ಬೆಂಗಳೂರು, (ಮಾ.18): ಮಂಡ್ಯ ಮಹಾಯುದ್ಧಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸುಮಲತಾ ಅಂಬರೀಶ್ ತೀರ್ಮಾನಿಸಿದ್ದಾರೆ.

ಇಂದು [ಸೋಮವಾರ] ಸುದ್ದಿಗೋಷ್ಠಿಯಲ್ಲಿ ಸುಮಲತಾ ಅಂಬರೀಶ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, ಇವರಿಗೆ ಚಿತ್ರರಂಗದ ಬೆಂಬಲ  ಸಿಕ್ಕಿದೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್, ಸುಮಲತಾಗೆ ಪರ ನಿಂತಿರೋದು ದೋಸ್ತಿ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ.  

ಸುಮಲತಾ ಪರ ಪ್ರಚಾರಕ್ಕೆ ಒಂದಾದ ಯಶ್, ದರ್ಶನ್

ಸುಮಲತಾ ಪರ ಬೆಂಬಲಕ್ಕೆ ದರ್ಶನ್, ಯಶ್ ನಿಂತಿರೋದಕ್ಕೆ ಜೆಡಿಎಸ್ ಕಾರ್ಯಕರ್ತರು ಗರಂ ಆಗಿದ್ದಾರೆ. ರಾಜಾಹುಲಿ ಬಂದರೂ ಅಷ್ಟೇ, ಐರಾವತ ಬಂದರೂ ಅಷ್ಟೇ. ಮಂಡ್ಯ ಚಕ್ರವ್ಯೂಹ ಭೇದಿಸೋದು ಅಭಿಮನ್ಯು ನಿಖಿಲ್ ಎಂದು ಫೇಸ್ ಬುಕ್ ನಲ್ಲಿ ಜೆಡಿಎಸ್ ಕಾರ್ಯಕರ್ತರು ಪೋಸ್ಟ್ ಹಾಕಿದ್ದಾರೆ.

ಕಾವೇರಿ ಗಲಾಟೆ ಸಮಯದಲ್ಲಿ ಮಲಗಿದ್ದ ನಟರನ್ನ ಮಂಡ್ಯ ರಾಜಕೀಯಕ್ಕೆ ಎದ್ದು ಬರುವಂತೆ ಮಾಡಿದವರಿಗೆ ಧನ್ಯವಾದ ಅಂತ ಸುಮಲತಾ ಅಂಬರೀಶ್ ಕಾಲೆಳೆದಿದ್ದಾರೆ.

ಇಡೀ ಇಂಡಸ್ಟ್ರಿ ಬಂದರೂ  ಮಂಡ್ಯ ಚಕ್ರವ್ಯೂಹ ಭೇದಿಸೋದು ಅಭಿಮನ್ಯು ನಿಖಿಲ್ ಕುಮಾರಸ್ವಾಮಿ ಎಂದು ದರ್ಶನ್, ಯಶ್ ವಿರುದ್ಧ ಫೇಸ್ ಬುಕ್ ಪೋಸ್ಟ್ ಗಳಲ್ಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಮಂಡ್ಯದಲ್ಲಿ ತಾತ್ಕಾಲಿಕವಾಗಿ ಅಭ್ಯರ್ಥಿಯನ್ನು ಹೆಸರಿಸಲು ಬಿಜೆಪಿ ತೀರ್ಮಾನಿಸಿದೆ. ಆದರೆ ನಾಮಪತ್ರ ಸಲ್ಲಿಸೋ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ.