ಭುವನೇಶ್ವರ್(ಏ.18): ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆ ನಡೆಸಿದ ಚುನಾವಣಾ ಕರ್ತವ್ಯ ನಿರತ ಕರ್ನಾಟಕದ ಐಎಎಸ್ ಅಧಿಕಾರಿಯೋರ್ವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಒಡಿಶಾದ ಸಂಬಲ್ ಪುರ್ದ ಚುನಾವಣಾ ವೀಕ್ಷಕರಾಗಿ ನೇಮಕಗೊಂಡಿದ್ದ ಕರ್ನಾಟಕ ಕೆಡರ್ ಅಧಿಕಾರಿ ಮೊಹ್ಮದ್ ಮೊಯ್ಸಿನ್, ಪ್ರಧಾನಿ  ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆಗೆ ಮುಂದಾಗಿದ್ದರು ಎನ್ನಲಾಗಿದೆ.

ಚುನವಣಾ ಆಯೋಗದ ಆದೇಶದ ಪ್ರಕಾರ SPG ಸ್ತರದ ಭದ್ರತೆಯಲ್ಲಿರುವ ಗಣ್ಯರ ಹೆಲಿಕಾಪ್ಟರ್ ತಪಾಸಣೆ ನಡೆಸುವ ಮೊದಲು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಮೊಯ್ಸಿನ್ ಈ ನಿಯಮಗಳನ್ನು ಪಾಲಿಸದೇ ಹೆಲಿಕಾಪ್ಟರ್ ತಪಾಸಣೆಗೆ ಮುಂದಾಗಿದ್ದರು ಎನ್ನಲಾಗಿದೆ.

ಮೊಹ್ಮದ್ ಮೊಯ್ಸಿನ್ ನಿಯಮ ಉಲ್ಲಂಘಿಸಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಚುನಾವಣಾ ಆಯೋಗ ಕಾರ್ಯದರ್ಶಿ ರಾಕೇಶ್ ಕುಮಾರ್  ಆದೇಶ ಹೊರಡಿಸಿದ್ದಾರೆ.

ಅಲ್ಲದೇ ಮುಂದಿನ ಆದೇಶ ಬರುವವರೆಗೂ ಜಿಲ್ಲಾ ಕೇಂದ್ರದಲ್ಲೇ ಇರುವಂತೆ ಮೊಯ್ಸಿನ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ಮಾಹಿತಿ ನೀಡಿವೆ.

ಒಡಿಶಾದ ಮುಖ್ಯ ಚುನಾವಣಾ ಅಧಿಕಾರಿ ಸುರೇಂದ್ರ ಕುಮಾರ್ ಸಲ್ಲಿಸಿದ ವರದಿಯ ಪ್ರಕಾರ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮೊಹ್ಸಿನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.