ಬೆಂಗಳೂರು, (ಮಾ.11): 17ನೇ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಅಭ್ಯರ್ಥಿಗಳ ಆಯ್ಕೆ ಕಸರತ್ತು ಜೋರಾಗಿದೆ.

"

ಅದರಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೀಟು ಹಂಚಿಕೆಯಲ್ಲಿ ಹಗ್ಗ ಜಗ್ಗಾಟ ಮುಂದುವರಿದಿದೆ.  ಅದರಲ್ಲೂ ತಮ್ಮ ಮೊಮ್ಮಗನಿಗೆ ಹಾಸನ ಕ್ಷೇತ್ರ ಧಾರೆ ಎರೆದುಕೊಟ್ಟ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಯಾವ ಕ್ಷೇತ್ರದಿಂದ ಕಣಕ್ಕಳಿಯುತ್ತಾರೆ ಎನ್ನುವುದು ಮಾತ್ರ ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

‘ಮೊಮ್ಮಕ್ಕಳ ಕರಕೊಂಡು ಸಂಸತ್ ಗೆ ಹೊರಟ ಗೌಡರು’

ಈ ಬಗ್ಗೆ ಜೆಡಿಎಸ್ ವರಿಷ್ಠ ಎಚ್​.ಡಿ. ದೇವೇಗೌಡ ನೇತೃತ್ವದಲ್ಲಿ ಇಂದು (ಸೋಮವಾರ) ಬೆಂಗಳೂರಿನ  ಜೆ.ಪಿ.ಭವನದಲ್ಲಿ ಲೋಕಸಭಾ ಚುನಾವಣೆ ಮತ್ತು ಸೀಟು ಹಂಚಿಕೆ ಕುರಿತು ಪಕ್ಷದ ಸಭೆ ನಡೆಯಿತು.

ಸಭೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕುರಿತು ಮಾತುಕತೆ ನಡೆಯಿತು. ಈ ವೇಳೆ  ದೇವೇಗೌಡ್ರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೆ ಒಳ್ಳೆಯದು ಎಂಬ ಮಾತುಗಳನ್ನಾಡಿದ್ದಾರೆ. ಆದ್ರೆ ಈ ಬಗ್ಗೆ ದೇವೇಗೌಡ ಅವರು ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

ಇನ್ನು ಸಭೆಯ ನಂತರ ಮಾತನಾಡಿದ ಎಚ್.ಡಿ.ದೇವೇಗೌಡ, ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ವಿಚಾರವಾಗಿ ಇನ್ನು ಅಂತಿಮವಾಗಿಲ್ಲ. ಮೈಸೂರು ಅಂತಾರೆ, ತುಮಕೂರು ಅಂತಾರೆ. ಆದರೆ ಇನ್ನು ಯಾವುದನ್ನು ಫೈನಲ್ ಮಾಡಿಲ್ಲ. ಅದಕ್ಕೆ ಇನ್ನು ಸಮಯ ಇದೆ ಎಂದು ಹೇಳಿದರು.

ಮೂಲಗಳ ಪ್ರಕಾರ ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆ ದೇವೇಗೌಡರಿಗೆ ಆಸಕ್ತಿ ಇದೆ ಎನ್ನುವುದು ತಿಳಿದುಬಂದಿದೆ. ಒಂದು ವೇಳೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿದರೆ, ಬಿಜೆಪಿಯ ಹಾಲಿ ಸಂಸದ ಸದಾನಂದಗೌಡ ಹಾಗೂ ಮೈತ್ರಿ ಅಭ್ಯರ್ಥಿ ದೇವೇಗೌಡ ನಡುವೆ ನೆಕ್ ಟು ನೆಕ್ ಫೈಟ್ ಆಗಲಿದೆ.