ಹಾಸನ, [ಏ.29]: ಲೋಕಸಭೆ ಚುನಾವಣೆ ವೇಳೆ ಅಕ್ರಮ ಮತದಾನ ಮಾಡಿರೋ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವ ಎಚ್.ಡಿ.ರೇವಣ್ಣ, ಜಿಲ್ಲಾ ಚುನಾವಣಾಧಿಕಾರಿ ಇದೇ ರೀತಿ ದೂರು ನೀಡಿ, ಎಂದು ಒತ್ತಡ ಹೇರಿದ್ದರಿಂದ ಬಿಜೆಪಿಯವರು ದೂರು ನೀಡಿದ್ದಾರೆಂದು ಆರೋಪಿಸಿದ್ದಾರೆ.

ಸಚಿವ ರೇವಣ್ಣ ಮತ ಹಾಕಿದ್ದ ಬೂತ್‌ ಸಿಬ್ಬಂದಿ ಸಸ್ಪೆಂಡ್‌

ಲೋಕಸಭೆ ಚುನಾವಣೆ ವೇಳೆ ಅಕ್ರಮ ಮತದಾನ ಮಾಡಿಸಿರೋ ಆರೋಪ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ  ಕೇಳಿ ಬಂದಿತ್ತು. ಈ ಕುರಿತು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗದ ಅನುಮತಿ ಇಲ್ಲದೆ ಯಾಕೆ ಹಿಂದಿನ ಡಿಸಿಯನ್ನ ಮನೆಯಲ್ಲಿ ಇಟ್ಟುಕೊಂಡಿದ್ರು. ಈ ಹಿಂದಿನ ಡಿಸಿ ರೋಹಿಣಿ ಸಿಂಧೂರಿ, ಹಾಲಿ ಡಿಸಿ ಪ್ರಿಯಾಂಕ ಅವರನ್ನ ಭೇಟಿ ಮಾಡುವ ಉದ್ದೇಶ ಏನು ಎಂದು ಪ್ರಶ್ನಿಸಿದರು. 

ಇನ್ನು ವರ್ಗಾವಣೆಯಾದ ಡಿಸಿಯನ್ನ,  ಹಾಲಿ ಡಿಸಿ ಪ್ರಿಯಾಂಕ  ಭೇಟಿಯಾಗೋ ಅಗತ್ಯವೇನಿತ್ತು..? ಈ ಡಿಸಿಗೆ ಯಾರಿಂದ ನಿರ್ದೇಶನ ಬರುತ್ತಿತ್ತು ಹೇಳಲಿ. ಈ ಬಗ್ಗೆ ಸಮಗ್ರ ತನಿಖೆ ಆಗಲೇ ಬೇಕು ಎಂದು ಸಚಿವ ರೇವಣ್ಣ ಒತ್ತಾಯಿಸಿದರು. 

ರೋಹಿಣಿ ಸಿಂಧೂರಿ ವರ್ಗಾವಣೆ, ಹಾಸನದಲ್ಲಿ ಸಂಭ್ರಮಾಚರಣೆ

ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಅರೋಪಿಸುವ ಬಿಜೆಪಿ, ಚುನಾವಣೆ ಮುಗಿದು ಆರು ದಿನದ ಬಳಿಕ ದೂರು ನೀಡಿರುವುದರ ಉದ್ದೇಶ ಏನು?.  ಒಂದು ವೇಳೆ ಕಳ್ಳತನದ ಮತದಾನ ಮಾಡೋದಾಗಿದ್ರೆ, ಆ ಮತಗಟ್ಟೆಯಲ್ಲಿ ಶೇಕಡಾ 100ರಷ್ಟು ಮತದಾನವಾಗಬೇಕಿತ್ತು.  ಆದರೆ ಮತಗಟ್ಟೆಯಲ್ಲಿ ಆಗಿರೋದು ಕೇವಲ ಶೇ. 86 ಮತದಾನ.  ಇನ್ನು ಇದೇ ಜಿಲ್ಲಾ ಚುನಾವಣಾಧಿಕಾರಿ ಇದ್ರೆ ಮತ ಎಣಿಕೆ‌ ಸರಿಯಾಗಿ ನಡೆಯೋದಿಲ್ಲ. 

ಹಿಂದಿನ ಡಿಸಿ ಕುಮ್ಮಕ್ಕಿನಿಂದಾಗಿ ಈಗಿನ ಡಿಸಿ [ಪ್ರಿಯಾಂಕಾ ಮೇರಿ ಫ್ರಾನ್ಸಿಸ್] ಈ ತರ ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಡಿಸಿ ರೋಹಿಣಿ ಸಿಂಧೂರಿಯನ್ನ ಈಗಿನ ಡಿಸಿ ಸರ್ಕಾರಿ ಮನೆಯಲ್ಲಿ ಅರ್ಜಿ ಬರೆಯೋಕೆ ಇಟ್ಟಿದ್ರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇವರು ಒಂದು ಪಕ್ಷದ ಹಿಡಿತದಲ್ಲಿ ಕೆಲಸ ಮಾಡುತ್ತಿದ್ದಾರೆ.  ಕೂಡಲೇ ಈ ಅಧಿಕಾರಿ ಬದಲಾಯಿಸಿ ಎಂದು ರಾಜ್ಯ ಚುನಾವಣಾ ಆಯುಕ್ತರಿಗೆ ರೇವಣ್ಣ ಒತ್ತಾಯಿಸಿದರು.

2017 ಜುಲೈ 14 ರಿಂದ ಹಾಸನ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ರೋಹಿಣಿ ಸಿಂಧೂರಿ ಅವರನ್ನು  ಬೆಂಗಳೂರಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದಶಿಯಾನ್ನಾಗಿ ನೇಮಿಸಿ ಫೆಬ್ರವರಿ.22 2019ರಂದು ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು.