ಬೆಂಗಳೂರು[ಮಾ.13]: ತಮ್ಮ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ಮತ್ತು ಮೈತ್ರಿ ಪಕ್ಷ ಕಾಂಗ್ರೆಸ್‌ನ ಲ್ಲಿಯೇ ಭಿನ್ನಧ್ವನಿ ಮೂಡಿರುವ ಕಾರಣ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಯಾವ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬುದು ಮತ್ತಷ್ಟು ನಿಗೂಢ ವಾಗಿದೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಭಾವ ಇರುವ ಕ್ಷೇತ್ರಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದ್ದು, ಕೈ ಹೈಕಮಾಂಡ್‌ಗೆ ಒತ್ತಡ ಹೇರುವ ಕಾರ‌್ಯತಂತ್ರ ದಲ್ಲಿ ತೊಡಗಿದೆ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಮೈಸೂರು ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಜೆಡಿಎಸ್ ಹವಣಿಸುತ್ತಿದೆ.

ಇದೇ ಕಾರಣಕ್ಕಾಗಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರೇ ಕಣಕ್ಕಿಳಿಯುವ ಇಂಗಿತದಲ್ಲಿದ್ದಾರೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪೆಟ್ಟು ಕೊಡುವುದು ಮತ್ತು ಪಕ್ಷದ ವರ್ಚಸ್ಸನ್ನು ವಿಸ್ತರಿಸಿಕೊಳ್ಳುವುದು ರಾಜಕೀಯ ತಂತ್ರಗಾರಿಕೆಯಾಗಿದೆ. ಮೈಸೂರು ಮಾತ್ರವಲ್ಲದೇ, ಬೆಂಗಳೂರು ಉತ್ತರ ದಿಂದಲೂ ದೇವೇಗೌಡ ಸ್ಪರ್ಧಿಸುವ ಬಗ್ಗೆ ವದಂತಿಗಳು ಕೇಳಿ ಬರುತ್ತಿವೆ. ಮೈಸೂರು, ಬೆಂಗಳೂರು ಉತ್ತರ ಯಾವುದೇ ಕ್ಷೇತ್ರದಲ್ಲೂ ಗೌಡರು ಸ್ಪರ್ಧಿಸಿದರೂ ಪಕ್ಷ ನೆಲೆಯೂರಿಸಲು ಅನುಕೂಲವಾಗುತ್ತದೆ.ಹೀಗಾಗಿ ಸ್ಥಳೀಯ ಮುಖಂಡರು ದೇವೇಗೌಡರ ಬಳಿ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ.

ಆದರೆ, ದೇವೇಗೌಡ ನಡೆ ಮಾತ್ರ ಇನ್ನೂ ನಿಗೂಢವಾಗಿದೆ. ಬೆಂಗಳೂರು ಉತ್ತರ ಮತ್ತು ಮೈಸೂರು ಕ್ಷೇತ್ರದಲ್ಲಿ ಜೆಡಿಎಸ್‌ನ ಬಲಾಬಲ ಹೇಗಿದೆ ಎಂಬುದರ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಪ್ರತಿಯೊಂದರ ಬಗ್ಗೆಯೂ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿರುವ ಅವರು ಕುಟುಂಬದ ಹಿತಾಸಕ್ತಿಯನ್ನು ಮನದಲ್ಲಿಟ್ಟು ಕೊಂಡು ನಡೆ ಇಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಪಕ್ಷದ ಮುಖಂಡರು ಏನೇ ಲೆಕ್ಕಾಚಾರ ಹಾಕಿದರೂ ದೇವೇಗೌಡರ ಮನದಾಳವನ್ನು ಅರಿಯಲು ಸಾಧ್ಯವಿಲ್ಲ. ಅವರ ರಾಜಕೀಯ ಲೆಕ್ಕಾಚಾರವೇ ಬೇರೆಯಾಗಿರುತ್ತದೆ.

ಮೈಸೂರು ಮತ್ತು ಬೆಂಗಳೂರು ಉತ್ತರದಿಂದ ಸ್ಪರ್ಧಿಸುವಂತೆ ಒತ್ತಡಗಳು ಬರುತ್ತಿವೆ. ಕಾಂಗ್ರೆಸ್‌ಗೂ ಈ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಮನವಿ ಮಾಡಲಾಗಿದೆ. ಮೈಸೂರು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟರೆ ತುಮಕೂರಿನ ಮೇಲೆ ದೇವೇಗೌಡರು ಕಣ್ಣಿಟ್ಟಿದ್ದಾರೆ. ತುಮಕೂರಿನಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಮೈಸೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಎರಡು ಕಾರಣಗಳನ್ನು ದೇವೇಗೌಡರು ಹೊಂದಿದ್ದಾರೆ. ರಾಜಕೀಯವಾಗಿ ವಿರೋಧಿಯಾಗಿರುವ ಸಿದ್ದರಾಮಯ್ಯ ಅವರನ್ನು ಮಣಿಸುವುದು ಮತ್ತು ಪಕ್ಷವನ್ನು ಮೈಸೂರು ಮತ್ತು ಕೊಡಗು ಜಿಲ್ಲೆಗೂ ವಿಸ್ತರಣೆ ಮಾಡಬಹುದು ಎಂಬುದು ಲೆಕ್ಕಾಚಾರ ಆಗಿದೆ.

ಮೈತ್ರಿ ಸರ್ಕಾರದ ಆಡಳಿತ ಇರುವ ಕಾರಣ ಕಾಂಗ್ರೆಸ್ ಹೈಕಮಾಂಡ್‌ನ ತೀರ್ಮಾನವನ್ನು ಸಿದ್ದರಾಮಯ್ಯ ವಿರೋಧಿಸುವುದಿಲ್ಲ ಹಾಗೂ ದೇವೇಗೌಡರನ್ನು ಸೋಲಿಸುವ ಪ್ರಯತ್ನಕ್ಕೆ ಮುಂದಾಗುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರಿಗೂ ಸಹ ಸಿದ್ದರಾಮಯ್ಯ ಮೇಲೆ ಮುನಿಸು ಇದ್ದೇ ಇದೆ. ಮೈಸೂರಿನಲ್ಲಿ ತಮ್ಮದೇ ಆದ ಪ್ರಾಬಲ್ಯ ಹೊಂದಿರುವ ವಿಶ್ವನಾಥ್ ಅವರು ಜೆಡಿಎಸ್‌ಗೆ ಕ್ಷೇತ್ರ ಲಭ್ಯವಾದರೆ ಇನ್ನಿಲ್ಲದ ಶ್ರಮ ಹಾಕಲಿದ್ದಾರೆ ಎಂದು ಹೇಳಲಾಗಿದೆ.