ಭಾರತದಲ್ಲಿವೆ 2293 ರಾಜಕೀಯ ಪಕ್ಷಗಳು!| ಜನವರಿಯಿಂದ ಮಾರ್ಚ್ ವರೆಗೆ 149 ಹೊಸ ರಾಜಕೀಯ ಪಕ್ಷಗಳು ನೋಂದಣಿ
ನವದೆಹಲಿ[ಮಾ.18]: ಚುನಾವಣೆ ಸಮೀಪಿಸುತ್ತಿದ್ದಂತೆ ದಿನಕ್ಕೊಂದು ರಾಜಕೀಯ ಪಕ್ಷಗಳು ಹುಟ್ಟಿಕೊಳ್ಳುವ ನಮ್ಮ ದೇಶದಲ್ಲಿ ಸದ್ಯ ಒಟ್ಟಾರೆ 2293 ರಾಜಕೀಯ ಪಕ್ಷಗಳಿವೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಅದರಲ್ಲೂ, ಈ ವರ್ಷದ ಜನವರಿಯಿಂದ ಮಾಚ್‌ರ್‍ವರೆಗೆ 149 ಹೊಸ ರಾಜಕೀಯ ಪಕ್ಷಗಳು ನೋಂದಣಿ ಮಾಡಿಕೊಂಡಿವೆ.
ಚುನಾವಣಾ ಆಯೋಗವು 2019ರ ಲೋಕಸಭೆ ಚುನಾವಣೆಗಾಗಿ ದೇಶದಲ್ಲಿರುವ ರಾಜಕೀಯ ಪಕ್ಷಗಳ ಬಗೆಗಿನ ದತ್ತಾಂಶಗಳನ್ನು ಅಪ್‌ಡೇಟ್ ಮಾಡಿದೆ. ಅದರಲ್ಲಿ, ದೇಶದಲ್ಲಿ ಒಟ್ಟು 2293 ರಾಜಕೀಯ ಪಕ್ಷಗಳಿರುವುದು, ಕಳೆದ ಮೂರು ತಿಂಗಳಲ್ಲಿ 149 ರಾಜಕೀಯ ಪಕ್ಷಗಳು ಹೊಸತಾಗಿ ನೋಂದಣಿ ಮಾಡಿಸಿಕೊಂಡಿರುವುದು, ದೇಶದಲ್ಲಿ ಒಟ್ಟು ಏಳು ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳಿರುವುದು ಹಾಗೂ 59 ಮಾನ್ಯತೆ ಪಡೆದ ರಾಜ್ಯಮಟ್ಟದ ಪಕ್ಷಗಳಿರುವುದು ತಿಳಿದುಬಂದಿದೆ.
ಇತ್ತೀಚೆಗೆ ಹೊಸತಾಗಿ ನೋಂದಾಯಿತವಾಗಿರುವ ರಾಜಕೀಯ ಪಕ್ಷಗಳಲ್ಲಿ ಬಹುಜನ್ ಆಜಾದ್ ಪಾರ್ಟಿ, ಸಾಮೂಹಿಕ್ ಏಕ್ತಾ ಪಾರ್ಟಿ, ರಾಷ್ಟ್ರೀಯ ಸಾಫ್ ನೀತಿ ಪಾರ್ಟಿ, ಸಬ್ಸಿ ಬಡಿ ಪಾರ್ಟಿ, ಭರೋಸಾ ಪಾರ್ಟಿ, ನ್ಯೂ ಜನರೇಷನ್ ಪೀಪಲ್ಸ್ ಪಾರ್ಟಿ ಮುಂತಾದ ಹೆಸರಿನ ಪಕ್ಷಗಳು ಸೇರಿವೆ. ನೋಂದಣಿ ಮಾಡಿಸಿಕೊಂಡ, ಆದರೆ ಮಾನ್ಯತೆ ಪಡೆದಿಲ್ಲದ ಪಕ್ಷಗಳಿಗೆ ಅವುಗಳದೇ ಚಿಹ್ನೆ ಲಭಿಸುವುದಿಲ್ಲ. ಚುನಾವಣಾ ಆಯೋಗದ ಬಳಿಯಿರುವ 84 ಚಿಹ್ನೆಗಳ ಪೈಕಿ ಯಾವುದಾದರೂ ಒಂದನ್ನು ಅವು ಆಯ್ಕೆ ಮಾಡಿಕೊಳ್ಳಬೇಕು.
