ತುಮಕೂರು[ಮಾ.20]: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಗಂಗೆ ಶಾಪ ಇದೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಅವರು ಸ್ಪರ್ಧಿಸಿದರೆ ಸೋಲು ಗ್ಯಾರಂಟಿ ಎಂದು ಬಿಜೆಪಿ ಮಾಜಿ ಶಾಸಕ ಸುರೇಶ್‌ ಗೌಡ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಕೊಡದೆ ದೇವೇಗೌಡರು ವಂಚಿಸಿದ್ದಾರೆ. ಅದು ಈಗಲೂ ಮುಂದುವರಿದಿದೆ. ಹೀಗಾಗಿ ದೇವೇಗೌಡರಿಗೆ ಗಂಗೆ ಶಾಪವಿದೆ. ಗಂಗೆ ಶಾಪ ಈಗಲೂ ಬೆಂಬಿಡದೇ ಕಾಡುತ್ತಿದೆ. ಈ ಗಂಗೆ ಶಾಪದ ಬಗ್ಗೆ ಈಗಾಗಲೇ ಜ್ಯೋತಿಷಿಗಳು ದೇವೇಗೌಡರಿಗೆ ಎಚ್ಚರಿಕೆ ನೀಡಿದ್ದಾರೆ.

ಅದು ದೇವೇಗೌಡರಿಗೂ ಗೊತ್ತಿದೆ. ಜೊತೆಗೆ ರೈತರ ಕಣ್ಣೀರಿನ ಶಾಪ ಕೂಡ ಗೌಡರಿಗೆ ತಟ್ಟದೇ ಬಿಡುವುದಿಲ್ಲ. ‘9’ ಅವರಿಗೆ ಅಪಶಕುನ ಎಂಬುದು ಈಗಾಗಲೇ ಸಾಬೀತಾಗಿದೆ (ಈ ಹಿಂದೆ ದೇವೇಗೌಡರು 1989 ಮತ್ತು 1999ರಲ್ಲಿ ಕ್ರಮವಾಗಿ ಕನಕಪುರ, ಹಾಸನ ಕ್ಷೇತ್ರಗಳಲ್ಲಿ ಸೋಲುಂಡಿದ್ದರು) ಎಂದರು.

ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಲ್ಲಿ ನಾನೂ ಒಬ್ಬ. ಸೋಷಿಯಲ್‌ ಮೀಡಿಯಾ ಸರ್ವೆಯಲ್ಲಿ ನನ್ನ ಪರ ಒಲವಿದೆ. ನಾನು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಶಿಷ್ಯ ಆಗಿರೋದ್ರಿಂದ ಟಿಕೆಟ್‌ ಲಭಿಸುವ ವಿಶ್ವಾಸವಿದ್ದು, ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುವುದಾಗಿ ಸುರೇಶ್‌ಗೌಡ ತಿಳಿಸಿದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ