ಭುವನೇಶ್ವರ: ಒಡಿಶಾದಲ್ಲಿ ಲೋಕಸಭಾ ಚುನಾವಣಾ ವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕ ಮೂಲದ ಐಎಎಸ್‌ ಅಧಿಕಾರಿ ಮೊಹಮ್ಮದ್‌ ಮೊಹ್ಸೀನ್‌ ಅವರನ್ನು ಕರ್ತವ್ಯ ಲೋಪದ ಆಧಾರದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಸಂಬಾಲ್‌ಪುರ ಜಿಲ್ಲೆಯಲ್ಲಿ ವೀಕ್ಷಕರಾಗಿ ನೇಮಕಗೊಂಡಿದ್ದ ಮೊಹ್ಸೀನ್‌ ಅವರ ನೇತೃತ್ವದ ತಂಡವು, ಏ.16ರಂದು ಎಸ್‌ಪಿಜಿ ಭದ್ರತೆ ಹೊಂದಿದ್ದ ರಾಜಕೀಯ ನಾಯಕರೊಬ್ಬರ ಹೆಲಿಕಾಪ್ಟರ್‌ ಅನ್ನು ತಪಾಸಣೆಗೆ ಗುರಿಪಡಿಸಿದ್ದರು. ಇದು ಎಸ್‌ಪಿಜಿ ಭದ್ರತೆ ಹೊಂದಿದ್ದ ನಾಯಕರಿಗೆ ನೀಡಿದ ಭದ್ರತಾ ಮಾರ್ಗಸೂಚಿಗಳಿಗೆ ವಿರುದ್ಧವಾಗಿತ್ತು. 

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಘಟನೆ ಕುರಿತು ಚುನಾವಣಾ ಆಯೋಗಕ್ಕೆ ವರದಿ ನೀಡಿದ್ದರು. ಈ ವರದಿ ಆಧರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಮೊಹ್ಸೀನ್‌ ಅವರನ್ನು ಅಮಾನತು ಮಾಡಲಾಗಿದೆ ಎಂದು ಆಯೋಗ ಪ್ರಕಟಣೆ ಹೊರಡಿಸಿದೆ.