್ಯಕ್ತಿಗಳನ್ನು ಬಳಸಿಕೊಳ್ಳುವುದುಂಟು. ಗಣ್ಯ ವ್ಯಕ್ತಿಗಳು ಅಂದ್ಮೇಲೆ ಅವರಿಗೊಂದು ಗತ್ತು, ದೌಲತ್ತು ಎಲ್ಲಾ ಇರಲೇಬೇಕಲ್ಲ. ಅದರಲ್ಲೂ ಸೆಲಿಬ್ರಿಟಿಗಳ ವ್ಯಕ್ತಿತ್ವ ಮತದಾರನ ಮನ ಮುಟ್ಟುವಲ್ಲಿ ಯಶಸ್ವಿಯಾಗುವುದು ಶತಸಿದ್ಧ.

ಅದರಂತೆ ನಾಗ್ಪುರ್‌ದಲ್ಲಿ ಗಣ್ಯರೊಬ್ಬರು ಮತ ಚಲಾಯಿಸಿ ಉಳಿದವರಿಗೂ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. ನಾಗ್ಪುರ್‌ದಲ್ಲಿರುವ ಗಣ್ಯ ವ್ಯಕ್ತಿ ಯಾರು ಅಂತೀರಾ?.

ವಿಶ್ವದ ಅತೀ ಕುಬ್ಜ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹಾರಾಷ್ಟ್ರದ ನಾಗ್ಪುರ್‌ದ ಜ್ಯೋತಿ ಆಮ್ಗೆ , ಇಂದು ಮತದಾನ ಪ್ರಕಿಯೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

2019ರ ಲೋಕಸಭೆ ಚುನಾವಣೆಗೆ ಮೊದಲ ಹಂತದ ಚುನಾವಣೆಗೆ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಅದರಂತೆ ನಾಗ್ಪುರ್‌ದ ಮತಗಟ್ಟೆಯಲ್ಲಿ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ ಆಮ್ಗೆ ಮತದಾನ ಮಾಡಿದರು.

ಈ ವೇಳೆ ಜ್ಯೀತಿ ಅವರಿಗೆ ಅವರ ಕುಟುಂಬಸ್ಥರು ಸಾಥ್ ನೀಡಿದ್ದು, ಮತಗಟ್ಟೆಯಲ್ಲಿ ಜ್ಯೋತಿ ಅವರನ್ನು ಕಂಡ ಜನ ಸಂತೋಷದಿಂದ ಅವರನ್ನು ಬರಮಾಡಿಕೊಂಡರು.

ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜ್ಯೋತಿ, ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಮತದಾನ ಮಾಡುವುದು ತುಂಬ ಅವಶ್ಯವಾಗಿದ್ದು, ಎಲ್ಲರೂ ತಪ್ಪದೇ ಮತ ಚಲಾಯಿಸುವಂತೆ ಮನವಿ ಮಾಡಿದರು.

ಇನ್ನು ನಾಗ್ಪುರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿತಿನ್ ಗಡ್ಕರಿ ಕೂಡ ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದರು. ಅಲ್ಲದೇ ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಿದರು.

ದೇಶದಲ್ಲಿ ಏ.11ರಿಂದ ಮೇ19ರವರೆಗೆ ಏಳು ಹಂತಗಳಲ್ಲಿ ಮತದಾನ, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಕ್ಷೇತ್ರ, ಕರ್ನಾಟಕದಲ್ಲಿ 28.